ನಾಳೆಯಿಂದ ದ್ವಿತೀಯ ಟೆಸ್ಟ್ | ಭಾರತ-ಆಸ್ಟ್ರೇಲಿಯ ಹಣಾಹಣಿ
ಅಡಿಲೇಡ್ : ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡು 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ ಕ್ರಿಕೆಟ್ ತಂಡವು ಅಡಿಲೇಡ್ ಓವಲ್‌ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯವನ್ನು ಎದುರಿಸಲಿದೆ.
2ನೇ ಟೆಸ್ಟ್ ಪಂದ್ಯವು ಹಗಲು-ರಾತ್ರಿ ನಡೆಯಲಿದ್ದು, 2020ರಲ್ಲಿ ಆಸ್ಟ್ರೇಲಿಯ ಪ್ರವಾಸದ ವೇಳೆ ಪಿಂಕ್‌ಬಾಲ್ ಚೆಂಡಿನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಿದ್ದ ಭಾರತ ಆ ಪಂದ್ಯವನ್ನು ಸೋತಿತ್ತು. ಆ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಆಲೌಟಾಗಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಕನಿಷ್ಠ ಸ್ಕೋರ್ ಗಳಿಸಿತ್ತು.
ಒಟ್ಟಾರೆ ಭಾರತ ತಂಡವು ಅಡಿಲೇಡ್ ಓವಲ್‌ನಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ ಕೇವಲ 2ರಲ್ಲಿ ಜಯ ಸಾಧಿಸಿದ್ದು, 8ರಲ್ಲಿ ಸೋಲು ಹಾಗೂ 3 ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಶಕ್ತವಾಗಿದೆ.
► ಐತಿಹಾಸಿಕ ಗೆಲುವು:
2018ರ ಡಿಸೆಂಬರ್‌ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಅಡಿಲೇಡ್‌ನಲ್ಲಿ ಭಾರತದ ಗೆಲುವು ಭಾರತೀಯ ಕ್ರಿಕೆಟ್‌ನ ಐತಿಹಾಸಿಕ ಕ್ಷಣಕ್ಕೆ ಕಾರಣವಾಗಿದೆ. ಈ ಗೆಲುವು ಆಸ್ಟ್ರೇಲಿಯ ನೆಲದಲ್ಲಿ ಭಾರತವು ಮೊದಲ ಬಾರಿ ಟೆಸ್ಟ್ ಸರಣಿ ಗೆಲ್ಲಲು ಕಾರಣವಾಗಿತ್ತು.
ಚೇತೇಶ್ವರ ಪೂಜಾರ 123 ರನ್ ಗಳಿಸಿದ್ದರು. ಆದರೆ ಭಾರತವು 250 ರನ್‌ಗೆ ಆಲೌಟಾಗಿತ್ತು. ಉತ್ತಮ ಬೌಲಿಂಗ್ ಮಾಡಿದ್ದ ಬೌಲರ್‌ಗಳು ಪ್ರವಾಸಿಗರಿಗೆ 15 ರನ್ ಮುನ್ನಡೆ ಒದಗಿಸಿಕೊಟ್ಟಿದ್ದರು. ಭಾರತ ತಂಡವು ಆಸ್ಟ್ರೇಲಿಯದ ಗೆಲುವಿಗೆ 323 ರನ್ ಗುರಿ ನೀಡಿತ್ತು. ಜಸ್‌ಪ್ರಿತ್ ಬುಮ್ರಾ(3-68), ಮುಹಮ್ಮದ್ ಶಮಿ(3-65) ಹಾಗೂ ಅಶ್ವಿನ್(3-92)ಬೌಲಿಂಗ್‌ನಲ್ಲಿ ಮಿಂಚಿದ್ದು, ಆಸ್ಟ್ರೇಲಿಯ ತಂಡವನ್ನು 291 ರನ್‌ಗೆ ಆಲೌಟ್ ಮಾಡಿ 31 ರನ್ ಗೆಲುವು ತಂದುಕೊಟ್ಟಿದ್ದರು.
