ಟಿ20 ಕ್ರಿಕೆಟ್‌ನಲ್ಲಿ ಝಿಂಬಾಬ್ವೆಯಿಂದ ವಿಶ್ವ ದಾಖಲೆ | 344 ರನ್‌ಗಳ ಬೃಹತ್ ಮೊತ್ತ
ಢಾಕಾ : ಝಿಂಬಾಬ್ವೆಯು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಂಡದ ಮೊತ್ತದಲ್ಲಿ ನೂತನ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಅದು ಬುಧವಾರ ಗಾಂಬಿಯ ವಿರುದ್ಧ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ ಸಬ್ ರೀಜನಲ್ ಆಫ್ರಿಕ ಅರ್ಹತಾ ಸುತ್ತಿನ ಪಂದ್ಯದಲ್ಲಿ 344 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿದೆ.
ಇದರೊಂದಿಗೆ ಅದು ನೇಪಾಳದ ದಾಖಲೆಯನ್ನು ಹಿಂದಿಕ್ಕಿದೆ. ನೇಪಾಳವು 2023ರಲ್ಲಿ, ಹಾಂಗ್‌ಝೂ ಏಶ್ಯನ್ ಗೇಮ್ಸ್‌ನಲ್ಲಿ ಮಂಗೋಲಿಗೋಲಿಯ ವಿರುದ್ಧ 314 ರನ್‌ಗಳನ್ನು ಬಾರಿಸಿತ್ತು.
ಈ ದಾಖಲೆಗೆ ಮಹತ್ವದ ದೇಣಿಗೆ ನೀಡಿದರು ನಾಯಕ ಸಿಕಂದರ್ ರಝ. ಅವರು 43 ಎಸೆತಗಳಲ್ಲಿ 133 ರನ್‌ಗಳನ್ನು ಗಳಿಸಿ ಅಜೇಯವಾಗಿ ಉಳಿದರು. ಅವರು 15 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳನ್ನು ಸಿಡಿಸಿದರು. ಇದರೊಂದಿಗೆ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಝಿಂಬಾಬ್ವೆ ಆಟಗಾರನಾಗಿಯೂ ಅವರು ಇತಿಹಾಸ ಸೇರಿದರು. ಅವರು ಕೇವಲ 33 ಎಸೆತಗಳಲ್ಲಿ ಶತಕ ಸಂಪೂರ್ಣಗೊಳಿಸಿದರು.
ಆರಂಭಿಕರಾದ ಬ್ರಯಾನ್ ಬೆನೆಟ್ ಮತ್ತು ಟಿ. ಮರುಮಣಿ ಗಾಂಬಿಯನ್ ಬೌಲಿಂಗ್ ದಾಳಿಯನ್ನು ಪುಡಿಗೈದರು. ಅವರು ಮೊದಲ ವಿಕೆಟ್‌ಗೆ ಕೇವಲ 5.4 ಓವರ್‌ಗಳಲ್ಲಿ 98 ರನ್‌ಗಳ ಭಾಗೀದಾರಿಕೆ ನಿಭಾಯಿಸಿದರು. ಬೆನೆಟ್ 26 ಎಸೆತಗಳಲ್ಲಿ 50 ರನ್‌ಗಳನ್ನು ಗಳಿಸಿದರೆ, ಮರುಮಣಿ 19 ಎಸೆತಗಳಲ್ಲಿ 62 ರನ್‌ಗಳನ್ನು ಸಿಡಿಸಿದರು.
ಕ್ಲೈವ್ ಮಡಾಂಡೆ 17 ಎಸೆತಗಳಲ್ಲಿ 53 ರನ್‌ಗಳನ್ನು ಸಿಡಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು.
ಝಿಂಬಾಬ್ವೆಯು ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಕಳೆದುಕೊಂಡು 344 ರನ್ ಕಲೆಹಾಕಿತು.
ಈ ಪಂದ್ಯವನ್ನು ಝಿಂಬಾಬ್ವೆ 290 ರನ್‌ಗಳ ಭರ್ಜರಿ ಅಂತರದಿಂದ ಗಾಂಬಿಯವನ್ನು ಸೋಲಿಸಿತು.
ಗಾಂಬಿಯ 14.4 ಓವರ್‌ಗಳಲ್ಲಿ ಕೇವಲ 54 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಗಾಂಬಿಯ ಪರವಾಗಿ ಆ್ಯಂಡ್ರಿ ಜರ್ಜು 12 ಎಸೆತಗಳಲ್ಲಿ 12 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಅದು ತಂಡದ ಗರಿಷ್ಠ ವೈಯಕ್ತಿಕ ಮೊತ್ತವಾಯಿತು.