ಪಂದ್ಯದ ಮಧ್ಯೆಯೇ ಕೊಹ್ಲಿ- ಗಂಭೀರ್ ಆಲಿಂಗನ

Update: 2024-03-30 03:24 GMT

Photo: twitter.com/kaustats

ಹೊಸದಿಲ್ಲಿ: ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಸಂಬಂಧ ವಿಶಿಷ್ಟ ಇತಿಹಾಸ ಹೊಂದಿದೆ. 2023ರ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಜತೆಗಿದ್ದ ಗಂಭೀರ್ ಹಾಗೂ ಆರ್ ಸಿಬಿಯ ವಿರಾಟ್ ಕೊಹ್ಲಿ ನಡುವೆ ಪಂದ್ಯದ ಬಳಿಕ ಮೈದಾನದಲ್ಲೇ ಮಾತಿನ ಚಕಮಕಿ ನಡೆದ ಚಿತ್ರ ವೈರಲ್ ಆಗಿತ್ತು. ಇದಕ್ಕಾಗಿ ಇಬ್ಬರಿಗೂ ದೊಡ್ಡ ಮೊತ್ತದ ದಂಡ ವಿಧಿಸಲಾಗಿತ್ತು. ಮೈದಾನದಲ್ಲಿ ಇಬ್ಬರ ನಡುವೆ ವಾಗ್ವಾದ ಅದೇ ಮೊದಲಾಗಿರಲಿಲ್ಲ.

ಆದರೆ ಶುಕ್ರವಾರದ ಆರ್ ಸಿಬಿ-ಕೆಕೆಆರ್ ಪಂದ್ಯದಲ್ಲಿ ಇದಕ್ಕೆ ತದ್ವಿರುದ್ಧ ಪ್ರಹಸನ ನಡೆಯಿತು. ಸ್ಟ್ರಾಟಜಿಕ್ ಟೈಮ್ ಔಟ್ ವೇಳೆ ಗೌತಮ್ ಗಂಭೀರ್ ಆರ್ ಸಿಬಿ ಸ್ಟಾರ್ ಬಳಿ ಬಂದು ಅವರನ್ನು ಆಲಂಗಿಸಿಕೊಂಡು ಅಚ್ಚರಿ ಮೂಡಿಸಿದರು.

ವಿರಾಟ್ ಕೊಹ್ಲಿಯವರ ಆಕರ್ಷಕ ಅರ್ಧಶತಕದ ಸಂದರ್ಭದಲ್ಲಿ ಗಂಭೀರ್, ಮಾಜಿ ನಾಯಕನನ್ನು ಅಭಿನಂದಿಸಿದರು.

ಪಂದ್ಯಕ್ಕೆ ಮುನ್ನ ಐಪಿಎಲ್ ಅಧಿಕೃತ ಪ್ರಸಾರದಾರರು, ಆರ್ ಸಿಬಿ ಬಗೆಗೆ ಕುತೂಹಲಕಾರಿ ಮಾಹಿತಿಯನ್ನು ನೀಡಿದ ಗಂಭೀರ್ ಅವರ ಹಳೆಯ ವಿಡಿಯೊವನ್ನು ಶೇರ್ ಮಾಡಿದರು.

"ಪ್ರತಿ ಬಾರಿಯೂ, ಬಹುಶಃ ಕನಸಿನಲ್ಲಿ ಕೂಡಾ ನಾನು ಸೋಲಿಸಲು ಬಯಸುವ ತಂಡವೆಂದರೆ ಆರ್ಸಿಬಿ. ಬಹುಶಃ ಎರಡನೇ ಅತ್ಯಂತ ಹೈಪ್ರೊಫೈಲ್ ತಂಡ. ಅದರ ಮಾಲೀಕರು ಮತ್ತು ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎ.ಬಿ.ಡಿವಿಲಿಯರ್ಸ್ ನಂತಹ ದಿಗ್ಗಜರನ್ನು ಹೊಂದಿದ ಖ್ಯಾತಿಗಾಗಿ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಏನನ್ನೂ ಗೆಲ್ಲದಿದ್ದರೂ, ಅವರು ಎಲ್ಲವನ್ನೂ ಗೆದ್ದಂತೆ ಭಾವಿಸುತ್ತಾರೆ. ಆ ಬಗೆಯ ಪ್ರವೃತ್ತಿ. ಅದನ್ನು ನಾನು ಒಪ್ಪುವುದಿಲ್ಲ. ಕೆಕೆಆರ್ ನ ಮೂರು ಅತ್ಯುತ್ತಮ ಗೆಲುವುಗಳೆಂದರೆ ಅದು ಆರ್ಸಿಬಿ ವಿರುದ್ಧ" ಎಂದು ಗಂಭೀರ್ ಹೇಳುತ್ತಿರುವ ವಿಡಿಯೊ ಶೇರ್ ಆಗಿತ್ತು.

ಈ ಮಧ್ಯೆ ಕೆಕೆಆರ್ ಆಲ್ ರೌಂಡರ್ ಆಂಡ್ರೆ ರಸೆಲ್ ಅವರು ಆರ್ ಸಿಬಿಯ ಗುಣಗಾನ ಮಾಡಿ, ಆರ್ ಸಿಬಿ ಶ್ರೇಷ್ಠ ಮ್ಯಾಚ್ ವಿನ್ನರ್ಸ್ ಎಂದು ಬಣ್ಣಿಸಿದ್ದರು. ಆರ್ ಸಿಬಿಯನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ರಸೆಲ್, ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಬೆಂಗಳೂರು ಫ್ರಾಂಚೈಸಿಯ ತಂಡ ಒಳ್ಳೆಯ ಬೌಲಿಂಗ್ ಹೊಂದಿದೆ ಎಂದು ಗುಣಗಾನ ಮಾಡಿದ್ದರು.

 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News