ಎರಡನೇ ಟೆಸ್ಟ್‌ಗೆ ರಿಷಭ್ ಪಂತ್ ಫಿಟ್ : ಭಾರತದ ಸಹಾಯಕ ಕೋಚ್ ವಿಶ್ವಾಸ

Update: 2024-10-22 16:31 GMT

ರಿಷಭ್ ಪಂತ್ |  PC : PTI  

ಹೊಸದಿಲ್ಲಿ : ನ್ಯೂಝಿಲ್ಯಾಂಡ್ ವಿರುದ್ಧ ಪುಣೆಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ರಿಷಭ್ ಪಂತ್ ಫಿಟ್ ಇದ್ದಾರೆ. ಅವರು ವಿಕೆಟ್‌ಕೀಪಿಂಗ್ ನಡೆಸುವ ವಿಶ್ವಾಸದಲ್ಲಿದ್ದೇನೆ ಎಂದು ಭಾರತದ ಸಹಾಯಕ ಕೋಚ್ ರಯಾನ್ ಡೊಶೆಟ್ ಹೇಳಿದ್ದಾರೆ.

ಓಡುವಾಗ ಅವರ ಮೊಣಕಾಲಿನಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ವಿಕೆಟ್‌ ಕೀಪಿಂಗ್ ನಡೆಸುವ ಸಾಧ್ಯತೆ ಇದೆ ಎಂದು ರಯಾನ್ ಹೇಳಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ ಬೆಂಗಳೂರು ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಪಂತ್ ಅವರು ತನ್ನ ಮೊಣಕಾಲಿಗೆ ಇಂಜೆಕ್ಷನ್ ತೆಗೆದುಕೊಂಡಿದ್ದರು.

ಪಂತ್ ಅವರು 2022ರ ಡಿಸೆಂಬರ್‌ನಲ್ಲಿ ನಡೆದಿದ್ದ ಭೀಕರ ಕಾರು ಅಪಘಾತದ ವೇಳೆ ಆಗಿರುವ ತೀವ್ರ ಗಾಯದಿಂದ ಚೇತರಿಸಿಕೊಳ್ಳಲು ಒಂದೂವರೆ ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 99 ರನ್ ಗಳಿಸಿದ್ದ ಹೊರತಾಗಿಯೂ ಪಂತ್ ಅವರು ಕೊನೆಯ ದಿನದಾಟದಲ್ಲಿ ವಿಕೆಟ್‌ ಕೀಪಿಂಗ್ ನಡೆಸಿರಲಿಲ್ಲ.

ಗಾಯದ ಸಮಸ್ಯೆಯ ಕಾರಣ ಪಂತ್ ಅವರು ಮೊದಲ ಟೆಸ್ಟ್‌ನ 3ನೇ ದಿನದಾಟದಲ್ಲಿ ಮೈದಾನಕ್ಕೆ ಇಳಿಯದೆ ವಿಶ್ರಾಂತಿ ಪಡೆದಿದ್ದರು.

ಪಂತ್ ಮೊಣಕಾಲಿನಲ್ಲಿ ಸ್ವಲ್ಪ ಊತ ಕಾಣಿಸಿಕೊಂಡಿದ್ದು, ಮುಂಜಾಗೃತಾ ಕ್ರಮವಾಗಿ ಅವರು ಮೈದಾನದಿಂದ ಹೊರಗುಳಿದಿದ್ದರು ಎಂದು ನಾಯಕ ರೋಹಿತ್ ಸ್ಪಷ್ಟಪಡಿಸಿದ್ದರು.

ಪುಣೆಯಲ್ಲಿ ಗುರುವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಲು ಪಂತ್ ಸನ್ನದ್ಧರಾಗಿದ್ದಾರೆ ಎಂದು ಬಿಸಿಸಿಐನ ವೈದ್ಯಕೀಯ ತಂಡ ವಿಶ್ವಾಸ ವ್ಯಕ್ತಪಡಿಸಿದೆ.

ನ್ಯೂಝಿಲ್ಯಾಂಡ್‌ನ ಮೊದಲ ಇನಿಂಗ್ಸ್ ವೇಳೆ ಪಂತ್ ಅವರ ಬಲ ಮೊಣಕಾಲಿಗೆ ಚೆಂಡು ಅಪ್ಪಳಿಸಿದ ನಂತರ ನೋವು ಕಾಣಿಸಿಕೊಂಡಿತ್ತು. ಅವರಿಗೆ ಇಂಜೆಕ್ಷನ್‌ಗಳನ್ನು ನೀಡಲಾಗಿದೆ. ಅವರು ಇನ್ನೆರಡು ದಿನಗಳಲ್ಲಿ ಫಿಟ್ ಆಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News