ಕ್ರೀಡಾಸ್ಫೂರ್ತಿಯನ್ನು ಮೆರೆಯಲು ಕಲಿತುಕೊಳ್ಳೋಣ
ಆಸ್ಟ್ರೇಲಿಯ ವಿಶ್ವಕಪ್ ಗೆದ್ದ ಬೆನ್ನಿಗೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಟ್ರಾವಿಸ್ ಹೆಡ್ ಅವರ ಒಂದು ವರ್ಷದ ಮಗುವಿಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಎಂದು ಹೇಳಿಕೊಂಡವರು ಅತ್ಯಾಚಾರದ ಬೆದರಿಕೆ ಹಾಕುವ ಮೆಸೇಜ್ ಕಳಿಸಿದ್ದಾರೆ. ಮ್ಯಾಕ್ಸ್‌ವೆಲ್‌ರ ಭಾರತ ಮೂಲದ ಪತ್ನಿಗೂ ಅವಹೇಳನಕಾರಿ ಮೆಸೇಜ್‌ಗಳನ್ನು ಇನ್‌ಸ್ಟ್ಟಾಗ್ರಾಮ್‌ನಲ್ಲಿ ಕಳಿಸಿದ್ದಾರೆ. ಇದೆಂತಹ ಕ್ರೀಡಾಪ್ರೇಮ? ಇದಕ್ಕೂ ಕ್ರೀಡೆಗೂ ಏನಾದರೂ ಸಂಬಂಧವಿದೆಯೇ?
ಭಾರತ ವಿಶ್ವಕಪ್ ಫೈನಲ್‌ನಲ್ಲಿ ಸೋತಿತು. ಆಟದಲ್ಲಿ ಸೋಲು ಗೆಲುವು ಇದ್ದಿದ್ದೇ. ಭಾರತ ತಂಡ ಇಡೀ ವಿಶ್ವಕಪ್‌ನಲ್ಲಿ ಅದೆಷ್ಟು ಅದ್ಭುತವಾಗಿ ಆಡಿತು, ಅದಕ್ಕಾಗಿ ನಾವು ಅದನ್ನು ಅಭಿನಂದಿಸೋಣ.
ಜೊತೆಗೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯ ತಂಡಕ್ಕೂ ನಾವು ಮನಃಪೂರ್ವಕವಾಗಿ ಅಭಿನಂದನೆ ಹೇಳೋಣ. ಏಕೆಂದರೆ ನಾವು ಅತಿಥಿ ದೇವೋಭವ ಎಂದು ನಂಬುವವರು. ಅವರು ನಮ್ಮಲ್ಲಿಗೆ ಬಂದಿದ್ದಾರೆ. ಅದ್ಭುತವಾಗಿ ಆಡಿದ್ದಾರೆ. ಗೆದ್ದಿದ್ದಾರೆ. ಹಾಗಾಗಿ ಅವರು ಎಲ್ಲ ಅಭಿನಂದನೆಗೆ ಅರ್ಹರು. ಅದನ್ನು ನಾವು ಹೇಳದಿದ್ದರೆ ನಾವೇ ಸಣ್ಣವರಾಗುತ್ತೇವೆ ಅಷ್ಟೇ.
ಈಗಾಗಲೇ ನಮ್ಮ ರಾಜಕೀಯ ನಾಯಕರು ಹಾಗೂ ಅವರ ಅಂಧ ಅಭಿಮಾನಿಗಳು ಅದೇ ರೀತಿ ವರ್ತಿಸಿ ಅಂತರ್‌ರಾಷ್ಟ್ರೀಯವಾಗಿ ಭಾರತಕ್ಕೆ ಕೆಟ್ಟ ಹೆಸರು ತಂದಿದ್ದಾರೆ. ನಾವೂ ಹಾಗೆ ಮಾಡುವುದು ಬೇಡ.
ಮೊನ್ನೆ ಫೈನಲ್ ಪಂದ್ಯ ನಡೆದ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿಯವರು ಹಾಗೂ ಅಲ್ಲಿ ನೆರೆದಿದ್ದ ದೊಡ್ಡ ಸಂಖ್ಯೆಯ ಅಭಿಮಾನಿಗಳ ವರ್ತನೆ ಖಂಡಿತ ಕ್ರಿಕೆಟ್‌ಗೆ ಅಥವಾ ದೇಶಕ್ಕೆ ಶೋಭೆ ತರುವಂತೆ ಇರಲಿಲ್ಲ.
