ಅಂಡರ್-19 ಏಶ್ಯಕಪ್: ಭಾರತವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಬಾಂಗ್ಲಾದೇಶ
ದುಬೈ: ಅರೀಫುಲ್ ಇಸ್ಲಾಮ್ ಅರ್ಧಶತ(94 ರನ್), ಎಡಗೈ ವೇಗಿ ಮರೂಫ್ ಮ್ರುಧಾ ನಾಲ್ಕು ವಿಕೆಟ್(4-41)ಗಳ ನೆರವಿನಿಂದ ಭಾರತ ತಂಡವನ್ನು 4 ವಿಕೆಟ್ ಅಂತರದಿಂದ ಮಣಿಸಿದ ಬಾಂಗ್ಲಾದೇಶ ಎಸಿಸಿ ಅಂಡರ್-19 ಏಶ್ಯಕಪ್ ನಲ್ಲಿ ಫೈನಲ್ ಪ್ರವೇಶಿಸಿದೆ.
ಶುಕ್ರವಾರ ನಡೆದ 2ನೇ ಸೆಮಿ ಫೈನಲ್ ನಲ್ಲಿ ಭಾರತದ ಬ್ಯಾಟರ್ ಗಳು ರನ್ ಗಾಗಿ ಪರದಾಟ ನಡೆಸಿದ್ದು 42.4 ಓವರ್ಗಳಲ್ಲಿ 188 ರನ್ ಗಳಿಸಿ ಆಲೌಟಾದರು. ಮುಶೀರ್ ಖಾನ್(50 ರನ್) ಹಾಗೂ ಮುರುಗನ್ ಅಭಿಷೇಕ್(62 ರನ್)ಒಂದಷ್ಟು ಪ್ರತಿರೋಧ ಒಡ್ಡಿದರು. ಮರೂಫ್(4-41) ಭಾರತಕ್ಕೆ ಆರಂಭಿಕ ಆಘಾತ ನೀಡಿದರು.
ಬಾಂಗ್ಲಾದೇಶ ತಂಡ ಅರೀಫುಲ್ ಇಸ್ಲಾಮ್(94 ರನ್,90 ಎಸೆತ)ಅರ್ಧಶತಕದ ನೆರವಿನಿಂದ 42.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಗುರಿ ತಲುಪಿತು. ಬಾಂಗ್ಲಾವು 34 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಇಸ್ಲಾಮ್ ಹಾಗೂ ಅಹ್ರಾರ್ ಅಮಿನ್(44 ರನ್)4ನೇ ವಿಕೆಟ್ಗೆ 138 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಇದೇ ವೇಳೆ ಮೊದಲ ಸೆಮಿ ಫೈನಲ್ ನಲ್ಲಿ ಯುಎಇ ತಂಡ ಪಾಕಿಸ್ತಾನವನ್ನು 11 ರನ್ ನಿಂದ ಸೋಲಿಸಿ ಶಾಕ್ ನೀಡಿತು. ಫೈನಲ್ ನಲ್ಲಿ ಯುಎಇ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ.
ಯುಎಇ 193 ರನ್ ಗೆ ಆಲೌಟಾಯಿತು. ಆ ನಂತರ ಪಾಕಿಸ್ತಾನವು 182 ರನ್ ಗೆ ಗಂಟುಮೂಟೆ ಕಟ್ಟಿತು.