ವಿಶ್ವಕಪ್ 2023: 30 ಓವರ್ ಗಳಲ್ಲಿ ಆಸ್ಟ್ರೇಲಿಯ ಮೂರು ವಿಕೆಟ್ ನಷ್ಟಕ್ಕೆ 230
ಧರ್ಮಶಾಲಾ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ಲೆಕ್ಕಾಚಾರ ಉಲ್ಟಾ ಆಗಿದ್ದು, ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಅವರ ಅಮೋಘ 109 ರನ್ ಹಾಗೂ ಡೇವಿಡ್ ವಾರ್ನರ್ ಸಿಡಿಸಿದ 81 ರನ್ ಗಳ ನೆರವಿನಿಂದ ಕೇವಲ 30 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿದೆ. ಆ ಮೂಲಕ ಬೃಹತ್ ಮೊತ್ತ ಗಳಿಸುವತ್ತ ದಾಪುಗಾಲು ಹಾಕಿದೆ.
ಆರಂಭದಿಂದಲೇ ನ್ಯೂಝಿಲೆಂಡ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಗಳಾದ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಮೊದಲ ವಿಕೆಟ್ ಜೊತೆಯಾಟದಲ್ಲಿ 175 ರನ್ ಗಳಿಸಿ, ತಂಡಕ್ಕೆ ಭದ್ರ ಬುನಾದಿ ಹಾಕಿದರು. ಈ ಇಬ್ಬರೂ ಆರಂಭಿಕ ಬ್ಯಾಟರ್ ಗಳ ವಿಕೆಟ್ ಅನ್ನು ಗ್ಲೆನ್ ಫಿಲಿಪ್ಸ್ ಕಬಳಿಸುವ ಮೂಲಕ ನ್ಯೂಝಿಲೆಂಡ್ ತಂಡಕ್ಕೆ ಕೊಂಚ ನಿರಾಳತೆಯನ್ನುಂಟು ಮಾಡಿದರು.
ಗ್ಲೆನ್ ಫಿಲಿಪ್ಸ್ ಬೌಲಿಂಗ್ ನಲ್ಲಿ ಡೇವಿಡ್ ವಾರ್ನರ್ ಕ್ಯಾಚಿತ್ತು ನಿರ್ಗಮಿಸಿದರೆ, ಟ್ರಾವಿಸ್ ಹೆಡ್ ಬೌಲ್ಡ್ ಆದರು. ನಂತರ ಜೊತೆಗೂಡಿದ ಮಿಚೆಲ್ ಮಾರ್ಷ್ (16) ಹಾಗೂ ಸ್ಟೀವ್ ಸ್ಮಿತ್ (18) ಮೂರನೆಯ ವಿಕೆಟ್ ಜೊತೆಯಾಟದಲ್ಲಿ 30 ರನ್ ಕಲೆ ಹಾಕಿದರು. ಆದರೆ, 29.4ನೇ ಓವರ್ ನಲ್ಲಿ ಗ್ಲೆನ್ ಫಿಲಿಪ್ಸ್ ಬೌಲಿಂಗ್ ನಲ್ಲಿ ಟ್ರೆಂಟ್ ಬೌಲ್ಟ್ ಗೆ ಕ್ಯಾಚಿತ್ತು ಸ್ಟೀವ್ ಸ್ಮಿತ್ ನಿರ್ಗಮಿಸುವ ಮೂಲಕ ಆಸ್ಟ್ರೇಲಿಯ ತಂಡದ ಮೂರನೆಯ ವಿಕೆಟ್ ಪತನವಾಯಿತು.
ನ್ಯೂಝಿಲೆಂಡ್ ಪರ ಮೂರು ವಿಕೆಟ್ ಕೀಳುವ ಮೂಲಕ ಗ್ಲೆನ್ ಫಿಲಿಪ್ಸ್ ಯಶಸ್ವಿ ಬೌಲರ್ ಆಗಿ ಹೊಮ್ಮಿದ್ದರೆ, ಮ್ಯಾಟ್ ಹೆನ್ರಿ ಕೇವಲ ಮೂರು ಓವರ್ ಗಳಲ್ಲಿ 44 ರನ್ ನೀಡುವ ಮೂಲಕ ದುಬಾರಿ ಬೌಲರ್ ಎನಿಸಿಕೊಂಡರು.