ಪಂದ್ಯದಲ್ಲಿ ಸೋಲು ಗೆಲುವು ಇದ್ದದ್ದೇ. ಆದರೆ ಕ್ರೀಡಾಸ್ಫೂರ್ತಿಯಲ್ಲಿ ನಾವು ಸೋಲುವಂತೆ ಮಾಡಿ ಬಿಟ್ಟರು ಪ್ರಧಾನಿ ಹಾಗೂ ಅಲ್ಲಿ ನೆರೆದಿದ್ದ ಅಭಿಮಾನಿಗಳು.
ಸುದ್ದಿ ಸಂಸ್ಥೆ ಎಎನ್‌ಐ ಸಂಜೆ 5:46ಕ್ಕೆ ಮೋದಿ ಆಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಸ್ವಾಗತಿಸಿದ ಸುದ್ದಿಯನ್ನು ಪ್ರಸಾರ ಮಾಡಿತ್ತು
ನಂತರ ಅದೇ ಎಎನ್‌ಐ 8:35ಕ್ಕೆ ಮೋದಿ ಸ್ಟೇಡಿಯಂಗೆ ಬಂದಿದ್ದನ್ನು ಟ್ವೀಟ್ ಮಾಡಿದ್ದಾರೆ.
ಅಂದರೆ ಇಷ್ಟು ಸಮಯ ಅವರು ಎಲ್ಲಿ ಇದ್ದರು?
ಅವರು ಪಂದ್ಯದಲ್ಲಿ ಭಾರತದ ಸ್ಥಿತಿಯನ್ನು ನೋಡಿ ಸ್ಟೇಡಿಯಂಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದರೇ?
ಪ್ರಧಾನಿ ಮೋದಿ ಸ್ಟೇಡಿಯಂಗೆ ಮೊದಲೇ ತಲುಪಿದ್ದರೂ ಪ್ರೇಕ್ಷಕರ ಗ್ಯಾಲರಿಯಲ್ಲಿ ನಂತರ ಕಾಣಿಸಿಕೊಂಡರು. ಅದೇಕೆ ಹಾಗೆ?
ಆರು ತಿಂಗಳಿಂದ ಹಿಂಸೆಯಿಂದ ನಲುಗುತ್ತಿರುವ ಮಣಿಪುರಕ್ಕೆ ಪ್ರಧಾನಿ ಒಮ್ಮೆಯೂ ಹೋಗಿಲ್ಲ. ಆದರೂ ಮೊನ್ನೆ ಅವರು ಕ್ರಿಕೆಟ್ ನೋಡಲು ಅಹ್ಮದಾಬಾದ್‌ಗೆ ಬಂದರು. ಬಂದು ತಲುಪಿದ ತಮ್ಮ ತವರಿನಲ್ಲಿ ತಮ್ಮದೇ ಹೆಸರಿನ ಸ್ಟೇಡಿಯಂಗೆ ಬರಲು ಅವರು ಅಷ್ಟು ಹೊತ್ತು ಯಾಕೆ ತೆಗೆದುಕೊಂಡರು?
ಸೋಲು, ಗೆಲುವಿನ ಪರಿಸ್ಥಿತಿ ನೋಡಿಕೊಂಡು ಸ್ಟೇಡಿಯಂಗೆ ಬರುವಷ್ಟು ಪುಕ್ಕಲ ಮನೋಭಾವ ನಮ್ಮದೇ?
ಇಷ್ಟು ದೊಡ್ಡ ದೇಶ ಇಷ್ಟು ದೊಡ್ಡ ಕ್ರೀಡಾಕೂಟವನ್ನು ಆಯೋಜಿಸಿ ಅದರಲ್ಲಿ ಯಾರು ಗೆದ್ದರೂ ಅದನ್ನು ಸ್ವೀಕರಿಸಿ ಮನಃಪೂರ್ವಕವಾಗಿ ಅವರನ್ನು ಅಭಿನಂದಿಸುವ ಮನಸ್ಸು ಹೊಂದಿಲ್ಲವೇ?
