ವಿವಿಎಸ್ ಲಕ್ಷ್ಮಣ್ ಭಾರತದ ನೂತನ ಮುಖ್ಯ ಕೋಚ್?
ಮುಂಬೈ : ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರವಿವಾರ ನಡೆದ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಟೀಮ್ ಇಂಡಿಯಾದ ಆರು ವಿಕೆಟ್ಗಳ ಆಘಾತಕಾರಿ ಸೋಲನ್ನು ಒಂದು ಯುಗದ ಅಂತ್ಯ ಎಂದು ಪರಿಗಣಿಸಲಾಗಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಆಡಿರುವ ಕೊನೆಯ ಪಂದ್ಯ ಇದಾಗಿದೆ ಎಂದು ತಿಳಿದುಬಂದಿದೆ.
ವಿಶ್ವಕಪ್ನೊಂದಿಗೆ ಲೆಜೆಂಡರಿ ಬ್ಯಾಟರ್ ರಾಹುಲ್ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದವೂ ಅಂತ್ಯವಾಗಿದೆ. ದ್ರಾವಿಡ್ ಅವರು ಭಾರತೀಯ ಕ್ರಿಕೆಟ್ ತಂಡ ಮುಖ್ಯ ಕೋಚ್ ಆಗಿ ಮುಂದುವರಿಯದೇ ಇರಲು ನಿರ್ಧರಿಸಿದ್ದು ಈ ಕುರಿತು ನಮಗೆ ಮಾಹಿತಿ ನೀಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಅವರ ಆತ್ಮೀಯ ಗೆಳೆಯ ವಿವಿಎಸ್ ಲಕ್ಷ್ಮಣ್ ಆಯ್ಕೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಲಕ್ಷ್ಮಣ್ ಗುರುವಾರದಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಿರುವ ಆಸ್ಟ್ರೇಲಿಯ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯಲ್ಲಿ ಆಡುತ್ತಿರುವ ಭಾರತದ ಯುವ ತಂಡಕ್ಕೆ ಕೋಚ್ ಆಗಿದ್ದಾರೆ.
ಬೆಂಗಳೂರಿನಲ್ಲಿರುವ ಬಿಸಿಸಿಐನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಅವರು ವಿಶ್ವಕಪ್ಗಿಂತ ಮೊದಲು ನಡೆದ ಐರ್ಲ್ಯಾಂಡ್ ವಿರುದ್ಧದ ಟಿ-20 ಸರಣಿಗೆ ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದರು. ಕಳೆದ ವರ್ಷ ಟಿ-20 ವಿಶ್ವಕಪ್ ನಂತರ ನಡೆದಿದ್ದ ನ್ಯೂಝಿಲ್ಯಾಂಡ್ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿಗೂ ಕೋಚ್ ಆಗಿದ್ದರು.
ಲಕ್ಷ್ಮಣ್ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳುವ ಕುರಿತು ಒಲವು ಹೊಂದಿದ್ದಾರೆ. ಈ ಕುರಿತಂತೆ ಬಿಸಿಸಿಐ ಉನ್ನತಾಧಿಕಾರಿಗಳನ್ನು ಭೇಟಿಯಾಗಲು ಅಹ್ಮದಾಬಾದ್ಗೆ ತೆರಳಿದ್ದರು. ಅವರು ಟೀಮ್ ಇಂಡಿಯಾ ಕೋಚ್ ಆಗಿ ದೀರ್ಘ ಅವಧಿಯ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡದೊಂದಿಗೆ ಪ್ರಯಾಣಿಸುವುದು ನಿಶ್ಚಿತವಾಗಿದೆ. ಭಾರತದ ಪೂರ್ಣಕಾಲಿಕ ಮುಖ್ಯ ಕೋಚ್ ಆಗಿ ಲಕ್ಷ್ಮಣ್ ಅವರ ಮೊದಲ ಜವಾಬ್ದಾರಿ ಇದಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯವು ಡಿಸೆಂಬರ್ 10ರಂದು ನಡೆಯಲಿದ್ದು, ತಂಡವು ಡಿ.4ರಂದು ಆಫ್ರಿಕಾಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ.
ದ್ರಾವಿಡ್ ಅವರು 2021ರ ನವೆಂಬರ್ನಲ್ಲಿ ಎರಡು ವರ್ಷಗಳ ಅವಧಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಭಾರತದ ಆತಿಥ್ಯದಲ್ಲಿ ನಡೆದಿರುವ ವಿಶ್ವಕಪ್ನೊಂದಿಗೆ ದ್ರಾವಿಡ್ ಅವಧಿಯೂ ಅಂತ್ಯವಾಗಿದೆ.
