ಭಾರತದ ಪದಕದ ನಿರೀಕ್ಷೆಗೂ ತೀವ್ರ ಹಿನ್ನಡೆ | 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹಾಕಿ, ಶೂಟಿಂಗ್, ಕ್ರಿಕೆಟ್, ಬ್ಯಾಡ್ಮಿಂಟನ್, ಕುಸ್ತಿಗೆ ಅವಕಾಶ ಇಲ್ಲ

Update: 2024-10-22 16:37 GMT

PC : PTI 

ಹೊಸದಿಲ್ಲಿ: ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೊ ನಗರದ ಆತಿಥ್ಯದಲ್ಲಿ ನಡೆಯಲಿರುವ 2026ರ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಪ್ರಮುಖ ಕ್ರೀಡೆಗಳಾದ ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್ ಹಾಗೂ ಶೂಟಿಂಗ್ ಅನ್ನು ಕೈಬಿಡಲಾಗಿದ್ದು, ಇದರಿಂದಾಗಿ ಗೇಮ್ಸ್‌ನಲ್ಲಿ ಭಾರತದ ಪದಕದ ನಿರೀಕ್ಷೆೆಗೆ ತೀವ್ರ ಹಿನ್ನಡೆಯಾಗಿದೆ.

ಭಾರತವು ಈ ಹಿಂದಿನ ಆವೃತ್ತಿಯ ಗೇಮ್ಸ್‌ಗಳಲ್ಲಿ ಈ ಐದು ಕ್ರೀಡೆಗಳಲ್ಲಿ ಹೆಚ್ಚಿನ ಪದಕಗಳನ್ನು ಜಯಿಸಿತ್ತು. 4 ವರ್ಷಗಳ ಹಿಂದೆ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಿಂದ ಕೈಬಿಡಲಾಗಿದ್ದ ಶೂಟಿಂಗ್ ಕ್ರೀಡೆ ಈ ಬಾರಿ ಮರಳುವ ನಿರೀಕ್ಷೆ ಇರಲಿಲ್ಲ.

ವೆಚ್ಚವನ್ನು ಮಿತಿಗೊಳಿಸಲು ಹಾಗೂ ಲಾಜಿಸ್ಟಿಕ್ಸ್ ಅನ್ನು ಸುವ್ಯವಸ್ಥಿತಗೊಳಿಸಲು ಟೇಬಲ್ ಟೆನಿಸ್, ಸ್ಕ್ವಾಷ್ ಹಾಗೂ ಟ್ರಯಥ್ಲಾನ್‌ಗಳನ್ನು ಕೂಡ ಗೇಮ್ಸ್‌ನಿಂದ ಕೈಬಿಡಲಾಗಿದೆ. ಇಡೀ ಗೇಮ್ಸ್ ಕೇವಲ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ. 2014ರಲ್ಲಿ ಹಾಕಿ ಹಾಗೂ ಕುಸ್ತಿಯ ಆತಿಥ್ಯವಹಿಸಿದ್ದ ಗ್ಲಾಸ್ಗೊ ಹಾಗೂ ಸ್ಕಾಟಿಂಗ್ ಎಕ್ಸಿಬಿಶನ್ ಆ್ಯಂಡ್ ಕಾನ್ಫರೆನ್ಸ್ ಸೆಂಟರ್ ಅನ್ನು ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದೆ. 2022ರ ಬರ್ಮಿಂಗ್‌ಹ್ಯಾಮ್ ಆವೃತ್ತಿಯ ಗೇಮ್ಸ್‌ಗೆ ಹೋಲಿಸಿದರೆ ಈ ಬಾರಿ 9 ಸ್ಪರ್ಧೆಗಳು ಇರುವುದಿಲ್ಲ.

