ರಿಝ್ವಾನ್ ಸಮಯ ವ್ಯರ್ಥಗೊಳಿಸುತ್ತಿದ್ದಾರೆ ಎನ್ನುವ ವಿರಾಟ್ ಕೊಹ್ಲಿ ಸಂಜ್ಞೆ ವೈರಲ್

Update: 2023-10-15 18:36 GMT

Photo Courtesy-screengrab

ಅಹ್ಮದಾದಬಾದ್, ಅ. 15: ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್ ಸಮಯ ವ್ಯರ್ಥಗೊಳಿಸುತ್ತಿರುವುದನ್ನು ಭಾರತದ ವಿರಾಟ್ ಕೊಹ್ಲಿ ಅಣಕಿಸುತ್ತಿರುವ ದೃಶ್ಯ ವೈರಲ್ ಆಗಿದೆ. ರಿಝ್ವಾನ್ ಸಮಯ ವ್ಯರ್ಥಗೊಳಿಸುತ್ತಿದ್ದಾರೆ ಎಂದು ಸೂಚಿಸಲು ಕೊಹ್ಲಿ ತನ್ನ ಕೈಯ ವಾಚ್ ಕಟ್ಟುವ ಸ್ಥಳದತ್ತ ಕೈಬೆರಳು ತೋರಿಸುತ್ತಿರುವುದು ವೈರಲ್ ಆಗಿರುವ ವೀಡಿಯೊದಲ್ಲಿ ಕಾಣುತ್ತದೆ.

ಇಮಾಮುಲ್ ಹಕ್ ಔಟಾದಾಗ ಪಾಕಿಸ್ತಾನವು ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ಆಗ ವಿಕೆಟ್ಕೀಪರ್ ಬ್ಯಾಟರ್ ರಿಝ್ವಾನ್ ಬ್ಯಾಟಿಂಗ್ಗೆ ಬಂದರು. ಅವರು ಮೊದಲ ಚೆಂಡನ್ನು ಎದುರಿಸುವ ಮೊದಲು ಸ್ವಲ್ವ ಹೆಚ್ಚೇ ಎನಿಸುವಷ್ಟು ಹೊತ್ತು ತೆಗೆದುಕೊಂಡರು. ಇದು ವಿರಾಟ್ ಕೊಹ್ಲಿಗೆ ಸರಿ ಕಾಣಲಿಲ್ಲ. ಬ್ಯಾಟರ್ ಸಮಯ ವ್ಯರ್ಥಗೊಳಿಸುತ್ತಿದ್ದಾರೆ ಎನ್ನುವುದನ್ನು ಸೂಚಿಸಲು ಕೊಹ್ಲಿ ತನ್ನ ಕೈಯ ವಾಚ್ ಕಟ್ಟುವ ಸ್ಥಳದತ್ತ ಬೆರಳು ತೋರಿಸಿದರು.

ಆಧುನಿಕ ಕ್ರೀಡೆಗಳಲ್ಲಿ ಸಮಯ ವ್ಯರ್ಥಗೊಳಿಸುವುದು ಸಮಸ್ಯೆಗಳಿಗೆ ಕಾರಣವಾಗಬಹುದು. ಕ್ರಿಕೆಟ್ನ ನೂತನ ನಿಯಮಗಳ ಪ್ರಕಾರ, ಬೌಲಿಂಗ್ ಮಾಡುವ ತಂಡವು ನಿಗದಿತ ಅವಧಿಯಲ್ಲಿ ತನ್ನ ನಿಗದಿತ ಓವರ್ಗಳನ್ನು ಪೂರ್ಣಗೊಳಿಸದಿದ್ದರೆ, ಕೊನೆಯ ಓವರ್ಗಳಲ್ಲಿ ಫೀಲ್ಡಿಂಗ್ ನಿಯಮಗಳನ್ನು ಬದಲಿಸುವ ಮೂಲಕ ತಂಡವನ್ನು ಶಿಕ್ಷಿಸಲಾಗುತ್ತದೆ. ಈ ಪಂದ್ಯದಲ್ಲಿ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಇನ್ನೂ 117 ಎಸೆತಗಳು ಬಾಕಿಯಿರುವಂತೆಯೇ ಏಳು ವಿಕೆಟ್ಗಳಿಂದ ಸೋಲಿಸಿದೆ. ಪಾಕಿಸ್ತಾನವು 42.5 ಓವರ್ಗಳಲ್ಲಿ 191 ರನ್ಗಳನ್ನು ಗಳಿಸುವಷ್ಟರಲ್ಲಿ ಆಲೌಟಾಯಿತು. ಪಂದ್ಯವನ್ನು ಗೆಲ್ಲಲು 192 ರನ್ಗಳನ್ನು ಗಳಿಸುವ ಗುರಿಯನ್ನು ಪಡೆದ ಭಾರತವು ರೋಹಿತ್ ಶರ್ಮರ 86 ರನ್ಗಳ ನೆರವಿನಿಂದ 30.3 ಓವರ್ಗಳಲ್ಲಿ ಗೆಲುವಿನ ತೀರವನ್ನು ಸೇರಿತು.

ಪಂದ್ಯವು ತೀರಾ ಏಕಪಕ್ಷೀಯವಾಗಿ ಸಾಗಿತು ಹಾಗೂ ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಕಾಣಬಹುದಾದ ರೋಮಾಂಚಕತೆಯನ್ನು ಕಳೆದುಕೊಂಡಿತ್ತು. ಈ ಮೂಲಕ ಭಾರತವು ಏಕದಿನ ವಿಶ್ವಕಪ್ಗಳಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಗೆಲುವಿನ ಸರಣಿಯನ್ನು 8-0ಗೆ ವಿಸ್ತರಿಸಿದೆ. ಏಕದಿನ ವಿಶ್ವಕಪ್ಗಳಲ್ಲಿ ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಈವರೆಗೆ ಸಾಧ್ಯವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News