ಹಲವು ದಾಖಲೆಗಳನ್ನು ಮುರಿದ ರೊನಾಲ್ಡೊ ಅವರ ಹೊಸ ಯೂಟ್ಯೂಬ್ ಚಾನೆಲ್
ಹೊಸದಿಲ್ಲಿ: ಪೋರ್ಚುಗಲ್ ದೇಶದ ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ ‘ಯುಆರ್-ಕ್ರಿಸ್ಟಿಯಾನೊ’ ಎಂಬ ಹೊಸ ಯೂಟ್ಯೂಬ್ ಚಾನೆಲನ್ನು ಆರಂಭಿಸಿದ್ದು, ಒಂದೇ ದಿನದಲ್ಲಿ ಅದು ಹಲವು ದಾಖಲೆಗಳನ್ನು ಮುರಿದಿದೆ.
ಈಗಾಗಲೇ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಅಗಾಧ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ರೊನಾಲ್ಡೊ, ಈಗ ಯೂಟ್ಯೂಬ್‌ಗೂ ತನ್ನ ಉಪಸ್ಥಿತಿಯನ್ನು ವಿಸ್ತರಿಸಿದ್ದಾರೆ.
ಆರಂಭಗೊಂಡ ಬಳಿಕ ಅವರ ಚಾನೆಲ್ ಒಂದು ಫುಟ್ಬಾಲ್ ಪಂದ್ಯಕ್ಕಿಂತಲೂ ಕಡಿಮೆ ಅವಧಿಯಲ್ಲಿ 10 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಸಂಪಾದಿಸಿದೆ.
ಅವರು ಈಗಾಗಲೇ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಎರಡು ದಿನಕ್ಕೂ ಕಡಿಮೆ ಅವಧಿಯಲ್ಲಿ 12 ವೀಡಿಯೊಗಳನ್ನು ಹಾಕಿದ್ದಾರೆ. ಅವರ ವೀಡಿಯೊಗಳನ್ನು ಲಕ್ಷಾಂತರ ಜನರು ನೋಡಿದ್ದಾರೆ. ಅವರ ಮೂರು ವೀಡಿಯೊಗಳನ್ನು ತಲಾ 2 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
‘ತಿಂಕಿಫಿಕ್’ ನಡೆಸಿದ ಸಂಶೋಧನೆಯ ಪ್ರಕಾರ, ಯೂಟ್ಯೂಬ್ ಚಾನೆಲ್‌ಗಳಲ್ಲಿ, 1,000 ವೀಕ್ಷಣೆಗೆ ಸುಮಾರು 6 ಡಾಲರ್ (ಸುಮಾರು 500 ರೂ.) ಲಭಿಸುತ್ತದೆ. ಅದು 10 ಲಕ್ಷ ವೀಕ್ಷಣೆಗೆ 1,200 ಡಾಲರ್ (ಸುಮಾರು ಒಂದು ಲಕ್ಷ ರೂಪಾಯಿ)ನಿಂದ 6,000 ಡಾಲರ್ (ಸುಮಾರು 5.03 ಲಕ್ಷ ರೂಪಾಯಿ)ವರೆಗೂ ಏರುತ್ತದೆ.
ಈವರೆಗೆ ಯೂಟ್ಯೂಬ್‌ನಲ್ಲಿ ರೊನಾಲ್ಡೊ 10 ಕೋಟಿಗೂ ಅಧಿಕ ವೀಕ್ಷಣೆಯನ್ನು ಗಳಿಸಿದ್ದಾರೆ. ತಾರಾ ಆಕರ್ಷಣೆ, ಜಾಹೀರಾತು ಆದಾಯ ಮತ್ತು ಪ್ರಾಯೋಜಕತ್ವಗಳ ಮೂಲಕ ಅವರು ಈಗಾಗಲೇ ಯೂಟ್ಯೂಬ್‌ನಿಂದ ಕೆಲವು ನೂರು ಮಿಲಿಯ ಡಾಲರ್ (ಒಂದು ನೂರು ಮಿಲಿಯ ಡಾಲರ್ ಅಂದರೆ ಸುಮಾರು 830 ಕೋಟಿ ರೂಪಾಯಿ) ಮೊತ್ತವನ್ನು ಗಳಿಸಿರಬಹುದು.
ಯೂಟ್ಯೂಬ್‌ನಲ್ಲಿ ಈಗ ಅವರ ಚಂದಾದಾರರ ಸಂಖ್ಯೆ ಮೂರು ಕೋಟಿಯನ್ನೂ ದಾಟಿದೆ. ಪುತ್ರ ಕ್ರಿಸ್ಟಿಯಾನೊ ಜೂನಿಯರ್ ಮತ್ತು ಸಂಗಾತಿ ಜಾರ್ಜಿನಾ ರೋಡ್ರಿಗಸ್ ಜೊತೆಗೆ ಇರುವ, ತನ್ನ ಯುರೋ ಗೋಲುಗಳ ಮೌಲ್ಯಮಾಪನ ಮುಂತಾದ ವಿಷಯಗಳ, ಫ್ರೀಕಿಕ್ ಸವಾಲುಗಳನ್ನು ಒಳಗೊಂಡ ಮತ್ತು ‘ದಿಸ್ ಆರ್ ದ್ಯಾಟ್’ ಗೇಮ್‌ಗಳ ವೀಡಿಯೊಗಳನ್ನು ಅವರು ಯೂಟ್ಯೂಬ್‌ನಲ್ಲಿ ಹಾಕಿದ್ದಾರೆ.