ನಾಳೆ ಪುಣೆಯಲ್ಲಿ ಎರಡನೇ ಟೆಸ್ಟ್ ಆರಂಭ | ಒತ್ತಡದಲ್ಲಿ ಭಾರತ, ಕಿವೀಸ್‌ಗೆ ಸರಣಿ ಗೆಲ್ಲುವ ಕನಸು

Update: 2024-10-23 16:21 GMT

PC : PTI

ಪುಣೆ : ಭಾರತ ಹಾಗೂ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳು ಗುರುವಾರದಿಂದ ಎರಡನೇ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿವೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿನ್ನಡೆಯಲ್ಲಿರುವ ಭಾರತ ತಂಡಕ್ಕೆ ಸರಣಿಯನ್ನು ಗೆಲ್ಲಲು ಮಾತ್ರವಲ್ಲ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

2017ರಲ್ಲಿ ಆಸ್ಟ್ರೇಲಿಯ ವಿರುದ್ದ ಹಾಗೂ 2021ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋತಿದ್ದ ಭಾರತವು ಆ ನಂತರ ಸರಣಿಯನ್ನು ಜಯಿಸಿ ಪುಟಿದೆದ್ದಿತ್ತು. ಈ ಎರಡು ಸರಣಿಗಳಲ್ಲಿ 4 ಪಂದ್ಯಗಳಿದ್ದವು. ಕಿವೀಸ್ ವಿರುದ್ದ ಸದ್ಯ ಒಂದು ಪಂದ್ಯ ಸೋತಿರುವ ಭಾರತ ತಂಡ ಇನ್ನೆರಡು ಪಂದ್ಯ ಆಡಲು ಬಾಕಿ ಇದೆ.

ಕಿವೀಸ್ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಜಯಿಸಿದ್ದರೂ ಪುಣೆ ಟೆಸ್ಟ್‌ನಲ್ಲಿ ಭಾರತ ತಂಡವೇ ಫೇವರಿಟ್ ಆಗಿದೆ. ಪುಣೆ ಪಿಚ್ ಬೆಂಗಳೂರಿನಂತಿಲ್ಲ. ಭಾರತವು ಸರಣಿಯಲ್ಲಿ ಸಮಬಲ ಸಾಧಿಸಲು ಎಲ್ಲ ಪ್ರಯತ್ನ ನಡೆಸಲಿದೆ.

ಕಿವೀಸ್ ತಂಡವು ಮತ್ತೊಮ್ಮೆ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಆಡಲಿದೆ. ಮಂಗಳವಾರ 3 ಗಂಟೆ ಅಭ್ಯಾಸ ನಡೆಸಿದೆ. ಭಾರತ ತಂಡ ಮಧ್ಯಾಹ್ನ 1:30ಕ್ಕೆ ಪ್ರಾಕ್ಟೀಸ್‌ಗೆ ಆಗಮಿಸಿದಾಗ ಪಂದ್ಯದ ಪಿಚ್ ಮೇಲಿದ್ದ ಹೊದಿಕೆಯನ್ನು ತೆಗೆಯಲಾಯಿತು.

►ಪಂತ್, ಗಿಲ್ ಫಿಟ್, ರಾಹುಲ್ ಸ್ಥಾನಕ್ಕೆ ಸಂಚಕಾರ

ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ಮೊಣಕಾಲು ನೋವಿಗೆ ಒಳಗಾಗಿದ್ದ ರಿಷಭ್ ಪಂತ್ ಫಿಟ್ ಇದ್ದಾರೆ. ಅವರು ವಿಕೆಟ್‌ ಕೀಪಿಂಗ್ ಮಾಡಲೂ ಶಕ್ತರಾಗಿದ್ದಾರೆ ಎಂದು ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೊಶೆಟ್ ಹೇಳಿದ್ದಾರೆ.

ಕೆ.ಎಲ್.ರಾಹುಲ್ ಬ್ಯಾಟಿಂಗ್ ಫಾರ್ಮ್ ಬಗ್ಗೆ ಕಳವಳ ಇಲ್ಲ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಪುಣೆ ಟೆಸ್ಟ್‌ಗೆ ಅಗ್ರ ಸರದಿಯ ಬ್ಯಾಟರ್ ಶುಭಮನ್ ಗಿಲ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಯಾನ್ ಹೇಳಿದ್ದಾರೆ.