ಕ್ರೀಡಾಕೂಟವು 10 ಕ್ರೀಡೆಗಳನ್ನು ಒಳಗೊಂಡಿರುತ್ತದೆ. ಇದು ಬಹು ಕ್ರೀಡಾ ಭಾವನೆಯನ್ನು ಹೊಂದಿದೆ. ಹಣಕಾಸಿನ ಹಾಗೂ ಕಾರ್ಯನಿರ್ವಹಣೆಯ ಅಪಾಯವನ್ನು ನಿರ್ವಹಿಸುವ ಅಗತ್ಯತೆಯ ನಡುವೆ ಸಮತೋಲನವನ್ನು ಸಾಧಿಸುತ್ತದೆ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕ್ರೀಡಾ ಕಾರ್ಯಕ್ರಮವು ಅಥ್ಲೆಟಿಕ್ಸ್ ಹಾಗೂ ಪ್ಯಾರಾ ಅಥ್ಲೆಟಿಕ್ಸ್(ಟ್ರ್ಯಾಕ್ ಆ್ಯಂಡ್ ಫೀಲ್ಡ್), ಈಜು ಹಾಗೂ ಪ್ಯಾರಾ ಈಜು, ಕಲಾತ್ಮಕ ಜಿಮ್ನಾಸ್ಟಿಕ್ಸ್, ಟ್ರ್ಯಾಕ್ ಸೈಕ್ಲಿಂಗ್ ಹಾಗೂ ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್, ನೆಟ್‌ಬಾಲ್, ವೇಟ್‌ಲಿಫ್ಟಿಂಗ್ ಹಾಗೂ ಪ್ಯಾರಾ ಪವರ್‌ಲಿಫ್ಟಿಂಗ್, ಬಾಕ್ಸಿಂಗ್, ಜೂಡೊ, ಬೌಲ್ಸ್ ಹಾಗೂ ಪ್ಯಾರಾ ಬೌಲ್ಸ್, 3-3 ಬಾಸ್ಕೆಟ್‌ಬಾಲ್ ಹಾಗೂ 3-3 ವೀಲ್‌ಚೇರ್ ಬಾಸ್ಕೆಟ್‌ಬಾಲ್ ಒಳಗೊಂಡಿದೆ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

23ನೇ ಆವೃತ್ತಿಯ ಮೆಗಾ ಇವೆಂಟ್ ಜುಲೈ 23ರಿಂದ ಆಗಸ್ಟ್ 2ರ ತನಕ ನಡೆಯಲಿದೆ. 2014ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯವಹಿಸಿದ್ದ ಗ್ಲಾಸ್ಗೊ ನಗರವು 12 ವರ್ಷಗಳ ನಂತರ ಮತ್ತೊಮ್ಮೆ ಗೇಮ್ಸ್ ಆಯೋಜಿಸುತ್ತಿದೆ.

ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯವು 2026ರ ಗೇಮ್ಸ್ ಆತಿಥ್ಯವನ್ನು ವಹಿಸಬೇಕಾಗಿತ್ತು. ಆದರೆ, ಹೆಚ್ಚುತ್ತಿರುವ ವೆಚ್ಚವನ್ನು ಮುಂದಿಟ್ಟುಕೊಂಡು ಗೇಮ್ಸ್ ಆಯೋಜನೆಯಿಂದ ಹಿಂದೆ ಸರಿದಿತ್ತು. ಆಗ ಸ್ಕಾಟ್‌ಲ್ಯಾಂಡ್, ಗೇಮ್ಸ್ ಆಯೋಜನೆಗೆ ಮುಂದಾಗಿತ್ತು.

2002ರ ಮ್ಯಾಂಚೆಸ್ಟರ್ ಗೇಮ್ಸ್‌ನಿಂದ ಪ್ಯಾರಾ ಕ್ರೀಡಾಳುಗಳು ಗೇಮ್ಸ್‌ನ ಭಾಗವಾಗಿದ್ದು, 2026ರ ಆವೃತ್ತಿಯಲ್ಲೂ ಅದು ಮುಂದುವರಿಯಲಿದೆ.

ಪ್ಯಾರಾ ಸ್ಪೋರ್ಟ್ಸ್ ಮತ್ತೊಮ್ಮೆ ಕ್ರೀಡಾಕೂಟದ ಪ್ರಮುಖ ಆದ್ಯತೆಯಾಗಿದ್ದು, ಕ್ರೀಡಾ ಕಾರ್ಯಕ್ರಮದಲ್ಲಿ ಆರು ಪ್ಯಾರಾ ಕ್ರೀಡೆಗಳನ್ನು ಸೇರಿಸಲಾಗಿದೆ ಎಂದು ಸಿಜಿಎಫ್ ತಿಳಿಸಿದೆ.

