ಆಡುವ 11ರ ಬಳಗ ಸೇರಲು ಸರ್ಫರಾಝ್-ರಾಹುಲ್ ಪೈಪೋಟಿ

Update: 2024-10-22 16:50 GMT

ಸರ್ಫರಾಝ್-ರಾಹುಲ್ | PC : X  

ಹೊಸದಿಲ್ಲಿ: ಪುಣೆಯಲ್ಲಿ ಗುರುವಾರದಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 8 ವಿಕೆಟ್‌ಗಳಿಂದ ಸೋಲನುಭವಿಸಿ ನಿರಾಶೆಗೊಂಡಿರುವ ಭಾರತ ಕ್ರಿಕೆಟ್ ತಂಡ ಪ್ರಬಲ ಮರು ಹೋರಾಟ ನೀಡಲು ಸಜ್ಜಾಗುತ್ತಿದೆ. ಸ್ಪರ್ಧಾತ್ಮಕ ಪ್ರದರ್ಶನವನ್ನು ಖಚಿತಪಡಿಸಿಕೊಳ್ಳಲು ಸೂಕ್ತ ತಂಡದ ಸಂಯೋಜನೆಯನ್ನು ಟೀಮ್ ಮ್ಯಾನೇಜ್‌ಮೆಂಟ್ ಪರಿಶೀಲಿಸುತ್ತಿದೆ.

ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ತಂಡಕ್ಕೆ ಸೇರಲಿದ್ದು, ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಪುಣೆ ಪಂದ್ಯಕ್ಕೆ ಫಿಟ್ ಆಗಿದ್ದಾರೆಂದು ಪ್ರಕಟಿಸಲಾಗಿದೆ. ಹೀಗಾಗಿ ಈ ನಿರ್ಣಾಯಕ ಪಂದ್ಯಕ್ಕೆ ಆಡುವ 11ರ ಬಳಗದ ಆಯ್ಕೆ ಗಮನ ಸೆಳೆದಿದೆ. ಟೀಮ್ ಇಂಡಿಯಾವು 3 ಪಂದ್ಯಗಳ ಸರಣಿಯನ್ನು ಸಮಬಲಗೊಳಿಸುವ ಗುರಿ ಇಟ್ಟುಕೊಂಡಿದೆ.

ಗಿಲ್ ಬದಲಿಗೆ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ಯುವ ಆಟಗಾರ ಸರ್ಫರಾಝ್ ಖಾನ್ 2ನೇ ಇನಿಂಗ್ಸ್‌ನಲ್ಲಿ 150 ರನ್ ಗಳಿಸಿದ್ದರು. ಕೆ.ಎಲ್. ರಾಹುಲ್ ಎರಡೂ ಇನಿಂಗ್ಸ್‌ಗಳಲ್ಲಿ ರನ್ ಬರ ಎದುರಿಸಿದ್ದರು.

ಗಿಲ್ ಪುಣೆ ಟೆಸ್ಟ್ ಪಂದ್ಯಕ್ಕೆ ಮರಳಲು ಸಜ್ಜಾಗುತ್ತಿದ್ದು, ಸರ್ಫರಾಝ್ ಹಾಗೂ ರಾಹುಲ್ ಆಡುವ 11ರ ಬಳಗ ಸೇರಲು ಪೈಪೋಟಿ ನಡೆಸುತ್ತಿದ್ದಾರೆ ಎಂದು ಭಾರತದ ಸಹಾಯಕ ಕೋಚ್ ರಯಾನ್ ಡೊಶೆಟ್ ಹೇಳಿದ್ದಾರೆ.

ರಾಹುಲ್ ಹಾಗೂ ಸರ್ಫರಾಝ್ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಕಳೆದ ಟೆಸ್ಟ್ ಪಂದ್ಯದಲ್ಲಿ ಸರ್ಫರಾಝ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ರಾಹುಲ್‌ರ ಫಾರ್ಮ್ ಬಗ್ಗೆ ನಾವು ಚಿಂತಿಸುತ್ತಿಲ್ಲ. ಅವರನ್ನು ಟೆಸ್ಟ್ ಕ್ರಿಕೆಟ್‌ನಿಂದ ಹೊರಗಿಡುವುದು ಕಷ್ಟದ ಕೆಲಸ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ರಾಹುಲ್‌ಗೆ ಮತ್ತಷ್ಟು ಅವಕಾಶ ನೀಡಲು ಬಯಸಿದ್ದಾರೆ. ನಮಗೆ ಅವರ ಮೇಲೆ ಸಾಕಷ್ಟು ನಂಬಿಕೆ ಇದೆ. ಆದರೆ ಈಗ ಸ್ಪರ್ಧಾತ್ಮಕ ವಾತಾವರಣ ಇದೆ. ಸರ್ಫರಾಝ್ ಅವರು ಇರಾನಿ ಕಪ್ ಫೈನಲ್‌ನಲ್ಲಿ 150ಕ್ಕೂ ಅಧಿಕ ರನ್(ಔಟಾಗದೆ 222)ಗಳಿಸಿದ್ದರು. ತಂಡಕ್ಕಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಯಾನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News