ಪ್ರಧಾನಿ ಮೋದಿಯವರು ನಮ್ಮ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಂದ ಈ ಕ್ರೀಡಾಸ್ಫೂರ್ತಿ ಕಲಿತುಕೊಳ್ಳಬೇಕಾಗಿದೆ.
ಸತತ ಹತ್ತು ಪಂದ್ಯಗಳನ್ನು ಗೆದ್ದಾಗ ಎಲ್ಲೂ ಮುಂದೆ ಬಾರದ ದ್ರಾವಿಡ್ ಮೊನ್ನೆ ಫೈನಲ್ ಸೋತಾಗ ಬಂದು ಮಾಧ್ಯಮಗಳೆದುರು ನಿಂತರು. ಸೋಲಿನ ಕಾರಣಗಳ ಬಗ್ಗೆ ಮುಕ್ತವಾಗಿ ಮಾತಾಡಿದರು. ಸೋಲಿಗೆ ಹೊಣೆ ಹೊತ್ತುಕೊಂಡರು.
56 ಇಂಚಿನ ಎದೆಯ ನಿರ್ಭೀತ ನಾಯಕ ಎಂದು ಪ್ರಚಾರ ಪಡೆಯುವವರು ಪಂದ್ಯದ ಗತಿ ನೋಡಿಕೊಂಡು ಸ್ಟೇಡಿಯಂಗೆ ಬರಬೇಕೇ? ಅದು ಅವರಿಗೆ ಭೂಷಣವೇ ?
ನಮ್ಮ ತಂಡದ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೆ ಅವರನ್ನು ಹುರಿದುಂಬಿಸಬೇಕು. ಇನ್ನೊಂದು ತಂಡದವರು ಚೆನ್ನಾಗಿ ಆಡುತ್ತಿದ್ದರೆ ಅವರಿಗೂ ಚಪ್ಪಾಳೆ ತಟ್ಟಬೇಕು. ಅದಲ್ಲವೇ ಒಬ್ಬ ನಾಯಕ ತನ್ನ ಜನರಿಗೆ ತೋರಿಸಿಕೊಡಬೇಕಾದ ವರ್ತನೆ?
ಆಸ್ಟ್ರೇಲಿಯದ ಉಪಪ್ರಧಾನಿಯನ್ನು ಸ್ಟೇಡಿಯಂಗೆ ಆಹ್ವಾನಿಸಿ ಸ್ವತಃ ತಾವೇ ಪಂದ್ಯದ ಪರಿಸ್ಥಿತಿ ನೋಡಿಕೊಂಡು ಸ್ಟೇಡಿಯಂಗೆ ಬರೋದು ಭಾರತೀಯರು ಆತಿಥ್ಯ ನೀಡುವ ಶೈಲಿಯೇ?
ಅವರಿಗೆ ತಕ್ಕಂತೆಯೇ ಅವರ ಅಭಿಮಾನಿಗಳು ನಡೆದುಕೊಂಡರು. ಅಹ್ಮದಾಬಾದ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜಮಾಯಿಸಿದ ಜನರು ತಮ್ಮ ದೇಶಕ್ಕೆ ಮತ್ತು ಕ್ರಿಕೆಟ್‌ಗೆ ಕಳಂಕ ತಂದರು ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಬಹಳಷ್ಟು ಕ್ರಿಕೆಟಿಗರು, ವಿಶ್ಲೇಷಕರು ಈ ಬಗ್ಗೆ ದೂರಿದ್ದಾರೆ.
ವಿಶ್ವಕಪ್ ಪ್ರಶಸ್ತಿ ವಿತರಣೆಯ ಸಂದರ್ಭ ಹೆಚ್ಚಿನ ಜನರು ಸ್ಟೇಡಿಯಂ ಬಿಟ್ಟು ತೆರಳಿದ್ದರು.
ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಶತಕದ ಆಟವಾಡಿದಾಗ ಯಾರೂ ಚಪ್ಪಾಳೆ ತಟ್ಟಲಿಲ್ಲ.