►2026ರ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗಿಟ್ಟಿರುವ ಕ್ರೀಡೆಗಳಲ್ಲಿ ಭಾರತದ ಈ ತನಕದ ಪ್ರದರ್ಶನ

► 2026ರ ಸಿಡಬ್ಲ್ಯುಜಿಯಿಂದ ಹಾಕಿ ಕ್ರೀಡೆಯನ್ನು ಹೊರಗಿಟ್ಟಿರುವುದು ಭಾರತಕ್ಕೆ ಭಾರೀ ಹಿನ್ನಡೆವುಂಟು ಮಾಡಿದೆ. ಭಾರತದ ಪುರುಷರ ಹಾಕಿ ತಂಡವು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 3 ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಜಯಿಸಿತ್ತು. ಮಹಿಳಾ ಹಾಕಿ ತಂಡ ಕೂಡ ಗೇಮ್ಸ್‌ನಲ್ಲಿ ಮಿಂಚಿದ್ದು, 2002ರ ಗೇಮ್ಸ್‌ನಲ್ಲಿ ಐತಿಹಾಸಿಕ ಚಿನ್ನ ಸಹಿತ ಒಟ್ಟು 3 ಪದಕಗಳನ್ನು ಗೆದ್ದುಕೊಂಡಿತ್ತು.

► ಬ್ಯಾಡ್ಮಿಂಟನ್‌ನಲ್ಲಿ ಭಾರತೀಯ ಕ್ರೀಡಾಳುಗಳು 10 ಚಿನ್ನ, 8 ಬೆಳ್ಳಿ ಹಾಗೂ 13 ಕಂಚು ಸಹಿತ 31 ಪದಕಗಳನ್ನು ಬಾಚಿಕೊಂಡಿದ್ದರು. ಭಾರತವು 2026ರ ಆವೃತ್ತಿಗೆ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್, ಪುರುಷರ ಡಬಲ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಬೇಕಿತ್ತು.

► ಶೂಟಿಂಗ್ ಕ್ರೀಡೆಯಲ್ಲಿ ಭಾರತ ಪ್ರಾಬಲ್ಯ ಸಾಧಿಸಿದ್ದು, ಒಟ್ಟು 135 ಪದಕಗಳನ್ನು ಜಯಿಸಿದೆ. ಇದರಲ್ಲಿ 63 ಚಿನ್ನ, 44 ಬೆಳ್ಳಿ ಹಾಗೂ 28 ಕಂಚಿನ ಪದಕಗಳು ಸೇರಿವೆ.

► ಕುಸ್ತಿ ಸ್ಪರ್ಧಾವಳಿಯಲ್ಲಿ ಭಾರತ ತಂಡವು 49 ಚಿನ್ನ, 39 ಬೆಳ್ಳಿ ಹಾಗೂ 26 ಕಂಚು ಸಹಿತ ಒಟ್ಟು 114 ಪದಕಗಳನ್ನು ಗೆದ್ದುಕೊಂಡಿತ್ತು.

► 2022ರಲ್ಲಿ ಕ್ರಿಕೆಟನ್ನು ಮರು ಪರಿಚಯಿಸಿದ ನಂತರ ಭಾರತೀಯ ಮಹಿಳೆಯರ ತಂಡವು ಬೆಳ್ಳಿ ಪದಕ ಜಯಿಸಿತ್ತು.

► ಟೇಬಲ್ ಟೆನಿಸ್‌ನಲ್ಲಿ ಭಾರತವು 10 ಚಿನ್ನ, 5 ಬೆಳ್ಳಿ ಹಾಗೂ 13 ಕಂಚಿನ ಪದಕಗಳ ಸಹಿತ ಒಟ್ಟು 28 ಪದಕಗಳನ್ನು ಜಯಿಸಿತ್ತು. ಸ್ಕ್ವಾಷ್‌ನಲ್ಲಿ ಐದು ಪದಕಗಳನ್ನು ಗೆದ್ದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News