27 ವರ್ಷಗಳ ಬಳಿಕ ಮುಂಬೈಗೆ ಇರಾನಿ ಕಪ್
ಲಕ್ನೋ : ತನುಷ್ ಕೋಟ್ಯಾನ್‌ರ ಅಜೇಯ ಶತಕದ ನೆರವಿನಿಂದ ಮುಂಬೈ ತಂಡವು ಶನಿವಾರ ತನ್ನ 15ನೇ ಇರಾನಿ ಕಪ್ ಪ್ರಶಸ್ತಿಯನ್ನು ಗೆದ್ದಿದೆ. ಅದು ಪಂದ್ಯದ ಐದನೇ ದಿನದಂದು ಶೇಷ ಭಾರತ ತಂಡವನ್ನು ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಸೋಲಿಸಿದೆ.
ಇದರೊಂದಿಗೆ, ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡವು 27 ವರ್ಷಗಳ ಬಳಿಕ ಪ್ರತಿಷ್ಠಿತ ಇರಾನಿ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಮುಂಬೈ ಅತ್ಯಧಿಕ ಬಾರಿ ಇರಾನಿ ಕಪ್ ಪ್ರಶಸ್ತಿಗಳನ್ನು ಗೆದ್ದಿರುವ ರಣಜಿ ಟ್ರೋಫಿ ತಂಡವಾಗಿದೆ. 1997-98ರ ಋತುವಿನ ಬಳಿಕ, ಮುಂಬೈ ಎಂಟು ಬಾರಿ ಫೈನಲ್ ಪ್ರವೇಶಿಸಿದರೂ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಲಕ್ನೋದ ಏಕಾನ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದ ಮೇಲೆ, ರಹಾನೆ ನೇತೃತ್ವದ ತಂಡವು ಮೊದಲ ದಿನವೇ ತನ್ನ ಹಿಡಿತವನ್ನು ಸಾಧಿಸಿತ್ತು. ಅದು ತನ್ನ ಮೊದಲ ಇನಿಂಗ್ಸ್‌ನಲ್ಲಿ 537 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಆ ಇನಿಂಗ್ಸ್‌ನಲ್ಲಿ ಸರ್ಫರಾಝ್ ಖಾನ್ 222 ರನ್‌ಗಳನ್ನು ಬಾರಿಸಿ ಅಜೇಯರಾಗಿ ಉಳಿದಿದ್ದರು. ಅದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ನಾಲ್ಕನೇ ದ್ವಿಶತಕವಾಗಿದೆ.
ಅದಕ್ಕೆ ಉತ್ತರವಾಗಿ ಶೇಷ ಭಾರತವು ಧೀರೋದಾತ್ತ ಪ್ರದರ್ಶನವನ್ನೇ ನೀಡಿತು. ಅಭಿಮನ್ಯು ಈಶ್ವರನ್ 191 ರನ್‌ಗಳನ್ನು ಗಳಿಸಿ ತಂಡಕ್ಕೆ ಆಸರೆಯೊದಗಿಸಿದರು.
ಆದರೆ, ಮುಂಬೈ ತಂಡದ ವೇಗಿಗಳು ಮತ್ತು ಸ್ಪಿನ್ನರ್‌ಗಳು ಶೇಷ ಭಾರತದ ಮೊದಲ ಇನಿಂಗ್ಸನ್ನು 416ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಮುಂಬೈ 121 ರನ್‌ಗಳ ಮಹತ್ವದ ಮೊದಲ ಇನಿಂಗ್ಸ್ ಮುನ್ನಡೆಯನ್ನು ಪಡೆಯಿತು. ಆ ಮುನ್ನಡೆಯೇ ಅಂತಿಮವಾಗಿ ಮುಂಬೈ ತಂಡದ ಗೆಲುವನ್ನು ನಿರ್ಧರಿಸಿತು.
ಎರಡನೇ ಇನಿಂಗ್ಸ್‌ನಲ್ಲಿ ಮುಂಬೈ ಅಗ್ರ ಕ್ರಮಾಂಕದ ಕುಸಿತಕ್ಕೆ ಒಳಗಾಯಿತು. ಆದರೆ, ತನುಷ್ ಕೋಟ್ಯಾನ್ ಶನಿವಾರ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು, ಪಂದ್ಯದ ಫಲಿತಾಂಶವನ್ನು ನಿರ್ಧರಿಸುವ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ದೇಶಿ ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ಶತಕ ಬಾರಿಸಿದರು. ಅವರು 150 ಎಸೆತಗಳಲ್ಲಿ 114 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದರು.
ಮುನ್ನಾ ದಿನದ ಮೊತ್ತವಾದ ಆರು ವಿಕೆಟ್‌ಗಳ ನಷ್ಟಕ್ಕೆ 153 ರನ್‌ನಿಂದ ತನ್ನ ದ್ವಿತೀಯ ಇನಿಂಗ್ಸನ್ನು ಶನಿವಾರ ಮುಂದುವರಿಸಿದ ಮುಂಬೈ, 8 ವಿಕೆಟ್‌ಗಳ ನಷ್ಟಕ್ಕೆ 329 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಆ ಮೂಲಕ ಅವರು ಒಟ್ಟಾರೆ 450 ರನ್‌ಗಳ ಮುನ್ನಡೆ ಪಡೆಯಿತು.
ಉಳಿದ ಒಂದು ಅವಧಿಯ ಆಟದಲ್ಲಿ 451 ರನ್ ಮೊತ್ತವನ್ನು ಬೆನ್ನಟ್ಟುವುದು ಅಸಾಧ್ಯ ಎನ್ನುವುದನ್ನು ಮನಗಂಡ ಶೇಷ ಭಾರತ ನಾಯಕ ಋತುರಾಜ್ ಗಾಯಕ್ವಾಡ್ ಪಂದ್ಯವನ್ನು ಡ್ರಾಗೊಳಿಸಲು ಒಪ್ಪಿದರು.
ಆಫ್ ಸ್ಪಿನ್ನರ್ ಸಾರಾಂಶ್ ಜೈನ್ 121 ರನ್‌ಗಳನ್ನು ನೀಡಿ 6 ವಿಕೆಟ್‌ಗಳನ್ನು ಉರುಳಿಸಿದರು.
ಮೊದಲ ಇನಿಂಗ್ಸ್‌ನಲ್ಲಿ 222 ರನ್ ಗಳಿಸಿ ಅಜೇಯರಾಗಿ ಉಳಿದ ಸರ್ಫರಾಝ್ ಖಾನ್‌ರನ್ನು ಪಂದ್ಯಶ್ರೇಷ್ಠ ಎಂಬುದಾಗಿ ಘೋಷಿಸಲಾಯಿತು.
ಸಂಕ್ಷಿಪ್ತ ಸ್ಕೋರ್
ಮುಂಬೈ: 537 ಆಲೌಟ್ ಮತ್ತು 329/8 ಡಿಕ್ಲೇರ್ಡ್ (ತನುಷ್ ಕೋಟ್ಯಾನ್ 114 ಅಜೇಯ, ಮೋಹಿತ್ ಅವಸ್ಥಿ 51 ಅಜೇಯ, ಪೃಥ್ವಿ ಶಾ 76; ಸಾರಾಂಶ್ ಜೈನ್ 6/21
ಶೇಷ ಭಾರತ: 416 ಆಲೌಟ್