2023ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಅಗ್ರ 20 ಮಹಿಳಾ ಅತ್ಲೀಟ್ ಗಳ ‘ಫೋರ್ಬ್ಸ್’ ಪಟ್ಟಿಯಲ್ಲಿ ಸ್ಥಾನ ಪಡೆದ ಪಿ.ವಿ. ಸಿಂಧೂ

Update: 2023-12-22 16:14 GMT

 ಪಿ.ವಿ. ಸಿಂಧೂ | Photo: X 

ಹೊಸದಿಲ್ಲಿ: ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧೂ 2023ರಲ್ಲಿ 16ನೇ ಅತಿ ಹೆಚ್ಚು ಸಂಭಾವನೆ ಪಡೆದ ಮಹಿಳಾ ಅತ್ಲೀಟ್ ಆಗಿದ್ದಾರೆ ಎಂದು ‘ಫೋರ್ಬ್ಸ್’ ಶುಕ್ರವಾರ ವರದಿ ಮಾಡಿದೆ.

ಅಮೆರಿಕದ ವಾಣಿಜ್ಯ ಮ್ಯಾಗಝಿನ್ ಬಿಡುಗಡೆಗೊಳಿಸಿದ ಪಟ್ಟಿಯ ಅಗ್ರ 20 ಮಹಿಳಾ ಅತ್ಲೀಟ್ ಗಳ ಪಟ್ಟಿಯಲ್ಲಿ ಸಿಂಧೂ ಏಕೈಕ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಭಾರತೀಯ ಆಗಿದ್ದಾರೆ.

ಮಂಡಿನೋವಿನಿಂದ ಬಳಲುತ್ತಿರುವ ಅವರು ಈಗ ಚೇತರಿಸುತ್ತಿದ್ದಾರೆ.

‘ಫೋರ್ಬ್ಸ್’ ಪಟ್ಟಿಯಲ್ಲಿ 16ನೇ ಸ್ಥಾನವನ್ನು ಸಿಂಧೂ ಅಮೆರಿಕದ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ಜೊತೆ ಹಂಚಿಕೊಂಡಿದ್ದಾರೆ. ಪತ್ರಿಕೆಯ ಪ್ರಕಾರ, ಸಿಂಧೂ ಮತ್ತು ಬೈಲ್ಸ್ ಇಬ್ಬರೂ ಈ ವರ್ಷ ಸುಮಾರು 7.1 ಮಿಲಿಯ ಡಾಲರ್ (ಸುಮಾರು 60 ಕೋಟಿ ರೂಪಾಯಿ) ಸಂಪಾದಿಸಿದ್ದಾರೆ.

ಸೆರೀನಾ ವಿಲಿಯಮ್ಸ್ ರ ನಿವೃತ್ತಿ ಮತ್ತು ನವೋಮಿ ಒಸಾಕರ ನೇಪಥ್ಯದ ಹಿನ್ನೆಲೆಯಲ್ಲಿ, ಪಟ್ಟಿಯ ಅಗ್ರ ಸ್ಥಾನದಲ್ಲಿ ಪೋಲ್ಯಾಂಡ್ ನ ಟೆನಿಸ್ ತಾರೆ ಇಗಾ ಸ್ವಿಯಾಟೆಕ್ ಇದ್ದಾರೆ. ಈ ವರ್ಷದ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ಸ್ವಿಯಾಟೆಕ್ 2023ರಲ್ಲಿ 23.9 ಮಿಲಿಯನ್ ಡಾಲರ್ (ಸುಮಾರು 199 ಕೋಟಿ ರೂಪಾಯಿ) ಗಳಿಸಿದ್ದಾರೆ.

ಪಟ್ಟಿಯಲ್ಲಿ ಟೆನಿಸ್ ಆಟಗಾರರೇ ಪ್ರಾಬಲ್ಯ ಸಾಧಿಸಿದ್ದಾರೆ. ಅಗ್ರ 10ರಲ್ಲಿ ಚೀನಾದ ಐಲೀನ್ ಗು ಮಾತ್ರ ಫ್ರೀಸ್ಟೈಲ್ ಸ್ಕೀಯಿಂಗ್ಗೆ ಸೇರಿದವರು.

ಅಕ್ಟೋಬರ್ 26ರಂದು ನಡೆದ ಥಾಯ್ಲೆಂಡ್ ನ ಸುಪನಿಡ ಕಟೆತೊಂಗ್ ವಿರುದ್ಧದ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಪಂದ್ಯವೊಂದರಲ್ಲಿ ಸಿಂಧೂ ಗಾಯಗೊಂಡು ಹೊರಬಿದ್ದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News