IPL: ಮುಂದಿನ ವರ್ಷ ರೋಹಿತ್ ಶರ್ಮ ಚೆನ್ನೈ ಸೂಪರ್ ಕಿಂಗ್ಸ್ ಗೆ?

Update: 2024-04-13 16:49 GMT

ರೋಹಿತ್ ಶರ್ಮ | PC :X \ @IPL

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮುಂದಿನ ವರ್ಷದ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ ಆಟಗಾರ ರೋಹಿತ್ ಶರ್ಮ ಚೆನ್ನೈ ಸೂಪರ್ ಕಿಂಗ್ಸ್ ಗೆ ಸೇರ್ಪಡೆಗೊಳ್ಳಬಹುದು ಎಂಬ ಇಂಗಿತವನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ ಆಡಳಿತವು ನಾಯಕತ್ವ ಸ್ಥಾನದಿಂದ ರೋಹಿತ್ ಶರ್ಮರನ್ನು ಕೆಳಗಿಳಿಸಿ, ಆ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನು ತಂದಿತ್ತು. ಅಂದಿನಿಂದ ಮುಂಬೈ ಇಂಡಿಯನ್ಸ್ ನಲ್ಲಿ ರೋಹಿತ್‍ರ ಭವಿಷ್ಯದ ಬಗ್ಗೆ ಹಲವು ಬಗೆಯ ಊಹಾಪೋಹಗಳು ಹಬ್ಬಿವೆ. ಈ ಬೆಳವಣಿಗೆಯಿಂದ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದರ ಮುಂದುವರಿದ ಭಾಗವಾಗಿ, ಈ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಆಡಿದಲ್ಲೆಲ್ಲ ತಂಡದ ಅಭಿಮಾನಿಗಳು ಅವರನ್ನು ಅಪಹಾಸ್ಯಗೈಯುತ್ತಿದ್ದಾರೆ.

ಐಪಿಎಲ್ 2025ರ ಮಹಾ ಹರಾಜಿಗೆ ಮುನ್ನ, ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮರನ್ನು ಬಿಡುಗಡೆಗೊಳಿಸಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಆಗ, ಶರ್ಮ ಚೆನ್ನೈ ಸೂಪರ್ ಕಿಂಗ್ಸ್‍ನತ್ತ ಪ್ರಯಾಣ ಬೆಳೆಸಬಹುದು ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.

“ಅವರು (ರೋಹಿತ್ ಶರ್ಮ) ಚೆನ್ನೈಗೆ ಹೋಗುತ್ತಾರಾ? ಧೋನಿಯ ಸ್ಥಾನವನ್ನು ವಹಿಸಿಕೊಳ್ಳುತ್ತಾರಾ? ಈ ವರ್ಷ ಆ ಸ್ಥಾನವನ್ನು (ನಾಯಕತ್ವ) ಋತುರಾಜ್ ಗಾಯಕ್ವಾಡ್ ವಹಿಸಿಕೊಂಡಿದ್ದಾರೆ. ಬಹುಶಃ ಆ ಸ್ಥಾನವನ್ನು ಮುಂದಿನ ವರ್ಷಕ್ಕೆ ರೋಹಿತ್‍ಗಾಗಿ ಕಾದಿಟ್ಟಿರುವ ಒಂದು ವ್ಯವಸ್ಥೆ ಅದಾಗಿರಬಹುದು. ನಾನು ಅವರನ್ನು ಚೆನ್ನೈನಲ್ಲಿ ನೋಡುತ್ತೇನೆ’’ ಎಂದು ‘ಬಿಯರ್‍ಬೈಸೆಪ್ಸ್’ ಪಾಡ್‍ಕಾಸ್ಟ್‍ನಲ್ಲಿ ವಾನ್ ಹೇಳಿದ್ದಾರೆ.

ಆದರೆ, ರೋಹಿತ್ ಶರ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರುವುದು ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಆಘಾತಕಾರಿಯಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News