ಮಹಿಳೆಯರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್ | ಜಪಾನ್ ಗೆ ಸೋಲುಣಿಸಿ ಫೈನಲ್‌ಗೆ ಪ್ರವೇಶಿಸಿದ ಭಾರತ
ರಾಜ್‌ಗಿರ್(ಬಿಹಾರ) : ಅಜೇಯ ಓಟವನ್ನು ಮುಂದುವರಿಸಿರುವ ಹಾಲಿ ಚಾಂಪಿಯನ್ ಭಾರತದ ಮಹಿಳೆಯರ ಹಾಕಿ ತಂಡ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಜಪಾನ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ.
ಮಂಗಳವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಉಪ ನಾಯಕಿ ನವನೀತ್ ಕೌರ್ 48ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸಿದರು. ಲಾಲ್‌ರೆಂಸಿಯಾಮಿ 56ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿದರು. ಭಾರತವು 13 ಪೆನಾಲ್ಟಿ ಕಾರ್ನರ್ ಗಳ ಸಹಿತ ಹಲವು ಸ್ಕೋರಿಂಗ್ ಅವಕಾಶಗಳನ್ನು ಪಡೆದಿತ್ತು.
ಭಾರತ ತಂಡವು ನ.20ರಂದು ಬುಧವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೀನಾ ತಂಡವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಭಾರತಕ್ಕೆ ಸೋತಿರುವ ಚೀನಾ ತಂಡವು ಮೊದಲ ಸೆಮಿ ಫೈನಲ್‌ನಲ್ಲಿ ಮಲೇಶ್ಯ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿದೆ.
ಮೂರು ಹಾಗೂ ನಾಲ್ಕನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಮಲೇಶ್ಯ ತಂಡವು ಜಪಾನ್ ತಂಡವನ್ನು ಎದುರಿಸಲಿದೆ.
ಐದನೇ-ಆರನೇ ಸ್ಥಾನಕ್ಕಾಗಿ ನಡೆದ ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 3-0 ಅಂತರದಿಂದ ಮಣಿಸಿರುವ ಕೊರಿಯ ತಂಡವು ಐದನೇ ಸ್ಥಾನ ಪಡೆದಿದೆ.
ಭಾರತೀಯರು ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು. ಕೊನೆಯ ಲೀಗ್ ಪಂದ್ಯದಂತೆಯೇ ಜಪಾನಿನ ಡಿಫೆಂಡರ್‌ಗಳ ಮೇಲೆ ಅರಂಭದಲ್ಲಿ ಒತ್ತಡ ಹೇರಿದರು.
ಪಂದ್ಯ ಆರಂಭವಾಗಿ 5 ನಿಮಿಷಗಳಲ್ಲಿ ಭಾರತ ತಂಡವು ಮೊದಲ ಗೋಲು ಗಳಿಸುವ ಅವಕಾಶ ಪಡೆದಿತ್ತು. ನಾಯಕಿ ಸಲಿಮಾ ಟೆಟೆ ಅವರ ಪ್ರಯತ್ನವನ್ನು ಜಪಾನ್ ಗೋಲ್‌ಕೀಪರ್ ಯು ಕುಡೊ ವಿಫಲಗೊಳಿಸಿದರು.
ಭಾರತೀಯರು ಪದೇ ಪದೇ ಜಪಾನಿನ ಕೋಟೆಯೊಳಗೆ ನುಸುಳಿದ್ದು, ಈ ಪ್ರಕ್ರಿಯೆಯಲ್ಲಿ ಎರಡು ನಿಮಿಷಗಳ ಅವಧಿಯಲ್ಲಿ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರು. ಆದರೆ ಗೋಲ್‌ಕೀಪರ್ ಕುಡೊ ಅವರು ನವನೀತ್ ಹಾಗೂ ದೀಪಿಕಾಗೆ ಗೋಲು ನಿರಾಕರಿಸಿದರು.
ಎರಡನೇ ಕ್ವಾರ್ಟರ್ ಆರಂಭವಾಗಿ 3 ನಿಮಿಷಗಳ ನಂತರ ಭಾರತವು ಸತತ 3 ಬಾರಿ ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು. ಆದರೆ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.
21ನೇ ನಿಮಿಷದಲ್ಲಿ ಆತಿಥೇಯರು ಬೆನ್ನುಬೆನ್ನಿಗೆ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದಿದ್ದು, ಗೋಲ್‌ಕೀಪರ್ ಕುಡೊ ಮತ್ತೊಮ್ಮೆ ತಡೆಗೋಡೆಯಾಗಿ ನಿಂತರು.
ಭಾರತವು 24ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ ಜಪಾನಿನ ಗೋಲ್‌ಕೀಪರ್ ಕುಡೊರನ್ನು ವಂಚಿಸಲು ಸಾಧ್ಯವಾಗಲಿಲ್ಲ. 35ನೇ ನಿಮಿಷದಲ್ಲಿ ಕುಡೊ ಅವರು ದೀಪಿಕಾಗೆ ಮತ್ತೊಮ್ಮೆ ಗೋಲು ನಿರಾಕರಿಸಿದರು.
47ನೇ ನಿಮಿಷದಲ್ಲಿ ಭಾರತವು ತನ್ನ 12ನೇ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ ಕುಡೊ ಮತ್ತೊಮ್ಮೆ ಗೋಲು ನಿರಾಕರಿಸಿದರು.
48ನೇ ನಿಮಿಷದಲ್ಲಿ ದೀಪಿಕಾ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಅನ್ನು ನವನೀತ್ ಗೋಲಾಗಿ ಪರಿವರ್ತಿಸಿ ಕೊನೆಗೂ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.
ಭಾರತೀಯರು 56ನೇ ನಿಮಿಷದಲ್ಲಿ ಆಕರ್ಷಕ ಫೀಲ್ಡ್ ಗೋಲು ಗಳಿಸಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು.
ಜಪಾನೀಯರು ಕೊನೆಯ ಕ್ಷಣಗಳಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದು, ಭಾರತದ ಬಲಿಷ್ಠ ರಕ್ಷಣಾಕೋಟೆಯನ್ನು ಬೇಧಿಸುವಲ್ಲಿ ವಿಫಲವಾಯಿತು.