ಭಾರತ ವಿರುದ್ಧ ಟೆಸ್ಟ್ ಸರಣಿ | ಕೇನ್ ವಿಲಿಯಮ್ಸನ್ ಆಡುವುದು ಅನುಮಾನ

Update: 2024-10-09 16:50 GMT

PC : PTI

ಬೆಲ್ಜಿಯಮ್ : ಶ್ರೀಲಂಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಗಾಯದ ಸಮಸ್ಯೆಗೆ ಒಳಗಾಗಿರುವ ನ್ಯೂಝಿಲ್ಯಾಂಡ್‌ನ ಅಗ್ರ ಕ್ರಮಾಂಕದ ಬ್ಯಾಟರ್ ಕೇನ್ ವಿಲಿಯಮ್ಸನ್ ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡುವುದು ಅನುಮಾನ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ಬುಧವಾರ ತಿಳಿಸಿದೆ.

ಕಿವೀಸ್ ತಂಡದ ಮಾಜಿ ನಾಯಕ ವಿಲಿಯಮ್ಸನ್ ಶುಕ್ರವಾರ ತಂಡದೊಂದಿಗೆ ಭಾರತಕ್ಕೆ ಪ್ರಯಾಣಿಸುವುದಿಲ್ಲ. ಅದರ ಬದಲಿಗೆ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಲು ಸ್ವದೇಶದಲ್ಲಿ ಉಳಿದುಕೊಳ್ಳಲಿದ್ದಾರೆ. ವಿಲಿಯಮ್ಸನ್‌ಗೆ ವಿಶ್ರಾಂತಿ ನೀಡುವುದು ಉತ್ತಮ ಎಂಬ ಸಲಹೆಯನ್ನು ಸ್ವೀಕರಿಸಿದ್ದೇವೆ ಎಂದು ಆಯ್ಕೆಗಾರ ಸ್ಯಾಮ್ ವೆಲ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

17 ಸದಸ್ಯರ ತಂಡದಲ್ಲಿ ವಿಲಿಯಮ್ಸನ್ ಬದಲಿಗೆ ಹೊಸ ಮುಖ ಮಾರ್ಕ್ ಚಾಪ್‌ಮನ್‌ರನ್ನು ಸೇರಿಸಿಕೊಳ್ಳಲಾಗಿದೆ.

ಶ್ರೀಲಂಕಾದ ವಿರುದ್ಧ 0-2 ಅಂತರದಿಂದ ಟೆಸ್ಟ್ ಸರಣಿಯನ್ನು ಸೋತಿರುವ ನ್ಯೂಝಿಲ್ಯಾಂಡ್ ತಂಡಕ್ಕೆ ವಿಲಿಯಮ್ಸನ್ ಅನುಪಸ್ಥಿತಿಯು ತೀವ್ರ ಹಿನ್ನಡೆಯಾಗಿದೆ.

ಉಪ ಖಂಡದಲ್ಲಿ ನಡೆದಿರುವ ಟೆಸ್ಟ್ ಸರಣಿಗಳಲ್ಲಿ ನ್ಯೂಝಿಲ್ಯಾಂಡ್ ತಂಡವು ಈ ತನಕ ಭಾರತ ತಂಡವನ್ನು ಸೋಲಿಸಿಲ್ಲ. 2021ರ ತನ್ನ ಕೊನೆಯ ಕ್ರಿಕೆಟ್ ಪ್ರವಾಸದ ವೇಳೆ 0-1ರಿಂದ ಸೋತಿತ್ತು.

ಇತ್ತೀಚೆಗೆ ಶ್ರೀಲಂಕಾದಲ್ಲಿ ಹಿನ್ನಡೆ ಅನುಭವಿಸಿದ ನಂತರ ಟಿಮ್ ಸೌಥಿ ರಾಜೀನಾಮೆ ನೀಡಿದ್ದರು. ಹೀಗಾಗಿ ಮುಂಬರುವ ಭಾರತದ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆರಂಭಿಕ ಬ್ಯಾಟರ್ ಟಾಮ್ ಲ್ಯಾಥಮ್ ಕಿವೀಸ್ ತಂಡದ ನೇತೃತ್ವವಹಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಇತ್ತೀಚೆಗೆ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದ್ದ ಭಾರತವು ಸತತ 18ನೇ ಟೆಸ್ಟ್ ಸರಣಿಯನ್ನು ಗೆದ್ದುಕೊಂಡು ದಾಖಲೆ ನಿರ್ಮಿಸಿತ್ತು.

ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲು ಆಲ್‌ರೌಂಡರ್ ಮೈಕಲ್ ಬ್ರೆಸ್‌ವೆಲ್ ಭಾರತಕ್ಕೆ ಪ್ರಯಾಣಿಸಲಿದ್ದಾರೆ. ಆ ನಂತರ ವೈಯಕ್ತಿಕ ಕಾರಣಕ್ಕೆ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಬ್ರೆಸ್‌ವೆಲ್ ಬದಲಿಗೆ ಭಾರತ ಮೂಲದ ಲೆಗ್ ಸ್ಪಿನ್ನರ್ ಇಶ್ ಸೋಧಿ ಪುಣೆ ಹಾಗೂ ಮುಂಬೈನಲ್ಲಿ ನಡೆಯಲಿರುವ ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಆಡಲಿದ್ದಾರೆ.

ನ್ಯೂಝಿಲ್ಯಾಂಡ್ ಟೆಸ್ಟ್ ತಂಡ

ಟಾಮ್ ಲ್ಯಾಥಮ್(ನಾಯಕ), ಟಾಮ್ ಬ್ಲಂಡೆಲ್, ಮೈಕಲ್ ಬ್ರೆಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಒ ರೂರ್ಕ್, ಅಜಾಝ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್, ಇಶ್ ಸೋಧಿ, ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News