ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್: ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ
ಕೊಹ್ಲಿ 111 ಟೆಸ್ಟ್ ಪಂದ್ಯಗಳಲ್ಲಿ 49.38ರ ಸರಾಸರಿಯಲ್ಲಿ 28 ಶತಕಗಳ ಸಹಿತ 8,642 ರನ್ ಗಳಿಸಿದ್ದಾರೆ. ಲೆಜೆಂಡರಿ ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ಮಾಂತ್ರಿಕ ತೆಂಡುಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ.
ಹೊಸದಿಲ್ಲಿ, ಜು.21: ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಕಲೆ ಹಾಕಿದ ಭಾರತದ ಐದನೇ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿರುವ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಗುರುವಾರ ಮತ್ತೊಂದು ಸಾಧನೆ ಮಾಡಿದ್ದಾರೆ. ಟ್ರಿನಿಡಾಡ್ ನ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.
ಸೆಹ್ವಾಗ್ ಅವರ ಒಟ್ಟು 8,586 ಟೆಸ್ಟ್ ರನ್ ದಾಖಲೆಯನ್ನು ಹಿಂದಿಕ್ಕಲು ಕೊಹ್ಲಿಗೆ ಕೇವಲ 32 ರನ್ ಅಗತ್ಯವಿತ್ತು. ಕೊಹ್ಲಿ ಅವರು ಸೆಹ್ವಾಗ್ ರ ಟೆಸ್ಟ್ ರನ್ ದಾಖಲೆ ಮಾತ್ರವಲ್ಲ ಆಸ್ಟ್ರೇಲಿಯದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ದಾಖಲೆಯನ್ನು ಮುರಿದರು. ಹೇಡನ್ ಟೆಸ್ಟ್ ಕ್ರಿಕೆಟ್ ನಲ್ಲಿ 8,625 ರನ್ ಗಳಿಸಿದ್ದಾರೆ.
ಟ್ರಿನಿಡಾಡ್ ನಲ್ಲಿ ಮೊದಲ ದಿನದಾಟದಂತ್ಯಕ್ಕೆ ವಿರಾಟ್ ಕೊಹ್ಲಿ ಔಟಾಗದೆ 87 ರನ್ ಗಳಿಸಿದ್ದು, ಭಾರತದ ಟೆಸ್ಟ್ ಕ್ರಿಕೆಟ್ ನಲ್ಲಿ ಐದನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.
ಕೊಹ್ಲಿ 111 ಟೆಸ್ಟ್ ಪಂದ್ಯಗಳಲ್ಲಿ 49.38ರ ಸರಾಸರಿಯಲ್ಲಿ 28 ಶತಕಗಳ ಸಹಿತ 8,642 ರನ್ ಗಳಿಸಿದ್ದಾರೆ. ಲೆಜೆಂಡರಿ ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ಮಾಂತ್ರಿಕ ತೆಂಡುಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ.
ರಾಹುಲ್ ದ್ರಾವಿಡ್(164 ಟೆಸ್ಟ್, 13,288 ರನ್)2ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿದ ಮೊದಲ ಆಟಗಾರನಾಗಿರುವ ಸುನೀಲ್ ಗವಾಸ್ಕರ್ 125 ಪಂದ್ಯಗಳಲ್ಲಿ 10,122 ರನ್ ಗಳಿಸಿ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 134 ಪಂದ್ಯಗಳಲ್ಲಿ 8,781 ರನ್ ಗಳಿಸಿರುವ ವಿವಿಎಸ್ ಲಕ್ಷ್ಮಣ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಅವರು 500 ಅಂತರ್ ರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶ್ವದ 10ನೇ ಆಟಗಾರ ಹಾಗೂ ಭಾರತದ 4ನೇ ಆಟಗಾರ ಎನಿಸಿಕೊಂಡರು. ಸಚಿನ್ ತೆಂಡುಲ್ಕರ್(664 ಪಂದ್ಯ), ಎಂ.ಎಸ್. ಧೋನಿ(535 ಪಂದ್ಯ) ಹಾಗೂ ರಾಹುಲ್ ದ್ರಾವಿಡ್ (504 ಪಂದ್ಯ) 500ಕ್ಕೂ ಅಧಿಕ ಪಂದ್ಯಗಳನ್ನಾಡಿದ ಭಾರತದ ಇತರ ಆಟಗಾರರಾಗಿದ್ದಾರೆ.