ಆರ್ಚರಿ ವಿಶ್ವಕಪ್ ಫೈನಲ್ | 5ನೇ ಬಾರಿ ಬೆಳ್ಳಿ ಗೆದ್ದ ದೀಪಿಕಾ, ಧೀರಜ್ ವಿಫಲ

Update: 2024-10-21 15:20 GMT

ದೀಪಿಕಾ ಕುಮಾರಿ | PTI 

ಹೊಸದಿಲ್ಲಿ : ಭಾರತದ ಪ್ರಮುಖ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಆರ್ಚರಿ ವಿಶ್ವಕಪ್ ಫೈನಲ್ ನಲ್ಲಿ ಚೀನಾದ ಲಿ ಜಿಯಾಮನ್ ಎದುರು 0-6ರಿಂದ ಸೋಲನುಭವಿಸಿದ ನಂತರ ಐದನೇ ಬಾರಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.

2022ರ ಡಿಸೆಂಬರ್ ನಲ್ಲಿ ಪುತ್ರಿಗೆ ಜನ್ಮ ನೀಡಿದ ನಂತರ ಮೂರು ವರ್ಷಗಳ ನಂತರ ವಿಶ್ವಕಪ್ ಫೈನಲ್ಗೆ ಮರಳಿದ ನಾಲ್ಕು ಬಾರಿಯ ಒಲಿಂಪಿಯನ್ ದೀಪಿಕಾ ಕುಮಾರಿ 8 ಆರ್ಚರಿಗಳಿದ್ದ ಸ್ಪರ್ಧೆಯಲ್ಲಿ 3ನೇ ಶ್ರೇಯಾಂಕ ಪಡೆದಿದ್ದಾರೆ.

ಸೆಮಿ ಫೈನಲ್ ಹಂತವನ್ನು ಸುಲಭವಾಗಿ ದಾಟಿದ ದೀಪಿಕಾ ಕುಮಾರಿ 4ನೇ ಶ್ರೇಯಾಂಕದ ಲಿ ಜಿಯಾಮನ್ ವಿರುದ್ಧದ ಚಿನ್ನದ ಪದಕದ ಪಂದ್ಯದಲ್ಲಿ ಒತ್ತಡ ಎದುರಿಸಿದರು. ಜಿಯಾಮನ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ವಿಶ್ವಕಪ್ ಫೈನಲ್ ನಲ್ಲಿ 9ನೇ ಬಾರಿ ಕಾಣಿಸಿಕೊಂಡಿರುವ ದೀಪಿಕಾ ಅವರು ಈ ಹಿಂದೆ ಕಂಚಿನ ಪದಕ ಕೂಡ ಗೆದ್ದಿದ್ದಾರೆ.

ಡೋಲಾ ಬ್ಯಾನರ್ಜಿ ವಿಶ್ವಕಪ್ ಫೈನಲ್ ನಲ್ಲಿ ಚಿನ್ನದ ಪದಕ ಜಯಿಸಿರುವ ಭಾರತದ ಏಕೈಕ ಬಿಲ್ಲುಗಾರ್ತಿಯಾಗಿದ್ದಾರೆ. 2007ರಲ್ಲಿ ದುಬೈನಲ್ಲಿ ನಡೆದ ವಿಶ್ವಕಪ್ ನಲ್ಲಿ ಬ್ಯಾನರ್ಜಿ ಮೊದಲ ಸ್ಥಾನ ಪಡೆದಿದ್ದರು.

ಪುರುಷರ ರಿಕರ್ವ್ ವಿಭಾಗದಲ್ಲಿ ಧೀರಜ್ ಬೊಮ್ಮದೇವರ 4-2 ಮುನ್ನಡೆ ಪಡೆದ ಹೊರತಾಗಿಯೂ ದಕ್ಷಿಣ ಕೊರಿಯಾದ, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ಲೀ ವೂ ಸೆವೊಕ್ ಎದುರು ಮೊದಲ ಸುತ್ತಿನಲ್ಲಿ ಸೋಲನುಭವಿಸಿ ಬೇಗನೆ ನಿರ್ಗಮಿಸಿದರು.

ಮೂರು ಕಾಂಪೌಂಡ್ ಹಾಗೂ ಎರಡು ರಿಕರ್ವ್ ಆರ್ಚರ್ಗಳನ್ನೊಳಗೊಂಡ ಐವರು ಸದಸ್ಯರ ಭಾರತದ ಆರ್ಚರಿ ತಂಡವು ವರ್ಷಾಂತ್ಯದಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಅಭಿಯಾನವನ್ನು ಕೇವಲ ಒಂದು ಪದಕದೊಂದಿಗೆ ಅಂತ್ಯಗೊಳಿಸಿದೆ.

ಸೆಮಿ ಫೈನಲ್ ನಲ್ಲಿ  ಮೆಕ್ಸಿಕೊದ ಅಲೆಜಾಂಡ್ರ ವಲೆನ್ಸಿಯಾ ಎದುರು 6-4 ಅಂತರದಿಂದ ಜಯ ಸಾಧಿಸಿದ್ದ ದೀಪಿಕಾ ಅದೇ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾದರು.

ಫೈನಲ್ ಪಂದ್ಯದಲ್ಲಿ ದೀಪಿಕಾ ಅವರು ಚೀನಾ ಆಟಗಾರ್ತಿ ಲೀ ಎದುರು ಮೊದಲ ಸೆಟ್ ಅನ್ನು ಒಂದೇ ಅಂಕ(26-27)ದಿಂದ ಕಳೆದುಕೊಂಡರು. ಎರಡನೇ ಸೆಟ್ನಲ್ಲಿ ಲೀ ಅವರು 30-28 ಅಂತರದಿಂದ ಜಯ ಸಾಧಿಸಿದರು. ಮೂರನೇ ಸೆಟ್ ಅನ್ನು 27-25 ಅಂತರದಿಂದ ಗೆದ್ದುಕೊಂಡಿರುವ ಲೀ ಅವರು ತನ್ನ ಚೊಚ್ಚಲ ವಿಶ್ವಕಪ್ ಫೈನಲ್ನಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡರು.

ಪುರುಷರ ರಿಕರ್ವ ನಲ್ಲಿ 3ನೇ ಶ್ರೇಯಾಂಕದ ಧೀರಜ್ ಮಾತ್ರ ಅರ್ಹತೆ ಪಡೆದಿದ್ದರು. ಎರಡನೇ ಶ್ರೇಯಾಂಕದ ಲೀ ವೂ ಸೆಯೊಕ್ರನ್ನು ಎದುರಿಸಿದ ಧೀರಜ್ ಮೊದಲ ಸೆಟ್ ನ ಡ್ರಾ ಮಾಡಿಕೊಂಡು 2ನೇ ಸೆಟ್ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಆದರೆ, 3ನೇ ಸೆಟ್ನಲ್ಲಿ ಡ್ರಾಕ್ಕೆ ತೃಪ್ತಿಪಟ್ಟು ಅವಕಾಶ ಕೈಚೆಲ್ಲಿದರು.ದಕ್ಷಿಣ ಕೊರಿಯಾದ ಸೆಯೊಕ್ 4ನೇ ಹಾಗೂ 5ನೇ ಸೆಟ್ಗಳನ್ನು ಗೆದ್ದುಕೊಂಡರು.

ಅಂತಿಮವಾಗಿ ಧೀರಜ್ 4-6 ಅಂತರದಿಂದ ಸೋತಿದ್ದಾರೆ.

ಕಾಂಪೌಂಡ್ ವಿಭಾಗದಲ್ಲಿ ಭಾರತದ ಮೂವರು ಸ್ಪರ್ಧಿಗಳು ಬರಿಗೈಯಲ್ಲಿ ವಾಪಸಾಗಿದ್ದಾರೆ. ಪ್ರಥಮೇಶ್ ಸೆಮಿ ಫೈನಲ್ನಲ್ಲಿ ಸೋತ ನಂತರ 4ನೇ ಸ್ಥಾನ ಪಡೆದರೆ, ಪ್ರಿಯಾಂಶ್ ಹಾಗೂ ಜ್ಯೋತಿ ಸುರೇಖಾ ಪದಕ ಸುತ್ತಿಗೆ ತಲುಪುವಲ್ಲಿ ವಿಫಲರಾದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News