ನಾಳೆ (ಡಿ.3) ಬೆಂಗಳೂರಿನಲ್ಲಿ ಭಾರತ-ಆಸಿಸ್ ಕೊನೆಯ ಟಿ20

Update: 2023-12-02 17:19 GMT

Photo: PTI

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಟ್ವೆಂಟಿ20 ಕ್ರಿಕೆಟ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯ ರವಿವಾರ ಬೆಂಗಳೂರಿನ ಚಿನ್ನಾಸ್ವಾಮಿ ಸ್ಟೇಡಿಯಮ್‍ನಲ್ಲಿ ನಡೆಯಲಿದೆ.

ಸರಣಿಯನ್ನು ಭಾರತವು ಈಗಾಗಲೇ 3-1 ಅಂತರದಿಂದ ಗೆದ್ದಿರುವ ಹಿನ್ನೆಲೆಯಲ್ಲಿ, ನಾಳಿನ ಪಂದ್ಯಕ್ಕೆ ಹೆಚ್ಚಿನ ಮಹತ್ವವಿಲ್ಲ. ಆದರೆ, ಮುಂಬರುವ ದಕ್ಷಿಣ ಆಫ್ರಿಕ ಪ್ರವಾಸಕ್ಕೆ ಇದನ್ನು ಅಭ್ಯಾಸ ಪಂದ್ಯದ ಮಾದರಿಯಲ್ಲಿ ಆಡಲು ಭಾರತೀಯ ಆಟಗಾರರು ಮುಂದಾಗಬಹುದಾಗಿದೆ. ಮುಂಬರುವ ಪ್ರವಾಸದ ತಮ್ಮ ತಂತ್ರಗಾರಿಕೆಗಳನ್ನು ಸದೃಢಗೊಳಿಸಲು ಮತ್ತು ಆಟಗಾರರ ಪಾತ್ರಗಳನ್ನು ನಿರ್ಣಯಿಸಲು ಒಂದು ವೇದಿಕೆಯನ್ನಾಗಿ ಈ ಪಂದ್ಯವನ್ನು ಭಾರತೀಯ ತಂಡಾಡಳಿತ ಬಳಸಿಕೊಳ್ಳಬಹುದು.

ಈ ಪಂದ್ಯವನ್ನು ಮುಖ್ಯವಾಗಿ ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಾಹರ್ ಅವರ ಸಾಮಥ್ರ್ಯಗಳನ್ನು ಪರೀಕ್ಷೆಗೊಳಪಡಿಸಲು ತಂಡಾಡಳಿತವು ಬಳಸಿಕೊಳ್ಳಬಹುದಾಗಿದೆ. ಇವರಿಬ್ಬರೂ ತುಂಬಾ ಸಮಯದ ಬಳಿಕ ಟ್ವೆಂಟಿ20 ಕ್ರಿಕೆಟ್‍ಗೆ ಮರಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‍ನಲ್ಲಿ ಉತ್ತಮ ಫಾರ್ಮ್‍ನಲ್ಲಿದ್ದ ಅಯ್ಯರ್, ಶುಕ್ರವಾರ ರಾಯ್ಪುರದಲ್ಲಿ ನಡೆದ ನಾಲ್ಕನೇ ಟ್ವೆಂಟಿ20 ಪಂದ್ಯದಲ್ಲಿ ಕಳೆಗುಂದಿದಂತೆ ಕಂಡರು. ಅವರು ಏಳು ಎಸೆತಗಳಲ್ಲಿ ಎಂಟು ರನ್‍ಗಳನ್ನು ಗಳಿಸಿ ನಿರ್ಗಮಿಸಿದರು.

ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಟಿ20 ಕ್ರಿಕೆಟ್‍ನಿಂದ ಹೊರಗಿದ್ದ ಮುಂಬೈ ಆಟಗಾರ ಅಯ್ಯರ್, ಚುಟುಕು ಮಾದರಿಯ ಕ್ರಿಕೆಟ್‍ನಲ್ಲಿ ಲಯವನ್ನು ಕಂಡುಕೊಳ್ಳಲು ಹಾಗೂ ಪರಿಣಾಮ ಬೀರಲು ಉತ್ಸುಕರಾಗಿದ್ದಾರೆ. ಈ ಹಿಂದೆ, ಅವರು ಇದೇ ಚಿನ್ವಾಸ್ವಾಮಿ ಸ್ಟೇಡಿಯಮ್‍ನಲ್ಲಿ ನೆದರ್‍ಲ್ಯಾಂಡ್ಸ್ ವಿರುದ್ಧ ಶತಕ ಬಾರಿಸಿದ್ದಾರೆ.

