ವಿಧಾನ ಪರಿಷತ್ | ಪ್ರತಿಪಕ್ಷದ ನಾಯಕನ ಆಯ್ಕೆ ಮಾಡುವಲ್ಲಿ ಬಿಜೆಪಿ ವಿಫಲ!

Update: 2024-07-15 16:40 GMT

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಅಧಿವೇಶನದ ಬಿರುಸು ಆರಂಭಗೊಂಡರೂ ವಿಧಾನ ಪರಿಷತ್ತಿಗೆ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುವಲ್ಲಿ ಬಿಜೆಪಿ ವಿಫಲವಾದಂತಾಗಿದೆ.

ಕಲಾಪ ಶುರುವಾಗಿ ಈಗಾಗಲೇ ಒಂದು ದಿನ ಕಳೆದಿದ್ದು ಬಿಜೆಪಿ ನಾಯಕರು ಈವರೆಗೆ ಯಾವುದೇ ಹೆಸರನ್ನು ಅಂತಿಮಗೊಳಿಸದ ಕಾರಣ ವಿರೋಧ ಪಕ್ಷದ ನಾಯಕರ ಸ್ಥಾನ ಖಾಲಿ ಇಟ್ಟೇ ಸದನದಲ್ಲಿ ಬಿಜೆಪಿ ಭಾಗಿಯಾಗಬೇಕಾದ ಸ್ಥಿತಿಯುಂಟಾಗಿದೆ.

ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾಗಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕನ ಸ್ಥಾನ ತೆರವಾಗಿದ್ದು, ಆ ಸ್ಥಾನಕ್ಕೆ ಮತ್ತೊಬ್ಬರ ನೇಮಕ ಮಾಡಲು ಬಿಜೆಪಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ.

ಸೋಮವಾರ ನಡೆದ ಮೊದಲ ದಿನದ ಪರಿಷತ್ ಕಲಾಪದಲ್ಲಿ ವಿಪಕ್ಷದ ನಾಯಕನ ಆಸನ ಖಾಲಿಯಾಗಿತ್ತು. ಅಧಿಕೃತ ಪ್ರತಿಪಕ್ಷ ನಾಯಕರಿಲ್ಲದೆ ಬಿಜೆಪಿ ಸದಸ್ಯರು ಕಲಾಪದಲ್ಲಿ ಭಾಗಿಯಾಗಿದ್ದರು. ವಿರೋಧಪಕ್ಷ ನಾಯಕ ಸ್ಥಾನದ ಹುದ್ದೆ ಖಾಲಿ ಪರಿಣಾಮ ಮೊದಲ ದಿನದ ಕಲಾಪದಲ್ಲಿಯೇ ನಿಲುವಳಿ ಸೂಚನೆ ಮಂಡನೆ, ಪ್ರಶ್ನೋತ್ತರ ಕಲಾಪದಲ್ಲಿ ಉಪ ಪ್ರಶ್ನೆಗಳಿಗೆ ಸಾಥ್ ಕೊರತೆ ಎದ್ದು ಕಾಣಿಸಿತ್ತು.

ವಿರೋಧ ಪಕ್ಷದ ನಾಯಕರು ಯಾವಾಗ ಎದ್ದು ನಿಂತರೂ ಅವರು ಮಾತನಾಡಲು ಅವಕಾಶ ಕೊಡಲಾಗುತ್ತದೆ. ಆದರೆ, ಈಗ ಆ ಸ್ಥಾನ ಖಾಲಿ ಇರುವ ಕಾರಣ ಬಿಜೆಪಿ ಸದಸ್ಯರು ಅಗತ್ಯ ಬಿದ್ದಾಗಲೆಲ್ಲಾ ಮಧ್ಯಪ್ರವೇಶ ಮಾಡಿ ಸರಕಾರವನ್ನು ಟೀಕಿಸುವ ಅವಕಾಶ ತಪ್ಪಿಸಿಕೊಂಡರು. ವರ್ಷದ ಹಿಂದೆಯೂ ಈ ಸ್ಥಾನವನ್ನು ಖಾಲಿಯಾಗಿಟ್ಟೇ ಎರಡು ಅಧಿವೇಶನ ಮುಗಿಸಿದ್ದ ಬಿಜೆಪಿ, ಈಗ ಮತ್ತೊಮ್ಮೆ ಅಂತಹದ್ದೇ ಸ್ಥಿತಿ ಎದುರಿಸುವಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News