ಭಾರತದ ಅಜೇಯ ಅಭಿಯಾನ ಮುಂದುವರಿಯುವುದೇ?

Update: 2023-10-29 05:19 GMT

Photo- PTI

ಲಕ್ನೊ, ಅ. 28: ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ರವಿವಾರ ಆತಿಥೇಯ ಭಾರತವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಲಕ್ನೊದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಸ್ಟೇಡಿಯಮ್‌ನಲ್ಲಿ ನಡೆಯುವ ಹಗಲು-ರಾತ್ರಿ ಪಂದ್ಯದಲ್ಲಿ ಭಾರತವು ತನ್ನ ಈವರೆಗಿನ ಅಜೇಯ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಪಂದ್ಯಾವಳಿಯಲ್ಲಿ ಈವರೆಗೆ ಭಾರತ ಮತ್ತು ಇಂಗ್ಲೆಂಡ್ ಪರಸ್ಪರ ಭಿನ್ನ ಶೈಲಿಗಳಿಂದ ಆಡಿವೆ ಹಾಗೂ ವಿಭಿನ್ನ ಫಲಿತಾಂಶಗಳನ್ನು ಸೃಷ್ಟಿಸಿವೆ. ರವಿವಾರದ ಪಂದ್ಯದಲ್ಲಿ ಅದು ಬದಲಾಗುವ ಸಾಧ್ಯತೆಯಿಲ್ಲ. ಭಾರತವು ಈವರೆಗೆ ತಾನು ಆಡಿರುವ ಎಲ್ಲಾ ಐದು ಲೀಗ್ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಅದೇ ವೇಳೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಪಂದ್ಯಾವಳಿಯಲ್ಲಿ ತಾನಾಡಿದ ಐದು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದಿದೆ ಹಾಗೂ ಸ್ಪರ್ಧೆಯಲ್ಲಿ ಉಳಿಯಲು ಕೊನೆಯ ಪ್ರಯತ್ನವೊಂದನ್ನು ಮಾಡಲಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡವು ಈವರೆಗೆ ಸರಿಯಾದ ಹೆಜ್ಜೆಗಳನ್ನೇ ಇಟ್ಟಿದೆ. ಈವರೆಗೆ ಆಡಿರುವ ಎಲ್ಲಾ ಐದು ಪಂದ್ಯಗಳಲ್ಲಿ ಎರಡನೆಯದಾಗಿ ಬ್ಯಾಟ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದೆ.

ಬಿಳಿ ಚೆಂಡಿನ ಕ್ರಿಕೆಟ್ (50 ಮತ್ತು 20 ಓವರ್‌ಗಳ ಕ್ರಿಕೆಟ್)ನಲ್ಲಿ ಇಂಗ್ಲೆಂಡ್ ಆಕ್ರಮಣಕಾರಿ ಶೈಲಿಯ ಆಟವನ್ನು ಅಳವಡಿಸಿಕೊಂಡಿದೆ ಮತ್ತು ಅದರಲ್ಲಿ ಜಾಗತಿಕ ಮಟ್ಟದಲ್ಲಿ ಯಶಸ್ವಿಯೂ ಆಗಿದೆ. ಆದರೆ, ಈ ಆಕ್ರಮಣಕಾರಿ ಶೈಲಿಯು ಭಾರತೀಯ ಸನ್ನಿವೇಶದಲ್ಲಿ ಯಶಸ್ವಿಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹಾಲಿ ಚಾಂಪಿಯನ್ ಈಗ ಪಂದ್ಯಾವಳಿಯಿಂದ ಹೊರಬೀಳುವ ಹೊಸ್ತಿಲಲ್ಲಿದೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಾಳುವಾಗಿ ತಂಡದಿಂದ ಹೊರಬಿದ್ದಿರುವುದು ಭಾರತಕ್ಕೆ ಕೊಂಚ ಚಿಂತೆಯ ವಿಷಯವಾಗಿದೆ. ಪಾಂಡ್ಯ ಇನ್ನು ಕನಿಷ್ಠ ಎರಡು ಪಂದ್ಯಗಳಿಗೆ ಲಭ್ಯವಿರಲಾರರು.

