ಮಹಿಳೆಯರ ಏಶ್ಯನ್ ಹಾಕಿ: 5 ಎಸ್ ವರ್ಲ್ಡ್ ಕಪ್ ಕ್ವಾಲಿಫೈಯರ್; ಥಾಯ್ಲೆಂಡ್ ಗೆ ಸೋಲುಣಿಸಿ ಪ್ರಶಸ್ತಿ ಗೆದ್ದುಕೊಂಡ ಭಾರತ
ಮಸ್ಕತ್: ಥಾಯ್ಲೆಂಡ್ ತಂಡವನ್ನು ಸೋಮವಾರ ನಡೆದ ಫೈನಲ್ ನಲ್ಲಿ 7-2 ಗೋಲುಗಳ ಅಂತರದಿಂದ ಮಣಿಸಿರುವ ಭಾರತ ಮೊದಲ ಆವೃತ್ತಿಯ ಮಹಿಳೆಯರ ಏಶ್ಯನ್ ಹಾಕಿ 5 ಎಸ್ ವಿಶ್ವಕಪ್ ಕ್ವಾಲಿಫೈಯರ್ ಗೆದ್ದುಕೊಂಡಿದೆ. ಮುಂದಿನ ವರ್ಷದ ವಿಶ್ವಕಪ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಭಾರತದ ಪರ ಮರಿಯನಾ ಕುಜುರ್(2ನೇ, 8ನೇ ನಿಮಿಷ) ಹಾಗೂ ಜ್ಯೋತಿ(10ನೇ, 27ನೇ ನಿಮಿಷ)ಅವಳಿ ಗೋಲು ಗಳಿಸಿದರೆ, ಮೋನಿಕಾ ಟೊಪ್ಪೊ(7ನೇ ನಿಮಿಷ), ನಾಯಕಿ ನವಜೋತ್ ಕೌರ್(23ನೇ ನಿಮಿಷ) ಹಾಗೂ ಮಹಿಮಾ ಚೌಧರಿ(29ನೇ ನಿಮಿಷ)ತಲಾ ಒಂದು ಗೋಲು ದಾಖಲಿಸಿದರು. ಥಾಯ್ಲೆಂಡ್ 5ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದೆ.
ಈ ಗೆಲುವಿನ ಮೂಲಕ ಭಾರತವು ಮುಂದಿನ ವರ್ಷದ ಜನವರಿ 24ರಿಂದ 27ರ ತನಕ ಮಸ್ಕತ್ನಲ್ಲಿ ನಡೆಯುವ ಹಾಕಿ 5 ಎಸ್ ವಿಶ್ವಕಪ್ ಗೆ ಅರ್ಹತೆ ಪಡೆದುಕೊಂಡಿದೆ.
ಮುರಿಯಾನಾ ಕುಜುರ್ 2ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿ ಭಾರತಕ್ಕೆ ಬೇಗನೆ ಮುನ್ನಡೆ ಒದಗಿಸಿಕೊಟ್ಟರು. ಥಾಯ್ಲೆಂಡ್ 5ನೇ ನಿಮಿಷದಲ್ಲಿ ಬೆನ್ನುಬೆನ್ನಿಗೆ ಗೋಲು ಗಳಿಸಿ ತಿರುಗೇಟು ನೀಡಿದೆ. ಮೋನಿಕಾ 7ನೇ ನಿಮಿಷದಲ್ಲಿ ಗೋಲು ಗಳಿಸಿ ತಕ್ಷಣವೇ ಎದಿರೇಟು ನೀಡಿದರು. 8ನೇ ನಿಮಿಷದಲ್ಲಿ ಕುಜುರ್ ಗಳಿಸಿದ 2ನೇ ಗೋಲು ನೆರವಿನಿಂದ ಭಾರತ ಮುನ್ನಡೆ ಪಡೆಯಿತು. ಮೊದಲಾರ್ಧದ ಅಂತ್ಯಕ್ಕೆ ಭಾರತವು 4-2 ಮುನ್ನಡೆ ಪಡೆಯಿತು. ನಾಯಕಿ ನವಜೋತ್ ಭಾರತದ ಪರ 5ನೇ ಗೋಲು ಗಳಿಸಿದರೆ ಜ್ಯೋತಿ ಹಾಗೂ ಮಹಿಮಾ ಭಾರತಕ್ಕೆ 7-2 ಅಂತರದ ಗೆಲುವು ತಂದುಕೊಟ್ಟರು.
ಹಾಕಿ ಇಂಡಿಯಾವು ಪ್ರತಿ ಆಟಗಾರ್ತಿಯರಿಗೆ ತಲಾ 2 ಲಕ್ಷ ರೂ. ಹಾಗೂ ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂ. ಬಹುಮಾನ ಘೋಷಿಸಿದೆ.