ತನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿ ಭಾವುಕರಾದ ವಿಂಡೀಸ್ ವಿಕೆಟ್‌ಕೀಪರ್ ತಾಯಿ
ಟ್ರಿನಿಡಾಡ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ರನ್ ಯಂತ್ರ ಖ್ಯಾತಿಯ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಶುಕ್ರವಾರ ಭಾರತದ ಸ್ಟಾರ್ ಬ್ಯಾಟರ್ ಕೊಹ್ಲಿ ಅವರ ಅಭಿಮಾನಿಗಳ ಬಳಗಕ್ಕೆ ಹೊಸ ಸೇರ್ಪಡೆಯಾಗಿದೆ. ವೆಸ್ಟ್‌ಇಂಡೀಸ್‌ನ ವಿಕೆಟ್‌ಕೀಪರ್ ಜೋಶುವಾ ಡಾ ಸಿಲ್ವಾ ಅವರ ತಾಯಿ, ಕೊಹ್ಲಿ ಅವರ ಅನನ್ಯ ಅಭಿಮಾನಿಯಾಗಿದ್ದು, ಕೊಹ್ಲಿ ಅವರನ್ನು ಭೇಟಿಯಾಗಿ ಭಾವುಕರಾಗಿದ್ದಾರೆ.
ಜೋಶುವಾ ಅವರ ತಾಯಿ ತಮ್ಮ ನೆಚ್ಚಿನ ಕ್ರಿಕೆಟಿಗ ಕೊಹ್ಲಿ ಅವರನ್ನು ಭೇಟಿಯಾಗಿ ಅವರನ್ನು ಆಲಂಗಿಸಿಕೊಂಡು ಭಾವುಕರಾದ ಕ್ಷಣದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಬೆಳಗ್ಗೆ ಅಮ್ಮ ಕರೆ ಮಾಡಿದ್ದರು. ವಿರಾಟ್ ಕೊಹ್ಲಿಯ ಪಂದ್ಯವನ್ನ್ನು ನೋಡಲು ಬರುತ್ತಿದ್ದೇನೆ ಎಂದು ಅವರು ಹೇಳಿದರು. ಅದನ್ನು ನನಗೆ ನಂಬಲು ಆಗಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಅವರನ್ನು ದೂಷಿಸುವುದಿಲ್ಲ. ಪಂದ್ಯ ನೋಡುವ ಹಕ್ಕು ಅವರಿಗಿದೆ ಎಂದು ಜೋಶುವಾ ಎರಡನೇ ಟೆಸ್ಟ್‌ನ ಮೊದಲ ದಿನ ಹೇಳಿದ್ದ ಮಾತುಗಳು ಸ್ಟಂಪ್‌ಮೈಕ್‌ನಲ್ಲಿ ರೆಕಾರ್ಡ್ ಆಗಿದ್ದವು.
ಶುಕ್ರವಾರ ಕ್ರೀಡಾಂಗಣಕ್ಕೆ ಆಗಮಿಸಿದ್ದ ವಿಂಡೀಸ್ ಆಟಗಾರನ ತಾಯಿ ಕೊಹ್ಲಿಯ ಶತಕದಾಟವನ್ನು ಕಣ್ತುಂಬಿಕೊಂಡಿದ್ದರು.
ದಿನದಾಟ ಮುಕ್ತಾಯದ ನಂತರ ಕೊಹ್ಲಿಯನ್ನು ಭೇಟಿಯಾದ ಅವರು ಕೊಹ್ಲಿಯನ್ನು ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟರು. ಬಳಿಕ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇಷ್ಟಾಗುವ ವೇಳೆಗೆ ಅವರ ಕಣ್ಣಂಚಲ್ಲಿ ನೀರು ಜಾರಿತ್ತು.
ನಂತರ ಕಣ್ಣೊರೆಸಿಕೊಳ್ಳುತ್ತಲ್ಲೇ ಮಾತನಾಡಿದ ಅವರು, ಕೊಹ್ಲಿ ನಮ್ಮ ಜೀವಮಾನದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು. ಹಾಗಾಗಿ ಅವರನ್ನು ಭೇಟಿಯಾಗಿದ್ದು ಹಾಗೂ ನನ್ನ ಮಗನೂ ಅವರಂತೆಯೇ ಅದೇ ಕ್ಷೇತ್ರದಲ್ಲಿರುವುದು ನನ್ನ ಪಾಲಿಗೆ ಗೌರವದ ಸಂಗತಿ ಎಂದರು.
ಕೊಹ್ಲಿಯ ದೊಡ್ಡ ಅಭಿಮಾನಿಯಾಗಿರುವ ಅವರು, ಕೊಹ್ಲಿಯನ್ನು ನೋಡುವ ಸಲುವಾಗಿ ನಾನು ಬರುತ್ತಿದ್ದೇನೆ ಎಂದು ಮಗನಿಗೆ ಮೊದಲೇ ಹೇಳಿದ್ದೆ ಎಂದರು. ಕೊಹ್ಲಿ ತನ್ನ 500ನೇ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು. ಇದು ಅವರ 29ನೇ ಟೆಸ್ಟ್ ಶತಕವಾಗಿತ್ತು. ಈ ಶತಕದ ಮೂಲಕ ಅವರು ವಿದೇಶಿ ನೆಲದಲ್ಲಿ 5 ವರ್ಷದಿಂದ ಕಾಡುತ್ತಿದ್ದ ಶತಕದ ಬರ ನೀಗಿಸಿಕೊಂಡಿದ್ದರು.
Virat Kohli is once in a life time sportsperson.
— Johns. (@CricCrazyJohns) July 22, 2023
The respect, he has earned over a decade, What a beautiful video. pic.twitter.com/bDhizasC6U