ಟಿ20 ವಿಶ್ವಕಪ್ ಫೈನಲ್ ಗೆದ್ದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು? ಸ್ವಾರಸ್ಯಕರ ಮಾಹಿತಿ ಹಂಚಿಕೊಂಡ ಸಂಜು ಸ್ಯಾಮ್ಸನ್

Update: 2024-10-22 03:01 GMT

PC: PTI 

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಜತೆಗಿನ ಸಂಬಂಧದ ಬಗ್ಗೆ ಮಾತನಾಡಿರುವ ಭಾರತೀಯ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್, ಕಳೆದ ಟಿ20 ವಿಶ್ವಕಪ್ ಫೈನಲ್ ಆಡುವ 11 ಮಂದಿಯ ತಂಡದಿಂದ ತಮ್ಮನ್ನು ಕೈಬಿಟ್ಟ ಬಳಿಕ ಏನಾಯಿತು ಎಂಬ ಸ್ವಾರಸ್ಯಕರ ಅಂಶವನ್ನು ಬಹಿರಂಗಪಡಿಸಿದ್ದಾರೆ.

ವಿಮಲ್ ಕುಮಾರ್ ಅವರ ಯೂಟ್ಯೂಬ್ ಚಾನಲ್ ಜತೆ ಮಾತನಾಡಿದ ಅವರು, ಬಾರ್ಬಡೋಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದೆ. ಆದರೆ ಹಿಂದಿನ ಪಂದ್ಯದ ಬ್ಯಾಟಿಂಗ್ ಸರದಿಯನ್ನೇ ಉಳಿಸಿಕೊಳ್ಳಲು ತಂಡ ನಿರ್ಧರಿಸಿತು ಎಂದು ಹೇಳಿದರು.

"ಫೈನಲ್ ಆಡಲು ನನಗೆ ಅವಕಾಶವಿತ್ತು. ಸಜ್ಜಾಗಿರಲು ನನಗೆ ಸೂಚನೆಯೂ ಇತ್ತು. ನಾನು ಸಿದ್ಧವಾಗಿದ್ದೆ. ಆದರೆ ಟಾಸ್ ಗಿಂತ ಸ್ವಲ್ಪ ಮೊದಲು ಹಿಂದಿನ 11 ಮಂದಿ ಆಟಗಾರರನ್ನೇ ಉಳಿಸಿಕೊಳ್ಳಲು ನಿರ್ಧರಿಸಿದರು. ಅಭ್ಯಾಸದ ವೇಳೆ, ರೋಹಿತ್ ನನ್ನನ್ನು ಪಕ್ಕಕ್ಕೆ ಕರೆದೊಯ್ದು ನಿರ್ಧಾರವನ್ನು ತಿಳಿಸಿದರು. ನಿನಗೆ ಅರ್ಥವಾಗುತ್ತದೆಯಲ್ಲವೇ ಎಂದು ಕೇಳಿದರು" ಎಂದು ವಿವರಿಸಿದ್ದಾರೆ. "ಮೊದಲು ಪಂದ್ಯ ಗೆಲ್ಲುವತ್ತ ಗಮನ ಹರಿಸೋಣ. ಆ ಬಳಿಕ ಮಾತನಾಡೋಣ" ಎಂದು ತಾವು ಹೇಳಿದ್ದಾಗಿ ಸ್ಯಾಮ್ಸನ್ ತಿಳಿಸಿದ್ದಾರೆ.

"ನನಗೆ ನಿರಾಶೆಯಾಗಿದೆ ಎಂದು ತಿಳಿದು ಮತ್ತೆ ಪಕ್ಕಕ್ಕೆ ಬಂದ ರೋಹಿತ್, ನೀನು ಮನಸ್ಸಿನಲ್ಲೇ ನನಗೆ ಶಾಪ ಹಾಕಿಕೊಳ್ಳುತ್ತಿದ್ದಿ ಎಂದು ನನಗೆ ಗೊತ್ತು ಎಂದರು.

“ಆಟಗಾರನಾಗಿ ನಾನು ಆಡಲು ಬಯಸುತ್ತೇನೆ. ಇಂಥ ಕ್ಷಣದಲ್ಲಿ ಸಾಧನೆ ಪ್ರದರ್ಶಿಸುವುದು ನನ್ನ ಕನಸು” ಎಂದು ಹೇಳಿದೆ. ಆಗ ರೋಹಿತ್ ಈ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸಿದರು. ಈ ವಿವರಣೆಯನ್ನು ನಾನು ಗೌರವಿಸುವುದಾಗಿ ರೋಹಿತ್ಗೆ ತಿಳಿಸಿದೆ. ಆದರೆ ವಿಶ್ವಕಪ್ ಫೈನಲ್ ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡೆ ಎಂಬ ಬೇಸರ ಸದಾ ಇದೆ ಎಂದು ಬಹಿರಂಗಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News