ಇದು 2003ರ ನಂತರ ಅಡಿಲೇಡ್‌ನಲ್ಲಿ ಭಾರತ ಟೆಸ್ಟ್ ಪಂದ್ಯದಲ್ಲಿ ದಾಖಲಿಸಿದ್ದ ಮೊದಲ ಗೆಲುವಾಗಿತ್ತು. ಭಾರತದ ಐತಿಹಾಸಿಕ 2-1 ಸರಣಿ ಗೆಲುವಿಗೆ ಇದು ನಾಂದಿ ಹಾಡಿತ್ತು. ಭಾರತವು ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಗೆದ್ದಿರುವ ಏಶ್ಯದ ಮೊದಲ ತಂಡ ಎನಿಸಿಕೊಂಡಿತ್ತು.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಅಗ್ರ ಸರದಿಯ ಬ್ಯಾಟರ್ ಶುಭಮನ್ ಗಿಲ್ ಅವರು ಆಡುವ 11ರ ಬಳಗಕ್ಕೆ ವಾಪಾಗಲಿದ್ದಾರೆ. ರೋಹಿತ್ ಅವರು ಜಸ್‌ಪ್ರಿತ್ ಬುಮ್ರಾರಿಂದ ನಾಯಕತ್ವವಹಿಸಿಕೊಳ್ಳಲಿದ್ದಾರೆ.
ಯಶಸ್ವಿ ಜೈಸ್ವಾಲ್ ಜೊತೆಗೆ ಕೆ.ಎಲ್.ರಾಹುಲ್ ಇನಿಂಗ್ಸ್ ಆರಂಭಿಸುವುದನ್ನು ಮುಂದುವರಿಸಲಿದ್ದಾರೆ ಎಂದು ರೋಹಿತ್ ದೃಢಪಡಿಸಿದ್ದಾರೆ. ಹೀಗಾಗಿ ರೋಹಿತ್ ಮಧ್ಯಮ ಸರದಿಯಲ್ಲಿ ಆಡಲಿದ್ದಾರೆ.
ವೈಯಕ್ತಿಕ ಕಾರಣದಿಂದಾಗಿ ರೋಹಿತ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಮೊದಲ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ ರಾಹುಲ್ ಹಾಗೂ ಜೈಸ್ವಾಲ್ ದಾಖಲೆಯ 201 ರನ್ ಜೊತೆಯಾಟ ನಡೆಸಿದ್ದರು.
ಮತ್ತೊಂದೆಡೆ ರೋಹಿತ್ ಕಳಪೆ ಫಾರ್ಮ್‌ನಲ್ಲಿದ್ದು, ಹಿಂದಿನ 10 ಇನಿಂಗ್ಸ್‌ಗಳಲ್ಲಿ 52 ಟಾಪ್ ಸ್ಕೋರ್ ಆಗಿದೆ. ರೋಹಿತ್ 2018-19ರ ಆಸ್ಟ್ರೇಲಿಯ ಪ್ರವಾಸದ ವೇಳೆ ಎಂಸಿಜಿಯಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಔಟಾಗದೆ 63 ರನ್ ಗಳಿಸಿದ್ದರು.
ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಗಾಯದ ಸಮಸ್ಯೆ ಎದುರಿಸುತ್ತಿರುವ ಕಾರಣ ಆಸ್ಟ್ರೇಲಿಯ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಹೇಝಲ್‌ವುಡ್ ಬದಲಿಗೆ ಸ್ಕಾಟ್ ಬೋಲ್ಯಾಂಡ್ ಆಡುವ ಸಾಧ್ಯತೆಯಿದೆ.
