ಸಂಜು ಸ್ಯಾಮ್ಸನ್ ಶತಕ; ಆಫ್ರಿಕಾ ವಿರುದ್ಧ ಭಾರತಕ್ಕೆ ಸುಲಭ ಜಯ
ಹೊಸದಿಲ್ಲಿ; ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ಟಿ20 ಕ್ರಿಕೆಟ್ ತಂಡ ನಾಲ್ಕು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಶುಕ್ರವಾರ ಅತಿಥೇಯ ತಂಡವನ್ನು 61 ರನ್ ಗಳ ಭಾರಿ ಅಂತರದಿಂದ ಸೋಲಿಸಿದೆ. ಸಂಜು ಸ್ಯಾಮ್ಸನ್ ಅವರ ಸಿಡಿಲಬ್ಬರದ ಶತಕ (50 ಎಸೆತಗಳಲ್ಲಿ 107) ಮತ್ತು ಭಾರತದ ಬೌಲರ್ ಗಳ ಸಂಘಟಿತ ಪ್ರಯತ್ನದಿಂದ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
203 ರನ್ ಗಳ ಗೆಲುವಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ಕೇವಲ 17.5 ಓವರ್ ಗಳಲ್ಲಿ 141ಕ್ಕೆ ಆಲೌಟ್ ಆಯಿತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ, ಸ್ಯಾಮ್ಸನ್ ಅವರ ಹೊಡೆತಕ್ಕೆ ಸಿಲುಕಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ಸನ್ 10 ಸಿಕ್ಸರ್ ಹಾಗೂ 7 ಬೌಂಡರಿ ಸಿಡಿಸಿದರು.
ಇದರೊಂದಿಗೆ ಶ್ರೀಲಂಕಾದಲ್ಲಿ 2017ರಲ್ಲಿ ಭಾರತದ ರೋಹಿತ್ ಶರ್ಮಾ ಸ್ಥಾಪಿಸಿದ್ದ ಅತಿಹೆಚ್ಚು ಸಿಕ್ಸರ್ ಗಳನ್ನು ಸಿಡಿಸಿದ ಭಾರತೀಯ ಎಂಬ ದಾಖಲೆಯನ್ನೂ ಸ್ಯಾಮ್ಸನ್ ಪುಡಿಗಟ್ಟಿದರು. ಕ್ಷಿಪ್ರವಾಗಿ ವಿಕೆಟ್ ಗಳನ್ನು ಕಳೆದುಕೊಂಡರೂ, ಸ್ಯಾಮ್ಸನ್ ಅವರ ಪ್ರಬಲ ಅಡಿಪಾಯದ ಕಾರಣದಿಂದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 202 ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.
ಅಭಿಷೇಕ್ ಶರ್ಮಾ ಭಾರತಕ್ಕೆ ವೇಗದ ಆರಂಭ ಒದಗಿಸುವ ಪ್ರಯತ್ನ ಮಾಡಿದರೂ, 8 ಎಸೆತಗಳಲ್ಲಿ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಸೂರ್ಯಕುಮಾರ್ ಯಾದವ್ (17 ಎಸೆತಗಳಲ್ಲಿ 21) ಮತ್ತು ತಿಲಕ್ ವರ್ಮಾ (18 ಎಸೆತಗಳಲ್ಲಿ 33) ಭಾರತಕ್ಕೆ ಆಸರೆಯಾದರು.
ಪ್ರತಿಯಾಗಿ ದಕ್ಷಿಣ ಆಫ್ರಿಕಾ ಆರಂಭದಲ್ಲೇ ವಿಕೆಟ್ ಗಳನ್ನು ಕಳೆದುಕೊಳ್ಳಲಾರಂಭಿಸಿತು. ಈಡನ್ ಮ್ಯಾಕ್ರಮ್ (8) ಅವರು ಅರ್ಷದೀಪ್ ಬೌಲಿಂಗ್ ನ ಮೊದಲ ಓವರ್ ನಲ್ಲೇ ಸ್ಯಾಮ್ಸನ್ ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ರವಿ ಬಿಷ್ಣೋಯಿ ಹಾಗೂ ವರುಣ್ ಚಕ್ರವರ್ತಿ ನಿರಂತರವಾಗಿ ಹೊಡೆತ ನೀಡಿದರು. ಹೆನ್ರಿಚ್ ಕ್ಲಾಸನ್ (25) ಹಾಗೂ ಡೇವಿಡ್ ಮಿಲ್ಲರ್ (18) ಅಂಥ ಘಟಾನುಘಟಿಗಳ ವಿಕೆಟನ್ನು ಚಕ್ರವರ್ತಿ ಕಬಳಿಸಿದರೆ, ಬಿಷ್ಣೋಯಿಯವರ 3 ವಿಕೆಟ್ ಗೊಂಚಲು ದಕ್ಷಿಣ ಆಫ್ರಿಕಾದ ಕೆಳ ಕ್ರಮಾಂಕವನ್ನು ಛಿದ್ರಗೊಳಿಸಿತು.