ಮಹಿಳೆಯರ ಟೆಸ್ಟ್ ಪಂದ್ಯ: ಒಂದೇ ದಿನ 400ಕ್ಕೂ ಅಧಿಕ ರನ್ ಗಳಿಸಿದ 2ನೇ ತಂಡ ಭಾರತ
ನವಿ ಮುಂಬೈ: ಮಹಿಳೆಯರ ಟೆಸ್ಟ್ ಪಂದ್ಯದ ಇನಿಂಗ್ಸ್ವೊಂದರಲ್ಲಿ ಒಂದೇ ದಿನ 400ಕ್ಕೂ ಅಧಿಕ ರನ್ ಗಳಿಸಿದ ಎರಡನೇ ತಂಡವೆಂಬ ಕೀರ್ತಿಗೆ ಭಾರತ ಪಾತ್ರವಾಗಿದೆ. ಇಂಗ್ಲೆಂಡ್ ವಿರುದ್ಧ ಗುರುವಾರ ನವಿ ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಮ್ ನಲ್ಲಿ ಆರಂಭವಾದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಈ ಸಾಧನೆ ಮಾಡಿದೆ.
2014ರ ನಂತರ ಮೊದಲ ಬಾರಿ ತವರು ನೆಲದಲ್ಲಿ ಟೆಸ್ಟ್ ಪಂದ್ಯವನ್ನಾಡಿದ ಭಾರತವು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿತು. ಅಗ್ರ ಹಾಗೂ ಮಧ್ಯಮ ಸರದಿಯ ಆಟಗಾರ್ತಿಯರ ಉಪಯುಕ್ತ ಕೊಡುಗೆಯ ನೆರವಿನಿಂದ ಭಾರತವು 94 ಓವರ್ ಗಳಲ್ಲಿ .7 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತು. ಚೊಚ್ಚಲ ಪಂದ್ಯವನ್ನಾಡಿದ ಕನ್ನಡತಿ ಶುಭಾ ಸತೀಶ್(69 ರನ್, 76 ಎಸೆತ, 13 ಬೌಂಡರಿ) ಹಾಗೂ ಜೆಮಿಮಾ ರೋಡ್ರಿಗಸ್(68ರ ನ್, 99 ಎಸೆತ, 11 ಬೌಂಡರಿ)ಅರ್ಧಶತಕ ಗಳಿಸಿದ್ದಲ್ಲದೆ 3ನೇ ವಿಕೆಟ್ ಗೆ 115 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.
ಇದೇ ವೇಳೆ ನಾಯಕಿ ಹರ್ಮನ್ಪ್ರೀತ್ ಕೌರ್(49 ರನ್, 81 ಎಸೆತ) ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. ಆದರೆ ಕೇವಲ ಒಂದು ರನ್ನಿಂದ ಚೊಚ್ಚಲ ಅರ್ಧಶತಕದಿಂದ ವಂಚಿತರಾದರು.
ವಿಕೆಟ್ ಕೀಪರ್ ಯಸ್ತಿಕಾ ಭಾಟಿಯಾ 88 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ(66 ರನ್, 10 ಬೌಂಡರಿ, 1 ಸಿಕ್ಸರ್)ಗಳಿಸಿದರು. ಕೌರ್ ಹಾಗೂ ಯಸ್ತಿಕಾ 5ನೇ ವಿಕೆಟ್ ಗೆ 116 ರನ್ ಜೊತೆಯಾಟ ನಡೆಸಿದರು.
ಕೆಳ ಕ್ರಮಾಂಕದ ಬ್ಯಾಟರ್ ಗಳಾದ ದೀಪ್ತಿ ಶರ್ಮಾ ಹಾಗೂ ಸ್ನೇಹ ರಾಣಾ(30 ರನ್) 7ನೇ ವಿಕೆಟ್ ಗೆ 92 ರನ್ ಸೇರಿಸಿ ಭಾರತದ ಸ್ಕೋರನ್ನು 400ರ ಗಡಿ ದಾಟಿಸಿದರು.
ದೀಪ್ತಿ 78 ಎಸೆತಗಳಲ್ಲಿ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ 4ನೇ ಆಟಗಾರ್ತಿ ಎನಿಸಿಕೊಂಡರು. ಭಾರತ ಸ್ವದೇಶದಲ್ಲಿ ಈ ಹಿಂದೆ ಗಳಿಸಿದ್ದ ತನ್ನ ಗರಿಷ್ಠ ಸ್ಕೋರ್ ದಾಖಲೆಯನ್ನು ಉತ್ತಮಪಡಿಸಿಕೊಂಡಿತು. 2014ರಲ್ಲಿ ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಭಾರತವು ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿದ್ದು, ದೀಪ್ತಿ ಶರ್ಮಾ(ಔಟಾಗದೆ 60) ಹಾಗೂ ಪೂಜಾ ವಸ್ತ್ರಕರ್(4) ಕ್ರೀಸ್ ಕಾಯ್ದುಕೊಂಡಿದ್ದಾರೆ.
24ರ ಹರೆಯದ ಶುಭಾ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಭಾರತದ 12ನೇ ಬ್ಯಾಟರ್ ಎನಿಸಿಕೊಂಡರು.
ಮಹಿಳೆಯರ ಟೆಸ್ಟ್ ನಲ್ಲಿ 88 ವರ್ಷಗಳಲ್ಲಿ ಇದೇ ಮೊದಲ ಬಾರಿ ತಂಡವೊಂದು ಒಂದೇ ದಿನ 400ಕ್ಕೂ ಅಧಿಕ ರನ್ ಗಳಿಸಿದೆ. ಇಂಗ್ಲೆಂಡ್ ಮಹಿಳಾ ತಂಡವು ಒಟ್ಟಾರೆ ದಾಖಲೆಯನ್ನು ಹೊಂದಿದ್ದು, 1935ರಲ್ಲಿ ಕ್ರೈಸ್ಟ್ ಚರ್ಚ್ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 2 ವಿಕೆಟ್ ನಷ್ಟಕ್ಕೆ 431 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್
ಭಾರತದ ಮಹಿಳೆಯರ ಮೊದಲ ಇನಿಂಗ್ಸ್: 410/7
(ಶುಭಾ ಸತೀಶ್ 69, ಜೆಮಿಮಾ ರೋಡ್ರಿಗಸ್ 68, ಯಸ್ತಿಕಾ ಭಾಟಿಯಾ 66, ದೀಪ್ತಿ ಶರ್ಮಾ ಔಟಾಗದೆ 60, ಹರ್ಮನ್ಪ್ರೀತ್ ಕೌರ್ 49, ಸ್ನೇಹ ರಾಣಾ 30, ಲೌರೆನ್ ಬೆಲ್ 2-64)