ಸಾಮಾನ್ಯ ಸಂದರ್ಭಗಳಲ್ಲಿ, ಸ್ಪಿನ್ನರ್‌ಗಳಿಗೆ ನೆರವು ನೀಡಬಹುದಾಗಿರುವ ಪಿಚ್‌ನಲ್ಲಿ ಶಾರ್ದೂಲ್ ಠಾಕೂರ್ ಸ್ಥಾನದಲ್ಲಿ ಆರ್. ಅಶ್ವಿನ್ ಬರುತ್ತಿದ್ದರು. ಆದರೆ, ಹಾರ್ದಿಕ್‌ರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ, ಕೇವಲ ಐವರು ಬೌಲರ್‌ಗಳನ್ನು ಮಾತ್ರ ಇಳಿಸಲು ತಂಡದ ಆಡಳಿತ ಮುಂದಾಗಬಹುದಾಗಿದೆ.

ರವಿವಾರದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಒಂದು ಸಂಯೋಜನೆಯಾಗಿ ಕೆಲಸ ಮಾಡುತ್ತಾರೆ. ಅಶ್ವಿನ್‌ರನ್ನು ಮೂರನೇ ಸ್ಪಿನ್ನರ್ ಆಗಿ ಸೇರಿಸಿಕೊಳ್ಳಬೇಕಾದರೆ ತಂಡವು ಮುಹಮ್ಮದ್ ಸಿರಾಜ್ ಮತ್ತು ಮುಹಮ್ಮದ್ ಶಮಿ ನಡುವೆ ಆಯ್ಕೆಯೊಂದನ್ನು ಮಾಡಬೇಕಾಗಿದೆ. ಇದು ತಂಡದ ಆಡಳಿತಕ್ಕೆ ಸವಾಲಿನ ಕೆಲಸವಾಗಿದೆ.

ಹಾರ್ದಿಕ್‌ರ ಅನುಪಸ್ಥಿತಿಯಲ್ಲಿ, ಸೂರ್ಯಕುಮಾರ್ ಯಾದವ್ ಆರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ.

ಶ್ರೇಯಸ್ ಅಯ್ಯರ್ ಶಾರ್ಟ್ ಬಾಲ್‌ಗಳನ್ನು ಎದುರಿಸಲು ಪರದಾಡುವುದು ಧರ್ಮಶಾಲಾದಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಇಂಗ್ಲೆಂಡ್ ಬ್ಯಾಟಿಂಗ್ ಶೈಲಿಯನ್ನು ಬದಲಿಸುವುದೇ?:

ಇಂಗ್ಲೆಂಡ್‌ನ ಬ್ಯಾಟಿಂಗ್ ಸರದಿಯಲ್ಲಿ ಸಾಕಷ್ಟು ಸ್ಫೋಟಕತೆಯಿದೆ. ನಿರಂತರ ವೈಫಲ್ಯಗಳ ಬಳಿಕ, ಅದನ್ನು ಸರಿಯಾದ ನಿಟ್ಟಿನಲ್ಲಿ ಬಳಸಿಕೊಳ್ಳುವ ವಿಶ್ವಾಸವನ್ನು ಇಂಗ್ಲೆಂಡ್ ಹೊಂದಿದೆ.

ಜೋಸ್ ಬಟ್ಲರ್, ಜಾನಿ ಬೇರ್‌ಸ್ಟೋ, ಬೆನ್ ಸ್ಟೋಕ್ಸ್, ಲಿಯಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್- ಇವುಗಳು ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರುಗಳು. ಆದರೆ, ತಮ್ಮ ಪರಿಚಿತ ಸ್ಥಿತಿಗತಿಯಲ್ಲೇ ಅವರು ವಿಫಲರಾಗುತ್ತಿದ್ದಾರೆ.

ಇಂಗ್ಲೆಂಡ್‌ನ ಬೌಲಿಂಗ್ ಘಟಕವೂ ಪರಿಪೂರ್ಣವಾಗಿಲ್ಲ. ಅವರ ಪ್ರಮುಖ ವೇಗಿ ರೀಸ್ ಟೋಪ್ಲೇ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನವನ್ನು ಬ್ರೈಡನ್ ಕಾರ್ಸ್ ವಹಿಸಿದ್ದಾರೆ. ಮಾರ್ಕ್ ವುಡ್‌ಗೆ ತನ್ನ ಶ್ರೇಷ್ಠ ನಿರ್ವಹಣೆಯನ್ನು ಪುನರಾವರ್ತಿಸಲು ಸಾಧ್ಯವಾಗುತ್ತಿಲ್ಲ.

ಅದೇ ವೇಳೆ, ಮೊಯಿನ್ ಅಲಿ ಮತ್ತು ಆದಿಲ್ ರಶೀದ್‌ರ ಸ್ಪಿನ್ ದಾಳಿಯು ಭಾರತೀಯ ಬ್ಯಾಟರ್‌ಗಳಿಗೆ ಬೆದರಿಕೆಯಾಗುವ ಸಾಧ್ಯತೆಯೂ ಇದೆ.

ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News