ಬೆಂಗಳೂರು ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಸ್ಪೆಲ್ ಎಸೆದಿರುವ ಮುಹಮ್ಮದ್ ಸಿರಾಜ್‌ರನ್ನು ಶ್ಲಾಘಿಸಿದ ರಯಾನ್, ಆಕಾಶ್‌ದೀಪ್ ಆಡುವ ಅವಕಾಶವನ್ನೂ ಪಡೆಯಬಹುದು. ಆರ್. ಅಶ್ವಿನ್‌ಗೆ ಯಾವುದೇ ಗಾಯದ ಸಮಸ್ಯೆ ಇಲ್ಲ. ಮೊದಲ ಟೆಸ್ಟ್ ಪಂದ್ಯದ ಕಳಪೆ ಪ್ರದರ್ಶನಕ್ಕೆ ಭಾರತದ ಸ್ಪಿನ್ ವಿಭಾಗವನ್ನು ದೂಷಿಸುವುದಿಲ್ಲ ಎಂದು ರಯಾನ್ ಹೇಳಿದ್ದಾರೆ.

ಭಾರತ ತಂಡವು ಆಡುವ 11ರ ಬಳಗಕ್ಕೆ ಸಂಬಂಧಿಸಿ ಎರಡು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದೆ. ಗಿಲ್ ವಾಪಸಾಗಲು ಸಜ್ಜಾಗಿದ್ದು, ಕಳೆದ ವರ್ಷದಿಂದ ಮಧ್ಯಮ ಸರದಿಯಲ್ಲಿ ಆಡಲು ಆರಂಭಿಸಿದ ನಂತರ 1 ಶತಕ ಹಾಗೂ ಎರಡು ಅರ್ಧಶತಕಗಳನ್ನು ಗಳಿಸಿರುವ ಕೆ.ಎಲ್.ರಾಹುಲ್ ಅಥವಾ ಬೆಂಗಳೂರು ಟೆಸ್ಟ್‌ನಲ್ಲಿ ಭರ್ಜರಿ ಶತಕ ಗಳಿಸಿದ್ದ ಸರ್ಫರಾಝ್ ಖಾನ್ ಪೈಕಿ ಒಬ್ಬರು ಹೊರಗುಳಿಯಬೇಕಾಗುತ್ತದೆ.

2021ರಲ್ಲಿ ಸೌತಾಂಪ್ಟನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜಯಿಸಿ ಭಾರತದ ಕನಸನ್ನು ನುಚ್ಚುನೂರು ಮಾಡಿದ್ದ ಕಿವೀಸ್ ಪಡೆ ರವಿವಾರ 36 ವರ್ಷಗಳ ನಂತರ ಭಾರತದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಜಯಿಸಿ ಇತಿಹಾಸ ನಿರ್ಮಿಸಿತ್ತು. ಅದೇ ದಿನ ನ್ಯೂಝಿಲ್ಯಾಂಡ್‌ನ ಮಹಿಳಾ ತಂಡ ಕೂಡ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿತ್ತು.

►ಕಮ್‌ಬ್ಯಾಕ್ ಕಿಂಗ್ ಟೀಮ್ ಇಂಡಿಯಾ

2021ರಲ್ಲಿ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಸೋತ ನಂತರ ಮುಂದಿನ 3 ಟೆಸ್ಟ್ ಪಂದ್ಯಗಳನ್ನು ಭಾರೀ ಅಂತರದಿಂದ ಗೆದ್ದುಕೊಂಡಿತ್ತು. ಈ ಟೆಸ್ಟ್‌ನಲ್ಲಿ 60 ವಿಕೆಟ್‌ಗಳ ಪೈಕಿ 55 ವಿಕೆಟ್ ಸ್ಪಿನ್ನರ್‌ಗಳ ಪಾಲಾಗಿದ್ದವು.

► 2024ರಲ್ಲಿ ಹೈದರಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋತ ನಂತರ ಭಾರತವು 4-1 ಅಂತರದಿಂದ ಸರಣಿ ಜಯಿಸಿತ್ತು. ಆಗ ವೇಗದ ಬೌಲರ್‌ಗಳು ಕೊನೆಯ 4 ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಉರುಳಿಸಿದ್ದರು.