ಪೂರ್ಣಾವಧಿ ಕೋಚ್ ಆಗಿ ಮುಂದುವರಿಯಲು ಉತ್ಸುಕನಾಗಿಲ್ಲ ಎಂದು ದ್ರಾವಿಡ್ ಬಿಸಿಸಿಐಗೆ ತಿಳಿಸಿದ್ದಾರೆ. ಸುಮಾರು 20 ವರ್ಷಗಳ ಕಾಲ ಅವರು ಭಾರತೀಯ ತಂಡದೊಂದಿಗೆ ಆಟಗಾರರಾಗಿ ಪ್ರಯಾಣಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಟೀಮ್ ಇಂಡಿಯಾದ ಜೊತೆಗಿದ್ದರು. ಈ ಹಿಂದೆ ಕಾರ್ಯನಿರ್ವಹಿಸಿದ್ದ ಎನ್ಸಿಎ ಮುಖ್ಯಸ್ಥರಾಗಿ ಇರುವುದಕ್ಕೆ ಅವರು ಇಷ್ಟಪಡುತ್ತಿದ್ದಾರೆ. ಎನ್ಸಿಎ ದ್ರಾವಿಡ್ ತವರೂರು ಬೆಂಗಳೂರಿನಲ್ಲಿದೆ. ಅವರು ತಂಡಕ್ಕೆ ಸಾಂದರ್ಭಿಕವಾಗಿ ತರಬೇತಿ ನೀಡಲಿದ್ದಾರೆ. ಪೂರ್ಣ ಅವಧಿಯ ತರಬೇತುದಾರರಾಗಿ ಕೆಲಸ ಮಾಡಲು ಉತ್ಸುಕರಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಭಾರತದ ಮುಖ್ಯ ಕೋಚ್ ಆಗಿ ದ್ರಾವಿಡ್ ದಾಖಲೆ
ರಾಹುಲ್ ದ್ರಾವಿಡ್ ಕೋಚಿಂಗ್ ಹಾಗೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡರಲ್ಲೂ ವಿಶ್ವದ ನಂ.1 ತಂಡವಾಗಿದೆ.
ದ್ರಾವಿಡ್ ಎರಡು ವರ್ಷಗಳ ಕಾಲ ಕೋಚ್ ಆಗಿದ್ದಾಗ ಭಾರತವು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾಗೂ ಏಕದಿನ ವಿಶ್ವಕಪ್ ಫೈನಲ್ ಹಂತಕ್ಕೆ ತಲುಪಿದೆ. ಆದರೆ ಎರಡೂ ಸಂದರ್ಭದಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿದೆ. 2022ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದಿದ್ದ ಟಿ-20 ವಿಶ್ವಕಪ್ನಲ್ಲಿ ಭಾರತ ಸೆಮಿ ಫೈನಲ್ ತಲುಪಿತ್ತು. ಆದರೆ ಅಡಿಲೇಡ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತ್ತು. ಆಸ್ಟ್ರೇಲಿಯ, ಶ್ರೀಲಂಕಾ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿ ಜಯಿಸಿತ್ತು. ಬಾಂಗ್ಲಾದೇಶ ಹಾಗೂ ವೆಸ್ಟ್ಇಂಡೀಸ್ ವಿರುದ್ಧ ವಿದೇಶದಲ್ಲಿ ನಡೆದಿದ್ದ ಸರಣಿಯಲ್ಲೂ ಗೆಲುವು ದಾಖಲಿಸಿತ್ತು.
ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ನ್ಯೂಝಿಲ್ಯಾಂಡ್ ಹಾಗೂ ಶ್ರೀಲಂಕಾ ವಿರುದ್ಧ ತವರು ನೆಲದಲ್ಲಿ ನಡೆದಿದ್ದ ಟಿ-20 ಸರಣಿಯಲ್ಲೂ ಜಯ ಗಳಿಸಿದೆ. ಏಶ್ಯಕಪ್ ಟೂರ್ನಿಯಲ್ಲಿ ಜಯಭೇರಿ ಬಾರಿಸಿತ್ತು.
ಈ ವರ್ಷಾರಂಭದಲ್ಲಿ ಸ್ವದೇಶದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತವು ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ದ್ರಾವಿಡ್ ತಂತ್ರಗಾರಿಕೆ ಸಾಕಷ್ಟಿತ್ತು.
ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಸೋತಿತ್ತು. ಇಂಗ್ಲೆಂಡ್ನಲ್ಲಿ ನಡೆದಿದ್ದ ಐದನೇ ಟೆಸ್ಟ್ ಪಂದ್ಯ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಮುಗ್ಗರಿಸಿತ್ತು.
ದ್ರಾವಿಡ್ ಮಾರ್ಗದರ್ಶನದಲ್ಲಿ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ ತನ್ನ ಮೊದಲಿನ ಮಾಂತ್ರಿಕ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ದ್ರಾವಿಡ್ ನೆರವಾದರು. ಭಾರತದ ರನ್ ಯಂತ್ರ ಕೊಹ್ಲಿ 2023ರ ಏಕದಿನ ವಿಶ್ವಕಪ್ನಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.