ವಿಶ್ವಕಪ್‌ನಲ್ಲಿ 50 ವಿಕೆಟ್ ಕಬಳಿಸಿದ ಕಿವೀಸ್‌ನ ಮೊದಲ ಬೌಲರ್ ಟ್ರೆಂಟ್ ಬೌಲ್ಟ್

Update: 2023-11-09 17:01 GMT

Photo- PTI

ಬೆಂಗಳೂರು: ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್‌ಗಳನ್ನು ಕಬಳಿಸಿದ ನ್ಯೂಝಿಲ್ಯಾಂಡ್ನ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಶ್ರೀಲಂಕಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಗುರುವಾರ ನಡೆದ ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಬೌಲ್ಟ್ ಈ ಸಾಧನೆ ಮಾಡಿದ್ದಾರೆ.

ಟೂರ್ನಿಯಲ್ಲಿ ಒಟ್ಟು 38 ವಿಕೆಟ್‌ಗಳನ್ನು ಪಡೆದಿರುವ ಟಿಮ್ ಸೌಥಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಕುಸಾಲ್ ಮೆಂಡಿಸ್ ವಿಕೆಟ್ ಪಡೆಯುವ ಮೂಲಕ ಬೌಲ್ಟ್ ಈ ಮೈಲಿಗಲ್ಲು ತಲುಪಿದರು.

ಬೌಲ್ಟ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೂರನೇ ಎಡಗೈ ಬೌಲರ್ ಆಗಿದ್ದಾರೆ. ಆಸ್ಟ್ರೇಲಿಯದ ಮಿಚೆಲ್ ಸ್ಟಾರ್ಕ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸ್ಟಾರ್ಕ್ 19.74ರ ಸರಾಸರಿಯಲ್ಲಿ ಒಟ್ಟು 59 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಸ್ಟಾರ್ಕ್ ಅವರು ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಸೀಂ ಅಕ್ರಂ ಹೆಸರಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಕ್ರಂ 23.83ರ ಸರಾಸರಿಯಲ್ಲಿ ಒಟ್ಟು 55 ವಿಕೆಟ್‌ಗಳನ್ನು ಪಡೆದಿದ್ದಾರೆ.

ಶ್ರೀಲಂಕಾದ ಚಾಮಿಂಡಾ ವಾಸ್(49 ವಿಕೆಟ್)ದಾಖಲೆಯನ್ನು ಮುರಿದ ಬೌಲ್ಟ್ ಎಡಗೈ ವೇಗಿಗಳ ವಿಶೇಷ ವಿಭಾಗದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡರು.

ಬೌಲ್ಟ್ ಅವರು ಏಕದಿನ ವಿಶ್ವಕಪ್ ಚರಿತ್ರೆಯಲ್ಲಿ 50 ಇಲ್ಲವೇ ಅದಕ್ಕಿಂತ ಹೆಚ್ಚು ವಿಕೆಟ್ಗಳನ್ನು ಪಡೆದ ಒಟ್ಟಾರೆ ಆರನೇ ಬೌಲರ್ ಎಂಬ ಸಾಧನೆಯನ್ನೂ ಮಾಡಿದ್ದಾರೆ. ಆಸ್ಟ್ರೇಲಿಯದ ವೇಗದ ಬೌಲಿಂಗ್ ದಂತಕತೆ ಗ್ಲೆನ್ ಮೆಕ್ಗ್ರಾತ್ 18.19 ಸರಾಸರಿಯಲ್ಲಿ 71 ವಿಕೆಟ್‌ಗಳನ್ನು ಕಬಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಮೆಕ್ಗ್ರಾತ್ ನಂತರ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್(68 ವಿಕೆಟ್) ಅವರಿದ್ದಾರೆ. ಸ್ಟಾರ್ಕ್ ಹಾಗೂ ಲಸಿತ್ ಮಾಲಿಂಗ ಕ್ರಮವಾಗಿ 59 ಹಾಗೂ 56 ವಿಕೆಟ್‌ಗಳನ್ನು ಪಡೆದು 3, 4ನೇ ಸ್ಥಾನದಲ್ಲಿದ್ದಾರೆ. ವಸೀಂ ಅಕ್ರಮ್(55 ವಿಕೆಟ್) ಹಾಗೂ ಬೌಲ್ಟ್(52 ವಿಕೆಟ್)ಕ್ರಮವಾಗಿ ಐದನೇ ಹಾಗೂ ಆರನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News