ನೆದರ್ಲ್ಯಾಂಡ್ಸ್ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾದೇಶ; 142 ರನ್ ಗೆ ಆಲೌಟ್

Update: 2023-10-28 16:03 GMT

Photo:X/@cricketworldcup

ಕಲ್ಕತ್ತಾ : ಇಲ್ಲಿನ ಈಡನ್ ಗಾರ್ಡನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ನೆದರ್ಲ್ಯಾಂಡ್ಸ್ ತಂಡ 87 ರನ್ ಗಳಿಂದ ಜಯ ಸಾಧಿಸಿದೆ.

ಸುಲಭ ಗೆಲುವಿನ ನೀರೀಕ್ಷೆಯಲ್ಲಿ ನೆದರ್ಲ್ಯಾಂಡ್ಸ್ ನೀಡಿದ 230 ರನ್ ಅಲ್ಪ ಗುರಿ ಬೆನ್ನಟ್ಟಲು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾದೇಶ ಅಕ್ಷರಶಃ ಆಘಾತ ಎದುರಿಸಿತು. ಡಚ್ ಬೌಲರ್ ಗಳ ಆಕ್ರಮಣಕಾರಿ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ ಬ್ಯಾಟರ್ ಗಳು ಪೆವಿಲಿಯನ್ ಸೇರಿಕೊಂಡರು. ಮೆಹದಿ ಹಸನ್ ಮಿರಾಝ್ ಬಾರಿಸಿದ 35 ರನ್ ಬಾಂಗ್ಲಾ ಇನ್ನಿಂಗ್ಸ್ ನ ಗರಿಷ್ಠ ಸ್ಕೋರ್ ಆದರೆ, ಬಾಂಗ್ಲಾದೇಶ ಪರ ಲಿಟನ್ ದಾಸ್ (3) ತಂಝಿದ್ ಹಸನ್ (15) ನಜ್ಮಲ್ ಹುಸೈನ್ ಶಾಂಟೊ (9) ಶಾಕಿಬ್ ಅಲ್ ಹಸನ್ (5) ಮುಸ್ತಫಿಝುರ್ ರಹೀಮ್ (1) ಮಹಮದುಲ್ಲಾ (20) ಮೆಹದಿ ಹಸನ್(17) ತಸ್ಕಿನ್ ಅಹ್ಮದ್ (11) ಮುಸ್ತಫಿಝುರ್ ರಹ್ಮಾನ್ (20) ಗಳಿಸಿದರು.

ನೆದರ್ಲ್ಯಾಂಡ್ಸ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಪೌಲ್ ವಾನ್ ಮೀಕರನ್ 4 ವಿಕೆಟ್ ಪಡೆದರೆ ಬಾಸ್ ಡೆ ಲೀಡೆ 2 ಆರ್ಯನ್ ದತ್, ಕಾಲಿನ್ ಅಕೆರ್ಮಾನ್ ಹಾಗೂ ವಾನ್ ಬೀಕ್ ತಲಾ ಒಂದು ವಿಕೆಟ್ ಪಡೆದರು.

ಈ ಮೊದಲು ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಇತ್ತ ಬ್ಯಾಟಿಂಗ್ ಇಳಿದ ಡಚ್ ತಂಡಕ್ಕೆ ಉತ್ತಮ ಆರಂಭ ದೊರಯಲಿಲ್ಲ. ಕೇವಲ 4 ರನ್ ಗಳಿಸುವಾಗಲೇ ತಂಡದ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿದ್ದರು. ವಿಕ್ರಮಜಿತ್ ಸಿಂಗ್ 3 ರನ್ ಗಳಿಸಿದರೆ ಮಾಕ್ಸ್ ಒ’ಡೌಡ್ ಶೂನ್ಯಕ್ಕೆ ಶರೀಫುಲ್ ಇಸ್ಲಾಂ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ವೆಸ್ಲಿ ಬ್ಯಾರಸಿ 41 ರನ್ ಬಾರಿಸಿ ಬಾಂಗ್ಲಾ ಬೌಲಿಂಗ್ ಎದುರಿಸುವ ಪ್ರಯತ್ನ ಮಾಡಿದರಾದರೂ ಅವರು ಹೆಚ್ಚು ಸಮಯ ಮುಂದುಯವರಿಸಲಾಗಳಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಕಾಲಿನ್ ಅಕೆರ್ಮಾನ್ ಕೇವಲ 15 ರನ್ ಬಾರಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.

ತಂಡ ಅಲ್ಪ ಮೊತ್ತ ಕ್ಕೆ ಕುಸಿಯುದನ್ನು ತಪ್ಪಿಸುವಲ್ಲಿ ಜವಾಬ್ದಾರಿಯುತ ಜೊತೆಯಾಟ ನಿರ್ವಹಿಸಿದ ಸ್ಕಾಟ್ ಎಡ್ವಡ್ಸ್ ಹಾಗೂ ಸೈಬ್ರಾಂಡ್ ಜೋಡಿ 78 ರನ್ ಜೊತೆಯಾಟ ನೀಡಿದರು. ನಾಯಕ ಸ್ಕಾಟ್ ಎಡ್ವಡ್ಸ್ 6 ಬೌಂಡರಿ ಸಹಿತ 68 ರನ್ ಗಳಿಸಿ ತಂಡದ ಪರ ಏಕೈಕ ಅರ್ಧಶತಕ ಸಿಡಿಸಿದರೆ. ಸೈಬ್ರಾಂಡ್ 35 ರನ್ ಗಳಿಸಿ ಮಹದಿ ಹಸನ್ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲೂ ಆದರು. ಕಡೇ ಗಳಿಗೆಯಲ್ಲಿ ಸ್ಟೋಟಕ ಬ್ಯಾಟ್ ಬೀಸಿದ ವಾನ್ ಬೀಕ್ 23 ರನ್ ಬಾರಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟುವಂತೆ ಮಾಡಿದರು. ಬಾಸ್ ಡೆ ಲೀಡೆ 17, ಶರಿಝ್ ಅಹ್ಮದ್ 6, ಆರ್ಯನ್ ದತ್ 9 ರನ್ ಗಳಿಸಿದರು.

ಬಾಂಗ್ಲಾದೇಶ ಪರ ಮುಸ್ತಫಿಝುರ್ ರಹ್ಮಾನ್, ಶರೀಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಹಾಗೂ ಮಹೆದಿ ತಲಾ 2 ವಿಕೆಟ್ ಪಡೆದುಕೊಂಡರೆ ನಾಯಕ ಶಾಕಿಬ್ ಒಂದು ವಿಕೆಟ್ ಪಡೆದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News