ಬೌಲಿಂಗ್ ನಂತರ ಬ್ಯಾಟಿಂಗ್‌ ನಲ್ಲೂ ಮಿಂಚಿದ ಮುಹಮ್ಮದ್ ಶಮಿ

Update: 2024-11-15 15:50 GMT

 ಮುಹಮ್ಮದ್ ಶಮಿ | PC : PTI  

ಇಂದೋರ್: ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಗುರುವಾರ ನಾಲ್ಕು ವಿಕೆಟ್ ಗೊಂಚಲು ಪಡೆದು ಸ್ಪರ್ಧಾತ್ಮಕ ಕ್ರಿಕೆಟಿಗೆ ತನ್ನದೇ ಶೈಲಿಯಲ್ಲಿ ವಾಪಸಾಗಿದ್ದರು. ಶುಕ್ರವಾರ ಬ್ಯಾಟಿಂಗ್‌ ನಲ್ಲೂ ಮಿಂಚಿರುವ ಶಮಿ ಅವರು ಮಧ್ಯಪ್ರದೇಶ ವಿರುದ್ಧ ರಣಜಿ ಟ್ರೋಫಿ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬಂಗಾಳದ ಪರ 36 ಎಸೆತಗಳಲ್ಲಿ 37 ರನ್ ಗಳಿಸಿದರು.

360 ದಿನಗಳ ನಂತರ ಪಿಚ್‌ಗೆ ಮರಳಿರುವ ಶಮಿ ಅವರು ಸಿ ಗುಂಪಿನ ಪಂದ್ಯದ ಎರಡನೇ ದಿನದಾಟವಾದ ಗುರುವಾರ 54 ರನ್‌ಗೆ 4 ವಿಕೆಟ್ ಪಡೆದು ಬೌಲಿಂಗ್‌ ನಲ್ಲಿ ಮಿಂಚಿದ್ದರೆ, 3ನೇ ದಿನವಾದ ಶುಕ್ರವಾರ 2ನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ನಲ್ಲೂ ಮಿಂಚು ಹರಿಸಿದರು. ಕೆಳ ಕ್ರಮಾಂಕದಲ್ಲಿ ನಿರ್ಣಾಯಕ ರನ್ ಸೇರಿಸಿದ ಶಮಿ ಅವರು ಬಂಗಾಳ ತಂಡ ಮಧ್ಯಪ್ರದೇಶ ತಂಡದ ಗೆಲುವಿಗೆ 338 ರನ್ ಗುರಿ ನೀಡಲು ನೆರವಾದರು.

ಬಂಗಾಳ ತಂಡವು ತನ್ನ 2ನೇ ಇನಿಂಗ್ಸ್‌ನಲ್ಲಿ 276 ರನ್ ಗಳಿಸಿ ಆಲೌಟಾಗಿದ್ದು, ಶಮಿ 36 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಶಮಿ(2 ರನ್)ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಔಟಾಗಿದ್ದರು.

ಶುಕ್ರವಾರ 5 ವಿಕೆಟ್‌ಗಳ ನಷ್ಟಕ್ಕೆ 170 ರನ್‌ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಬಂಗಾಳದ ಪರ ರಿಟಿಕ್ ಚಟರ್ಜಿ (52 ರನ್, 106 ಎಸೆತ)ಹಾಗೂ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ(44 ರನ್, 115 ಎಸೆತ)ಗಮನಾರ್ಹ ಕೊಡುಗೆ ನೀಡಿದರು.

ಶಮಿ ಅವರು ಈ ಪಂದ್ಯಕ್ಕಿಂತ ಮೊದಲು ಕಳೆದ ವರ್ಷ ನವೆಂಬರ್ 19ರಂದು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಕೊನೆಯ ಪಂದ್ಯ ಆಡಿದ್ದರು.

ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ ಅವರ ಕಾಲಿನಲ್ಲಿ ಊತ ಕಾಣಿಸಿಕೊಂಡ ಕಾರಣ ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿರಲಿಲ್ಲ.

ಗೆಲ್ಲಲು 338 ರನ್ ಗುರಿ ಬೆನ್ನಟ್ಟಲಾರಂಭಿಸಿರುವ ಮಧ್ಯಪ್ರದೇಶ ತಂಡ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 150 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಸುಭ್ರಾಂಶು ಸೇನಾಪತಿ 50 ರನ್, ಹಿಮಾಂಶು ಮಂತ್ರಿ 44 ರನ್ ಗಳಿಸಿದ್ದಾರೆ. ರಜತ್ ಪಾಟಿದಾರ್(32 ರನ್)ಹಾಗೂ ನಾಯಕ ಶುಭಮ್ ಶರ್ಮಾ(18) ಕ್ರೀಸ್ ಕಾಯ್ದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News