ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 15 ವರ್ಷ ಪೂರ್ಣಗೊಳಿಸಿದ ವಿರಾಟ್ ಕೊಹ್ಲಿ

Update: 2023-08-18 16:18 GMT

Virat Kohli | Photo: Twitter \ @imVkohli

ಮುಂಬೈ : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 15 ವರ್ಷಗಳನ್ನು ಪೂರ್ತಿಗೊಳಿಸಿದ್ದಾರೆ. 19 ವರ್ಷದ ಕೊಹ್ಲಿ 2008 ಆಗಸ್ಟ್ 18ರಂದು ತನ್ನ ಚೊಚ್ಚಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ್ದರು.

ಅವರು ತನ್ನ ಕ್ರಿಕೆಟ್ ವೃತ್ತಿ ಜೀವನವನ್ನು ಆರಂಭಿಸಿದ್ದು ಡಂಬುಲಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ. ಅಂದು ಅವರು ಭಾರತೀಯ ಇನಿಂಗ್ ನನ್ನು ಆರಂಭಿಸಿದರು. ಆ ಮೂಲಕ ಪುರುಷರ ಏಕದಿನ ಆರಂಭಿಕ ಪಂದ್ಯವೊಂದರಲ್ಲಿ ಇನಿಂಗ್ ನ ಆರಂಭಿಸಿದ ಅತಿ ಕಿರಿಯ ಭಾರತೀಯ ಆಟಗಾರ ಅವರಾದರು. ಆ ದಾಖಲೆಯು ಈಗಲೂ ಅವರ ಹೆಸರಿನಲ್ಲಿದೆ.

ಆದರೆ ಅವರ ಚೊಚ್ಚಲ ಪಂದ್ಯ ಗಮನಾರ್ಹವೇನೂ ಆಗಿರಲಿಲ್ಲ. ಅವರು 22 ಎಸೆತಗಳಲ್ಲಿ 12 ರನ್ ಗಳಿಸಿ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಸಂದೇಶವೊಂದನ್ನು ಹಾಕಿರುವ ಕೊಹ್ಲಿ, “ಎಂದಿಗೂ ಕೃತಜ್ಞನಾಗಿದ್ದೇನೆ’’ ಎಂಬುದಾಗಿ ಬರೆದಿದ್ದಾರೆ. ಅದರ ಜೊತೆಗೆ, ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಾನು ಆಡಿದ ಚಿತ್ರವೊಂದನ್ನು ಹಾಕಿದ್ದಾರೆ. ಅವರ ಬ್ಯಾಟಿಂಗ್ ಪರಾಕ್ರಮದ ನೆರವಿನಿಂದ ಆ ಪಂದ್ಯವನ್ನು ಭಾರತ ಗೆದ್ದಿತ್ತು.

ಪ್ರಸಕ್ತ ಐರ್ಲ್ಯಾಂಡ್ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಕೊಹ್ಲಿ ಇಲ್ಲ. ಶ್ರೀಲಂಕಾದಲ್ಲಿ ನಡೆಯಲಿರುವ ಏಶ್ಯಾ ಕಪ್ ಪಂದ್ಯಾವಳಿಯ ಪಂದ್ಯಗಳಲ್ಲಿ ಅವರು ಇನ್ನು ಕಾಣಸಿಗಲಿದ್ದಾರೆ.

ಕೊಹ್ಲಿ ಈವರೆಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 501 ಪಂದ್ಯಗಳಲ್ಲಿ 25,582 ರನ್ ಗಳನ್ನು ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News