ಮೋದಿ ಸ್ಟೇಡಿಯಂನಲ್ಲಿ ಪಂದ್ಯದ ಆರಂಭ ಹಾಗೂ ಪಂದ್ಯ ನಡೆಯುತ್ತಿರುವಾಗ ಅದರೊಳಗಿನ ಸ್ಟಾಲ್‌ಗಳಲ್ಲಿ ಯಾರು ಕೇಳಿದರೂ ಆಸ್ಟ್ರೇಲಿಯ ಆಟಗಾರರು ಬಳಸುವ ಬಣ್ಣದ ಕ್ಯಾಪ್‌ಗಳು, ಟಿ ಶರ್ಟ್ ಗಳು ಇಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ ಆಸ್ಟ್ರೇಲಿಯ ಪಂದ್ಯ ಗೆದ್ದ ಕೂಡಲೇ ಬೇಕಾದಷ್ಟು ಆಸೀಸ್ ಕ್ಯಾಪ್‌ಗಳು, ಟಿ ಶರ್ಟ್‌ಗಳು ಅಲ್ಲೇ ಮಾರಾಟವಾಗಲು ಶುರುವಾದವು. ಮೊದಲು ಇಲ್ಲವೇ ಇಲ್ಲ ಎಂದಿದ್ದು ಮತ್ತೆ ದಿಢೀರನೇ ಬಂದಿದ್ದು ಹೇಗೆ?
ಅದ್ಯಾಕೆ ಹೀಗೆ?
ನಾವು ಭಾರತವೇ ಗೆಲ್ಲುತ್ತದೆ ಎಂದೇ ನಿರೀಕ್ಷೆ ಇಟ್ಟುಕೊಳ್ಳೋಣ.
ಆದರೆ ಭಾರತ ಮಾತ್ರ ಗೆಲ್ಲಬೇಕು, ಬೇರೆ ಯಾರೂ ಗೆಲ್ಲಲೇ ಬಾರದು ಎಂಬ ಭಾವನೆ ಕ್ರೀಡೆಯಲ್ಲಿ ಸರಿಯೇ?
ಅಥವಾ ಭಾರತ ಕ್ರಿಕೆಟ್ ತಂಡ ಗೆಲ್ಲುವುದಕ್ಕಿಂತಲೂ ರಾಜಕೀಯವಾಗಿ ಅದನ್ನು ಬಳಸಿಕೊಳ್ಳಲು ಹೆಚ್ಚು ಉತ್ಸಾಹ ಇತ್ತೇ?
ಇದೇ ಚಾಂಪಿಯನ್ ತಂಡ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಕೋವಿಡ್ ಸಂದರ್ಭ ದಲ್ಲಿ 50 ಸಾವಿರ ಡಾಲರ್ ಪಿಎಂ ಕೇರ್ಸ್‌ಗೆ ನೀಡಿ ಭಾರತಕ್ಕೆ ನೆರವಾಗಿದ್ದರು. ಅಂತಹ ದೊಡ್ಡ ಮನಸ್ಸಿನ ಆಟಗಾರ, ನಾಯಕ ವಿಶ್ವ ಚಾಂಪಿಯನ್ ಆದಾಗ ಅವರನ್ನು ಅದ್ದೂರಿಯಾಗಿ ಅಭಿನಂದಿಸಬೇಕಿತ್ತು ನಮ್ಮ ಕ್ರಿಕೆಟ್ ಅಭಿಮಾನಿಗಳು. ಅಲ್ವಾ?
ಇನ್ನು ಫೈನಲ್ ಪಂದ್ಯ ವೀಕ್ಷಿಸಲು ಸಾಧಕ ಕ್ರೀಡಾಪಟುಗಳಿಗಿಂತ ಹೆಚ್ಚು ಚಿತ್ರನಟರು, ಗುರುಗಳೂ, ಭಟ್ಟಂಗಿ ಆ್ಯಂಕರ್‌ಗಳನ್ನೇ ಹೆಚ್ಚು ಅತಿಥಿಗಳಾಗಿ ಆಹ್ವಾನಿಸಿದ ಹಾಗೆ ಕಾಣುತ್ತಾ ಇತ್ತು. ಭಾರತಕ್ಕೆ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಅವರನ್ನೇ ಈ ಫೈನಲ್ ಪಂದ್ಯಕ್ಕೆ ಆಹ್ವಾನಿಸಿರಲಿಲ್ಲ. ಆದರೆ ಸಿನೆಮಾದಲ್ಲಿ ಕಪಿಲ್ ದೇವ್ ಅವರ ಪಾತ್ರ ಮಾಡಿದ ನಟನನ್ನು ಇಡೀ ಕುಟುಂಬ ಸಮೇತ ಆಹ್ವಾನಿಸಲಾಗಿತ್ತು.
