ತಮ್ಮ ತೋಟದ ಮನೆಯ ಕುರಿತ ನಕಲಿ ಸುದ್ದಿಗೆ ಆಕ್ರೋಶ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ ಹೇಳಿದ್ದೇನು?
ಮುಂಬೈ: ತಮ್ಮ ದುಬಾರಿ ಆಲಿಬಾಗ್ ತೋಟದ ಮನೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಕ್ರಿಕೆಟ್ ಪಿಚ್ ಒಂದನ್ನು ನಿರ್ಮಿಸುವ ಉದ್ದೇಶ ಹೊಂದಿದ್ದಾರೆ ಎಂಬ ಪ್ರಮುಖ ಸುದ್ದಿ ಸಂಸ್ಥೆಯ ವರದಿಯನ್ನು ಸಾಮಾಜಿಕ ಮಾಧ್ಯಮ ಟಿಪ್ಪಣಿಯೊಂದರ ಮೂಲಕ ವಿರಾಟ್ ಕೊಹ್ಲಿ ಅಲ್ಲಗಳೆದಿದ್ದಾರೆ.
ಮಂಗಳವಾರ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ, ಈ ಕುರಿತ ಊಹಾಪೋಹಗಳನ್ನು ನಿವಾರಿಸಿದ್ದು, ಅಂತಹ ಯಾವುದೇ ಬೆಳವಣಿಗೆಯನ್ನು ನಕಲಿ ಸುದ್ದಿ ಎಂದು ಪ್ರತಿಪಾದಿಸಿದ್ದಾರೆ. “ಬಚ್ಪನ್ ಸೆ ಜೋ ಅಖಬಾರ್ ಪಢಾ ಹೈ, ವೋ ಭಿ ಫೇಕ್ ನ್ಯೂಸ್ ಚಾಪ್ನೆ ಲಗೆ ಅಬ್ (ಬಾಲ್ಯದಿಂದ ನಾನು ಯಾವ ಪತ್ರಿಕೆಯನ್ನು ಓದುತ್ತಾ ಬರುತ್ತಿದ್ದೇನೆಯೋ, ಆ ಪತ್ರಿಕೆಯೂ ಈಗ ನಕಲಿ ಸುದ್ದಿಯನ್ನು ಮುದ್ರಿಸಲು ಶುರು ಮಾಡಿತು) ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿ ಉಲ್ಲೇಖಿಸಿದ್ದಾರೆ.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಐಷಾರಾಮಿ ತೋಟದ ಮನೆಯಲ್ಲಿ ಕ್ರಿಕೆಟ್ ಪಿಚ್ ಒಂದನ್ನು ನಿರ್ಮಿಸುವ ಆಸಕ್ತಿ ಹೊಂದಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ ನಂತರ ಕೊಹ್ಲಿಯ ಈ ಪ್ರತಿಕ್ರಿಯೆ ಹೊರಬಿದ್ದಿದೆ. ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಕ್ರೀಡಾಪಟುಗಳ ಪೈಕಿ ಒಬ್ಬರಾಗಿರುವ ವಿರಾಟ್ ಕೊಹ್ಲಿ, ಫೋಟೊ ಮತ್ತು ವಿಡಿಯೊ ಹಂಚಿಕೆ ವೇದಿಕೆಯಾದ ಇನ್ಸ್ಟಾಗ್ರಾಮ್ ನಲ್ಲಿ 225 ದಶಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ.