ನಮೀಬಿಯಾ ವಿರುದ್ಧ ಜಯ: ಸೂಪರ್-8 ಹೊಸ್ತಿಲಲ್ಲಿ ಇಂಗ್ಲೆಂಡ್
ಹೊಸದಿಲ್ಲಿ: ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಶನಿವಾರ ಮಳೆಬಾಧಿತ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ಅವರ ಅಜೇಯ 47 ರನ್ಗಳ ನೆರವಿನಿಂದ ಇಂಗ್ಲೆಂಡ್ ತಂಡ ನಮೀಬಿಯಾವನ್ನು 41 ರನ್ ಅಂತರದಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ತಂಡದ ಸೂಪರ್8 ಕನಸಿಗೆ ಮತ್ತಷ್ಟು ಬಲ ಬಂದಿದೆ.
ಗುಂಪು ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸುವ ಅಪಾಯದಲ್ಲಿದ್ದ ಹಾಲಿ ಚಾಂಪಿಯನ್ನರಿಗೆ ಈ ಗೆಲುವು ವರದಾನವಾಗಿದೆ. ಆಂಟಿಗುವಾದಲ್ಲಿ ನಡೆದ ಪಂದ್ಯವನ್ನು ಮಳೆಯಿಂದಾಗಿ ತಲಾ 11 ಓವರ್ ಗಳಿಗೆ ಇಳಿಸಲಾಯಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇಂಗ್ಲೆಂಡ್ 11 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 122 ರನ್ ಕಲೆ ಹಾಕಿತು. ಡೆಕ್ ವರ್ತ್ ಲೂಯಿಸ್ ನಿಯಮದಂತೆ ನಮೀಬಿಯಾ ಗುರಿಯನ್ನು 126 ರನ್ ಗಳಿಗೆ ನಿಗದಿಪಡಿಸಲಾಯಿತು. ಆದರೆ ಎದುರಾಳಿ ತಂಡ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ, ಸ್ಕಾಟ್ಲೆಂಡ್ ತಂಡವನ್ನು ಹಿಂದಿಕ್ಕಿ ನಿವ್ವಳ ರನ್ ರೇಟ್ ಆಧಾರದಲ್ಲಿ ಎರಡನೇ ಸ್ಥಾನಕ್ಕೇರಿದೆ. ಎರಡೂ ತಂಡಗಳು ತಲಾ 5 ಅಂಕ ಪಡೆದಿವೆ. ಬಿ ಗುಂಪಿನ ಅಗ್ರಸ್ಥಾನಿಯಾದ ಆಸ್ಟ್ರೇಲಿಯಾ ಭಾನುವಾರ ಸೆಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಡ್ರಾ ಆದರೆ ಅಥವಾ ಸ್ಕಾಟ್ಲೆಂಡ್ ಗೆದ್ದಲ್ಲಿ ಮಾತ್ರ ಆ ತಂಡ ಇಂಗ್ಲೆಂಡನ್ನು ಹಿಂದಿಕ್ಕಿ ಸೂಪರ್ 8ಗೆ ಮುನ್ನಡೆಯುವ ಅವಕಾಶ ಹೊಂದಿದೆ.
ಎ ಗುಂಪಿನಿಂದ ಭಾರತ ಹಾಗೂ ಅಮೆರಿಕ, ಸಿ ಗುಂಪಿನಿಂದ ಅಫ್ಘಾನಿಸ್ತಾನ ಮತ್ತು ವೆಸ್ಟ್ಇಂಡೀಸ್, ಡಿ ಗುಂಪಿನಿಂದ ವೆಸ್ಟ್ಇಂಡೀಸ್ ಈಗಾಗಲೇ ಸೂಪರ್ 8 ತಲುಪಿವೆ. ಡಿ ಗುಂಪಿನಲ್ಲಿ 3 ಪಂದ್ಯಗಳಿಂದ 4 ಅಂಕ ಪಡೆದಿರುವ ಬಾಂಗ್ಲಾದೇಶ ಮುಂದಿನ ಹಂತಕ್ಕೆ ರಹದಾರಿ ಪಡೆಯುವ ಎಲ್ಲ ಅವಕಾಶಗಳನ್ನು ಹೊಂದಿದೆ.