ಆಸ್ಟ್ರೇಲಿಯ ಕ್ರಿಕೆಟ್ ತಂಡವು ಒಂದು ಬದಲಾವಣೆ ಮಾಡುವ ನಿರೀಕ್ಷೆ ಇದ್ದು, ಗಾಯಗೊಂಡಿರುವ ಹೇಝಲ್‌ವುಡ್ ಬದಲಿಗೆ ಬೋಲ್ಯಾಂಡ್ ಆಡುವ ಅವಕಾಶ ಪಡೆಯಲಿದ್ದಾರೆ. ಕಳೆದ ಋತುವಿನಲ್ಲಿ ಒಂದೂ ಪಂದ್ಯ ಆಡದ ಬೋಲ್ಯಾಂಡ್ ಎರಡು ವರ್ಷಗಳ ನಂತರ ಸ್ವದೇಶದಲ್ಲಿ ಟೆಸ್ಟ್ ಪಂದ್ಯ ಆಡಲಿದ್ದಾರೆ. ಎರಡು ಡೇ-ನೈಟ್ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 7 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ರಾಹುಲ್ ಹಾಗೂ ಜೈಸ್ವಾಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ರೋಹಿತ್ ಮಧ್ಯಮ ಸರದಿಯಲ್ಲಿ ಆಡಲಿದ್ದಾರೆ. ಆದರೆ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎನ್ನುವುದು ದೃಢಪಟ್ಟಿಲ್ಲ. ಶುಭಮನ್ ಗಿಲ್ 3ನೇ ಕ್ರಮಾಂಕದಲ್ಲಿ ವಾಪಸಾಗುವ ನಿರೀಕ್ಷೆ ಇದೆ. ಗಿಲ್ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರೋಹಿತ್ ಅವರು ರಿಷಭ್ ಪಂತ್‌ಗಿಂತ ಮೊದಲು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಬ್ಯಾಟಿಂಗ್ ಮಾಡಬಲ್ಲ ವಾಶಿಂಗ್ಟನ್ ಸುಂದರ್ ಅವರು ಅಡಿಲೇಡ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಅಶ್ವಿನ್‌ರನ್ನು ಹಿಂದಿಕ್ಕಿ ಮತ್ತೊಮ್ಮೆ ಆಡುವ ಬಳಗ ಸೇರಲು ಸಜ್ಜಾಗಿದ್ದಾರೆ. ಆಲ್‌ರೌಂಡರ್ ನಿತೇಶ್ ಕುಮಾರ್ ರೆಡ್ಡಿ ಅವರು ತನ್ನ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ.
►ಪಿಚ್ ಹಾಗೂ ವಾತಾವರಣ
ಪಂದ್ಯದ ಮೊದಲ ದಿನದಾಟದಲ್ಲಿ ಗುಡುಗು ಸಹಿತ ಮಳೆ ಬೀಳುವ ಮುನ್ಸೂಚನೆ ಇದೆ. ಮಳೆಯು ಮೊದಲೆರಡು ದಿನದ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಆದರೆ ಆ ನಂತರ ವಾತಾವರಣ ತಿಳಿಯಾಗಲಿದೆ. ಪಂದ್ಯ ಮುಂದುವರಿದಂತೆ ಪಿಚ್ ಬೌಲರ್‌ಗಳ ಸ್ನೇಹಿಯಾಗಲಿದೆ. ಬ್ಯಾಟರ್‌ಗಳು ರನ್ ಗಳಿಸಲು ಕಷ್ಟಪಡಬಹುದು.
ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಬಳಸುವ ಪಿಂಕ್ ಬಣ್ಣದ ಚೆಂಡು ಸ್ವಿಂಗ್ ಆಗಲಿದ್ದು, ಅಡಿಲೇಡ್ ಓವಲ್ ಪಿಚ್ ಬ್ಯಾಟರ್‌ಗಳಿಗೆ ಸವಾಲಾಗಬಹುದು.
ಐತಿಹಾಸಿಕವಾಗಿ ಅಡಿಲೇಡ್ ಓವಲ್‌ನಲ್ಲಿ ಟಾಸ್ ಗೆದ್ದ ತಂಡಗಳು ಮಿಶ್ರ ಫಲಿತಾಂಶಗಳನ್ನು ಪಡೆದಿವೆ. ಇಲ್ಲಿ ಆಡಿರುವ 6 ಡೇ/ನೈಟ್ ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಗೆದ್ದಿರುವ ತಂಡವು ಕೇವಲ 3 ಬಾರಿ ಜಯಶಾಲಿಯಾಗಿದೆ. ಈ ಪ್ರತಿಷ್ಠಿತ ಮೈದಾನದಲ್ಲಿ 6 ಡೇ/ನೈಟ್ ಟೆಸ್ಟ್ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿರುವ ತಂಡ ಕೂಡ 3 ಬಾರಿ ಗೆಲುವು ದಾಖಲಿಸಿದೆ.