ಅದೇ ರೀತಿ, ಗಾಯದಿಂದಾಗಿ ಸುದೀರ್ಘ ಕಾಲ ವಿಶ್ರಾಂತಿಯಲ್ಲಿದ್ದ ದೀಪಕ್ ಚಾಹರ್, ಟಿ20 ತಂಡಕ್ಕೆ ಮರುಪ್ರವೇಶ ಮಾಡಿದ್ದಾರೆ.

ಒಂದು ವರ್ಷಕ್ಕೂ ಅಧಿಕ ಅವಧಿಯಲ್ಲಿ ತಂಡದಿಂದ ಹೊರಗಿದ್ದ ಬಳಿಕ, ಆಸ್ಟ್ರೇಲಿಯ ವಿರುದ್ಧದ ನಾಲ್ಕನೇ ಟ್ವೆಂಟಿ20 ಪಂದ್ಯದಲ್ಲಿ ಆಡಲು ಅವರು ತಂಡಕ್ಕೆ ಮರಳಿದ್ದರು. ಅವರು ಮಹತ್ವದ ವಿಕೆಟ್‍ಗಳನ್ನು ಪಡೆದಿರುವರಾದರೂ, ಹೆಚ್ಚು ರನ್‍ಗಳನ್ನು ಬಿಟ್ಟುಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಪ್ರಭಾವಿ ನಿರ್ವಹಣೆ ನೀಡುವ ಮೂಲಕ ತಂಡಕ್ಕೆ ತನ್ನ ಮರುಆಗಮನವನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಅವರು ಪ್ರಯತ್ನಗಳನ್ನು ಮಾಡಬೇಕಾಗಿದೆ.

ದಕ್ಷಿಣ ಆಫ್ರಿಕ ಪ್ರವಾಸಕ್ಕೆ ಮುನ್ನ, ಆಫ್-ಸ್ಪಿನ್ನಿಂಗ್ ಆಲ್‍ರೌಂಡರ್ ವಾಶಿಂಗ್ಟನ್ ಸುಂದರ್‍ ರ ಸಾಮಥ್ರ್ಯವನ್ನೂ ಅಳೆಯಲು ತಂಡಾಡಳಿತವು ಉತ್ಸುಕವಾಗಿದೆ. ಭಾರತದ ದಕ್ಷಿಣ ಆಫ್ರಿಕ ಪ್ರವಾಸವು ಟ್ವೆಂಟಿ20 ಪಂದ್ಯದೊಂದಿಗೆ ಡಿಸೆಂಬರ್ 10ರಂದು ಆರಂಭಗೊಳ್ಳಲಿದೆ.

ತನ್ನ ಕ್ರೀಡಾ ಬದುಕಿನ ಮಹತ್ವದ ಸಂದರ್ಭಗಳಲ್ಲಿ ಗಾಯದ ಸಮಸ್ಯೆಗೆ ಒಳಗಾಗುತ್ತಾ ಬಂದಿರುವ ಸುಂದರ್, ಈ ಬಾರಿ ಉತ್ತಮ ದೈಹಿಕ ಕ್ಷಮತೆಯ ಮಟ್ಟವನ್ನು ಪ್ರದರ್ಶಿಸಿದ್ದಾರೆ. ಅವರು ನಾಳಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಬಹುದಾಗಿದೆ. ಬಹುಷಃ ಅವರು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್‍ರ ಸ್ಥಾನವನ್ನು ಪಡೆಯಬಹುದಾಗಿದೆ. ಅವರ ದೈಹಿಕ ಕ್ಷಮತೆಯ ಮಟ್ಟ ಮತ್ತು ಫಾರ್ಮನ್ನು ಅಂದಾಜಿಸಲು ತಂಡಾಡಳಿತಕ್ಕೆ ಇದೊಂದು ಅವಕಾಶವಾಗಿದೆ.