► 2023ರಲ್ಲಿ ಇಂದೋರ್ ಟೆಸ್ಟ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಸೋತಾಗ 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿತ್ತು. ಅಹ್ಮದಾಬಾದ್ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಪಿಚ್ ಸಿದ್ದಪಡಿಸಿದ್ದ ಭಾರತವು ಪಂದ್ಯವನ್ನು ಡ್ರಾಗೊಳಿಸಿತ್ತು.

► 2021ರಲ್ಲಿ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ 36 ರನ್‌ಗೆ ಆಲೌಟಾದ ನಂತರ ಭಾರತ ತಂಡವು ಎಂಸಿಜಿ ಟೆಸ್ಟ್ ಪಂದ್ಯವನ್ನು ಜಯಿಸಿತ್ತು.

► ಈಗ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಬೆಂಗಳೂರಿನಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯವನ್ನು ಸೋತಿರುವ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 46 ರನ್‌ಗೆ ಆಲೌಟಾಗಿದ್ದರೂ, ಎರಡನೇ ಇನಿಂಗ್ಸ್‌ನಲ್ಲಿ 462 ರನ್ ಗಳಿಸಿತ್ತು.

►ತಂಡಗಳು

ಭಾರತ : 1. ಯಶಸ್ವಿ ಜೈಸ್ವಾಲ್, 2. ರೋಹಿತ್ ಶರ್ಮಾ(ನಾಯಕ), 3. ಶುಭಮನ್ ಗಿಲ್, 4. ವಿರಾಟ್ ಕೊಹ್ಲಿ, 5. ರಿಷಭ್ ಪಂತ್(ವಿಕೆಟ್‌ ಕೀಪರ್), 6. ಕೆ.ಎಲ್.ರಾಹುಲ್/ಸರ್ಫರಾಝ್ ಖಾನ್, 7. ರವೀಂದ್ರ ಜಡೇಜ, 8. ಆರ್.ಅಶ್ವಿನ್, 9. ಕುಲದೀಪ್ ಯಾದವ್, 10. ಜಸ್‌ಪ್ರಿತ್ ಬುಮ್ರಾ, 11. ಮುಹಮ್ಮದ್ ಸಿರಾಜ್/ಆಕಾಶ್ ದೀಪ್.

ನ್ಯೂಝಿಲ್ಯಾಂಡ್: 1. ಟಾಮ್ ಲ್ಯಾಥಮ್(ನಾಯಕ), 2. ಡೆವೊನ್ ಕಾನ್ವೆ, 3. ವಿಲ್ ಯಂಗ್, 4. ರಚಿನ್ ರವೀಂದ್ರ, 5. ಡ್ಯಾರಿಲ್ ಮಿಚೆಲ್, 6. ಟಾಮ್ ಬ್ಲಂಡೆಲ್(ವಿಕೆಟ್‌ ಕೀಪರ್), 7. ಗ್ಲೆನ್ ಫಿಲಿಪ್ಸ್, 8. ಮಿಚೆಲ್ ಸ್ಯಾಂಟ್ನರ್, 9. ಟಿಮ್ ಸೌಥಿ/ವಿಲ್ ಒ ರೂರ್ಕಿ, 10. ಮ್ಯಾಟ್ ಹೆನ್ರಿ, 11. ಅಜಾಝ್ ಪಟೇಲ್.

►ಪಿಚ್ ಹಾಗೂ ವಾತಾವರಣ

ಭಾರತ ತಂಡವು ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಭಾರೀ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ನಂತರ ನ್ಯೂಝಿಲ್ಯಾಂಡ್ ವೇಗಿಗಳಿಂದ ರೋಹಿತ್ ಬಳಗಕ್ಕೆ ಹೆಚ್ಚು ಹಾನಿಯಾಗದ ರೀತಿಯಲ್ಲಿ ಪುಣೆ ಪಿಚ್ ಸಿದ್ದಪಡಿಸಲಾಗಿದೆ. ಪಿಚ್ ನಿಧಾನಗತಿಯಲ್ಲಿ ವರ್ತಿಸಲಿದ್ದು, ಪಂದ್ಯ ಮುಂದುವರಿದಂತೆ ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ಪುಣೆಯಲ್ಲಿ ಎಲ್ಲ ಐದು ದಿನಗಳಲ್ಲಿ ಬಿಸಿಲಿನ ವಾತಾವರಣವನ್ನು ನಿರೀಕ್ಷಿಸಲಾಗಿದೆ.

· ಪಂದ್ಯ ಆರಂಭದ ಸಮಯ : ಬೆಳಗ್ಗೆ 9:30

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News