► ಅಂಕಿ-ಅಂಶ
*ಆಸ್ಟ್ರೇಲಿಯ ತಂಡವು ಅಡಿಲೇಡ್‌ನಲ್ಲಿ ಆಡಿರುವ ಎಲ್ಲ 7 ಡೇ-ನೈಟ್ ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿದೆ. 2015-16ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಡಿರುವ ಮೊತ್ತ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಕಡಿಮೆ ಅಂತರದಿಂದ(3 ವಿಕೆಟ್)ಗೆದ್ದುಕೊಂಡಿತ್ತು.
* ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಿದ ಮೊದಲ ಬೌಲರ್ ಎನಿಸಿಕೊಳ್ಳಲು ಜಸ್‌ಪ್ರಿತ್ ಬುಮ್ರಾಗೆ ಕೇವಲ ಒಂದು ವಿಕೆಟ್ ಅಗತ್ಯವಿದೆ.
*ಒಂದು ವೇಳೆ ಅಡಿಲೇಡ್ ಓವಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಶತಕ ಗಳಿಸಿದರೆ, ಈ ಮೈದಾನದಲ್ಲಿ 4 ನೇ ಶತಕ ಗಳಿಸಿದ ಪ್ರವಾಸಿ ತಂಡದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.
►ತಂಡಗಳು
ಭಾರತ(ಸಂಭಾವ್ಯ): 1. ಯಶಸ್ವಿ ಜೈಸ್ವಾಲ್, 2. ಕೆ.ಎಲ್.ರಾಹುಲ್, 3. ಶುಭಮನ್ ಗಿಲ್, 4. ವಿರಾಟ್ ಕೊಹ್ಲಿ, 5. ರೋಹಿತ್ ಶರ್ಮಾ(ನಾಯಕ), 6. ರಿಷಭ್ ಪಂತ್(ವಿಕೆಟ್ ಕೀಪರ್), 7. ವಾಶಿಂಗ್ಟನ್ ಸುಂದರ್, 8. ನಿತೇಶ್ ಕುಮಾರ್ ರೆಡ್ಡಿ, 9. ಹರ್ಷಿತ್ ರಾಣಾ, 10. ಜಸ್‌ಪ್ರಿತ್ ಬುಮ್ರಾ, 11. ಮುಹಮ್ಮದ್ ಸಿರಾಜ್.
ಆಸ್ಟ್ರೇಲಿಯ(ಸಂಭಾವ್ಯ): 1. ಉಸ್ಮಾನ್ ಖ್ವಾಜಾ, 2. ನಾಥನ್ ಮೆಕ್‌ಸ್ವೀನಿ, 3. ಮಾರ್ನಸ್ ಲಾಬುಶೇನ್, 4. ಸ್ಟೀವನ್ ಸ್ಮಿತ್, 5. ಟ್ರಾವಿಸ್ ಹೆಡ್, 6. ಮಿಚೆಲ್ ಮಾರ್ಷ್, 7. ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), 8. ಪ್ಯಾಟ್ ಕಮಿನ್ಸ್(ನಾಯಕ), 9. ಮಿಚೆಲ್ ಸ್ಟಾರ್ಕ್, 10. ನಾಥನ್ ಲಿಯೊನ್, 11. ಸ್ಕಾಟ್ ಬೋಲ್ಯಾಂಡ್.
ಪಂದ್ಯ ಆರಂಭದ ಸಮಯ: ಬೆಳಗ್ಗೆ 9:30
(ಭಾರತೀಯ ಕಾಲಮಾನ)