ಸರಣಿಯನ್ನು ಈಗಾಗಲೇ 3-1 ಅಂತರದಿಂದ ಗೆದ್ದಿರುವುದರಿಂದ ಆಟಗಾರರ ಸಂಯೋಜನೆಗಳಲ್ಲಿ ಪ್ರಯೋಗ ಮಾಡಲು ಮತ್ತು ಆಟಗಾರರ ಸಾಮಥ್ರ್ಯಗಳನ್ನು ಅಳೆಯಲು ಭಾರತ ಮುಂದಾಗಬಹುದಾಗಿದೆ.

ಸೂರ್ಯಕುಮಾರ್ ಯಾದವ್, ಋತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್ ಮತ್ತು ಇಶಾನ್ ಕಿಶನ್ ಈಗಾಗಲೇ ಅತ್ಯುತ್ತಮ ಫಾರ್ಮ್‍ನಲ್ಲಿ ಇದ್ದಾರೆ. ಏಳು ವಿಕೆಟ್‍ಗಳನ್ನು ಪಡೆದು ಬೌಲಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಲೆಗ್‍ಸ್ಪಿನ್ನರ್ ರವಿ ಬಿಷ್ಣೋಯ್ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ನೊಂದೆಡೆ, ಮ್ಯಾಥ್ಯೂ ವೇಡ್ ನೇತೃತ್ವದ ಆಸ್ಟ್ರೇಲಿಯ ತಂಡಕ್ಕೆ ಕಳೆದುಕೊಳ್ಳುವುದೇನೂ ಇಲ್ಲ. ಅವರು ಭಾರತೀಯ ಪರಿಸ್ಥಿತಿಗೆ ಹೊಂದಿಕೊಂಡು ನಿರಂತರವಾಗಿ ಸುಧಾರಿತ ಪ್ರದರ್ಶನಗಳನ್ನು ನೀಡುತ್ತಾ ಬರುತ್ತಿದ್ದಾರೆ. ಸರಣಿಯನ್ನು ಕಳೆದುಕೊಂಡರೂ, ಕೊನೆಯ ಪಂದ್ಯವನ್ನು ಗೆದ್ದು ಧನಾತ್ಮಕ ಮನೋಭಾವದೊಂದಿಗೆ ಸರಣಿಯನ್ನು ಮುಕ್ತಾಯಗೊಳಿಸುವುದನ್ನು ಎದುರು ನೋಡುತ್ತಿದ್ದಾರೆ.

ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ತಂಡದ ಸಾಧನೆ ಅಮೋಘವಾಗಿದೆ. ಸರಣಿಯ ಅಂತಿಮ ಪಂದ್ಯವನ್ನು ಅದು ಗೆದ್ದರೆ, ಆ ತಂಡದ ಪ್ರವಾಸಕ್ಕೆ ಲಭಿಸುವ ಅತ್ಯುತ್ತಮ ಮುಕ್ತಾಯವಾಗಲಿದೆ.

ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ (ವಿಕೆಟ್‍ಕೀಪರ್), ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಮ್ ದುಬೆ, ರವಿ ಬಿಷ್ಣೋಯ್, ಅರ್ಶದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್ ಮತ್ತು ಮುಕೇಶ್ ಕುಮಾರ್.

ಆಸ್ಟ್ರೇಲಿಯ: ಮ್ಯಾಥ್ಯೂ ವೇಡ್ (ನಾಯಕ), ಜಾಸನ್ ಬೆಹ್ರನ್‍ಡಾರ್ಫ್, ಟಿಮ್ ಡೇವಿಡ್, ಬೆನ್ ಡ್ವಾರ್ಶೂಯಿಸ್, ನತಾನ್ ಎಲಿಸ್, ಕ್ರಿಸ್ ಗ್ರೀನ್, ಆರೋನ್ ಹಾರ್ಡೀ, ಟ್ರಾವಿಸ್ ಹೆಡ್, ಬೆನ್ ಮೆಕ್‍ಡರ್ಮಟ್, ಜೋಶ್ ಫಿಲಿಪ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್ ಮತ್ತು ಕೇನ್ ರಿಚಡ್ರ್ಸನ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News