ಇದೆಂತಹ ಧೋರಣೆ? ನಮ್ಮ ಚಾಂಪಿಯನ್ ಗಳನ್ನು, ಕ್ರೀಡೆಯ ರಾಯಭಾರಿಗಳನ್ನು ನಾವು ಹೀಗಾ ನಡೆಸಿಕೊಳ್ಳುವುದು?
ಭಾರತಕ್ಕೆ ವರದಿ ಮಾಡಲು ಬರುವ ಪತ್ರಕರ್ತರನ್ನು ರಾಯಭಾರಿ ಕಚೇರಿಗೆ ಕರೆದು ನೀವು ಕ್ರಿಕೆಟ್ ಬಿಟ್ಟು ಬೇರೆ ಏನು ಬರೆಯುವಂತಿಲ್ಲ ಎಂದು ಸೂಚಿಸಲಾಗಿತ್ತು. ಆದರೆ ಬಿಜೆಪಿ ಸಂಸದ ಗೌತಮ್ ಗಂಭೀರ್ ‘ಖಲೀಜ್ ಟೈಮ್ಸ್’ನಲ್ಲಿ ಒಂದು ಲೇಖನ ಬರೆದು ಭಾರತದ ಅಭಿಮಾನಿಗಳ ಬಗ್ಗೆ ಕೆಟ್ಟ ಮಾತು ಹೇಳಿದ್ದಾರೆ. ಅವರನ್ನು ಯಾರೂ ಪ್ರಶ್ನಿಸಲೇ ಇಲ್ಲ.
ಆಸ್ಟ್ರೇಲಿಯ ವಿಶ್ವಕಪ್ ಗೆದ್ದ ಬೆನ್ನಿಗೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಟ್ರಾವಿಸ್ ಹೆಡ್ ಅವರ ಒಂದು ವರ್ಷದ ಮಗುವಿಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಎಂದು ಹೇಳಿಕೊಂಡವರು ಅತ್ಯಾಚಾರದ ಬೆದರಿಕೆ ಹಾಕುವ ಮೆಸೇಜ್ ಕಳಿಸಿದ್ದಾರೆ. ಮ್ಯಾಕ್ಸ್‌ವೆಲ್‌ರ ಭಾರತ ಮೂಲದ ಪತ್ನಿಗೂ ಅವಹೇಳನಕಾರಿ ಮೆಸೇಜ್‌ಗಳನ್ನು ಇನ್‌ಸ್ಟ್ಟಾಗ್ರಾಮ್‌ನಲ್ಲಿ ಕಳಿಸಿದ್ದಾರೆ. ಇದೆಂತಹ ಕ್ರೀಡಾಪ್ರೇಮ? ಇದಕ್ಕೂ ಕ್ರೀಡೆಗೂ ಏನಾದರೂ ಸಂಬಂಧವಿದೆಯೇ?
ನಾವು 2036ರ ಒಲಂಪಿಕ್ಸ್ ಅನ್ನು ಭಾರತದಲ್ಲಿ ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ. ಅಂತಹ ಜಾಗತಿಕ ಕ್ರೀಡಾಕೂಟ ಆಯೋಜಿಸಲು ಹೊರಡುವಾಗ ನಾವು ಅದೇ ರೀತಿಯ ವಿಶಾಲ ಮನೋಭಾವವನ್ನು ಅಳವಡಿಸಿಕೊಳ್ಳಲು, ಕ್ರೀಡಾಸ್ಫೂರ್ತಿಯನ್ನು ಮೆರೆಯಲು ಮೊದಲು ಕಲಿತುಕೊಳ್ಳಬೇಡವೇ?
ಅದು ನಮ್ಮ ದೇಶದ ಪ್ರಧಾನಿಯಿಂದಲೇ ಶುರುವಾಗಬೇಡವೇ ?