ರಣಜಿ | ಕರ್ನಾಟಕ-ಬಂಗಾಳ ಪಂದ್ಯ ಡ್ರಾ

Update: 2024-11-09 17:06 GMT

 ಮಯಾಂಕ್ ಅಗರ್ವಾಲ್ |PC : @sportstarweb

ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಕೊನೆಗೊಂಡಿರುವ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ವಿರುದ್ಧ ಡ್ರಾ ಸಾಧಿಸಿರುವ ಬಂಗಾಳ ತಂಡ ಮೂರಂಕವನ್ನು ಕಲೆ ಹಾಕಿದೆ.

ನಾಲ್ಕನೇ ಹಾಗೂ ಕೊನೆಯ ದಿನವಾದ ಶನಿವಾರ ಬಂಗಾಳ ತಂಡ ಲಂಚ್ ವಿರಾಮದ ನಂತರವೂ ಬ್ಯಾಟಿಂಗ್ ಮಾಡಿ ಕರ್ನಾಟಕ ತಂಡದ ಗೆಲುವಿಗೆ 364 ರನ್ ಕಠಿಣ ಗುರಿ ನೀಡಿತು.

ಕರ್ನಾಟಕ ತಂಡವು 6 ಓವರ್‌ನೊಳಗೆ ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್(5 ರನ್) ಹಾಗೂ ಕಿಶನ್ ಬೆದಾರೆ (5 ರನ್) ಅವರ ವಿಕೆಟ್ಟನ್ನು ಕಳೆದುಕೊಂಡಿತು. ಆರ್.ಸ್ಮರಣ್(ಔಟಾಗದೆ 35), ಶ್ರೇಯಸ್ ಗೋಪಾಲ್(32 ರನ್)ಹಾಗೂ ಮನೀಶ್ ಪಾಂಡೆ(ಔಟಾಗದೆ 30)ತಂಡವನ್ನು ಡ್ರಾನತ್ತ ಮುನ್ನಡೆಸಿದರು.

4 ಪಂದ್ಯಗಳಲ್ಲಿ 9 ಅಂಕ ಗಳಿಸಿರುವ ಕರ್ನಾಟಕ ತಂಡವು ಎಲೈಟ್ ಸಿ ಗುಂಪಿನ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದು ಅಗ್ರ 2 ಸ್ಥಾನದಿಂದ ಹೊರಗುಳಿದಿದೆ. 4 ಪಂದ್ಯಗಳಲ್ಲಿ 8 ಅಂಕ ಗಳಿಸಿರುವ ಬಂಗಾಳ 5ನೇ ಸ್ಥಾನದಲ್ಲಿದೆ. ಹರ್ಯಾಣ(19 ಅಂಕ)ಹಾಗೂ ಕೇರಳ(15 ಅಂಕ) ಸಿ ಗುಂಪಿನಲ್ಲಿ ಅಗ್ರ-2 ಸ್ಥಾನವನ್ನು ಪಡೆದಿವೆ. ಮಧ್ಯಪ್ರದೇಶ(9 ಅಂಕ)3ನೇ ಸ್ಥಾನದಲ್ಲಿದೆ.

ಶನಿವಾರ 3 ವಿಕೆಟ್‌ಗಳ ನಷ್ಟಕ್ಕೆ 127 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ಬಂಗಾಳ ತಂಡದ ಪರ ಸುದೀಪ್ ಕುಮಾರ್(ಔಟಾಗದೆ 101, 193 ಎಸೆತ, 12 ಬೌಂಡರಿ, 2 ಸಿಕ್ಸರ್)ತನ್ನ ಐದನೇ ಪ್ರಥಮ ದರ್ಜೆ ಶತಕ ಸಿಡಿಸಿದರು.

ವೇಗದ ಬೌಲರ್ ವಿದ್ಯಾಧರ ಪಾಟೀಲ್ ಅವರು ಶಹಬಾಝ್ ಅಹ್ಮದ್(18 ರನ್) ಹಾಗೂ ಅವಿಲಿನ್ ಘೋಷ್(5 ರನ್) ವಿಕೆಟ್‌ಗಳನ್ನು ಉರುಳಿಸಿದರೂ ವೃದ್ದಿಮಾನ್ ಸಹಾ(ಔಟಾಗದೆ 63, 70 ಎಸೆತ, 7 ಬೌಂಡರಿ, 1 ಸಿಕ್ಸರ್)ಕರ್ನಾಟಕ ಪುಟಿದೇಳದಂತೆ ನೋಡಿಕೊಂಡರು.

ಸುದೀಪ್ ಶತಕ ತಲುಪಿದ ನಂತರ ಬಂಗಾಳ ತಂಡವು 5 ವಿಕೆಟ್‌ಗಳ ನಷ್ಟಕ್ಕೆ 283 ರನ್‌ಗೆ ತನ್ನ 2ನೇ ಇನಿಂಗ್ಸ್ ಡಿಕ್ಲೇರ್ ಮಾಡಿತು. ಆಡಲು ಎರಡು ಸೆಶನ್ ಸಿಗದ ಕಾರಣ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವುದು ನಿಶ್ಚಿತವಾಗಿತ್ತು.

ಸುಲಭವಾಗಿ ಔಟಾಗಿರುವುದು ತಂಡದ ಮೇಲೆ ಪ್ರಭಾವ ಬೀರಿದೆ. ಬ್ಯಾಟರ್‌ಗಳು ಇದನ್ನು ತಿದ್ದುಕೊಳ್ಳುವ ಅಗತ್ಯವಿದೆ. ನಮ್ಮ ಆಟಗಾರರು ಉನ್ನತ ದರ್ಜೆಯ ಕ್ರಿಕೆಟ್ ಆಡುವುದನ್ನು ಬಯಸುತ್ತೇವೆ. ನಮ್ಮ ತಂಡ ಪಂದ್ಯಗಳನ್ನು ಗೆಲ್ಲಲು ನಾವು ಹೋರಾಟ ನೀಡಿ ಗೆಲುವಿನ ಹಾದಿ ಹುಡುಕಬೇಕಾಗಿದೆ ಎಂದು ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಹೇಳಿದ್ದಾರೆ.

ಕರ್ನಾಟಕ ತಂಡ ನವೆಂಬರ್ 13ರಂದು ಲಕ್ನೊದಲ್ಲಿ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ. ಬಂಗಾಳ ತಂಡವು ಇಂದೋರ್‌ನಲ್ಲಿ ಮಧ್ಯಪ್ರದೇಶವನ್ನು ಮುಖಾಮುಖಿಯಾಗಲಿದೆ

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News