ವಿಶ್ವಕಪ್: ಯಾರಾಗಲಿದ್ದಾರೆ ʼಪ್ಲೇಯರ್ ಆಫ್ ದಿ ಟೂರ್ನಮೆಂಟ್ʼ?
ಅಹಮದಾಬಾದ್: ವಿಶ್ವಕಪ್ ಕ್ರಿಕೆಟ್ 2023ರ ಟೂರ್ನಿಯ ಶ್ರೇಷ್ಠ ಕ್ರಿಕೆಟಿಗ ಸ್ಪರ್ಧೆಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ ಹಾಗೂ ಮುಹಮ್ಮದ್ ಶಮಿ ಸೇರಿದಂತೆ ಒಟ್ಟು 9 ಆಟಗಾರರ ನಡುವೆ ಸ್ಪರ್ಧೆಯಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದೆ ಎಂದು indiatoday.in ವರದಿ ಮಾಡಿದೆ.
ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಎಲ್ಲ ವಿಭಾಗಗಳಲ್ಲೂ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಮುಂಬೈನಲ್ಲಿ ಆಸ್ಟ್ರೇಲಿಯ ತಂಡಕ್ಕೆ ಪ್ರತಿಕೂಲ ಪರಿಸ್ಥಿತಿ ಇದ್ದಾಗಲೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಆಸ್ಟ್ರೇಲಿಯ ತಂಡಕ್ಕೆ ರೋಚಕ ಗೆಲುವು ತಂದಿತ್ತಿದ್ದರು. ಮತ್ತೊಂದೆಡೆ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 50ನೇ ಶತಕ ಸಿಡಿಸಿ, ವಿಶ್ವದಾಖಲೆ ಬರೆದಿದ್ದರು. ಇವರಿಬ್ಬರೊಂದಿಗೆ ಮುಹಮ್ಮದ್ ಶಮಿ ಲಕ್ನೊದಲ್ಲಿ ನಡೆದಿದ್ದ ಪಂದ್ಯದಲ್ಲಿ 44 ರನ್ಗೆ 4 ವಿಕೆಟ್ ಕಬಳಿಸಿ ಭಾರತ ತಂಡಕ್ಕೆ ಗೆಲುವು ತಂದಿತ್ತಿದ್ದರು.
ವಿರಾಟ್ ಕೊಹ್ಲಿ:
(ವಿರಾಟ್ ಕೊಹ್ಲಿ: Photo: PTI)
ಈ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೆ 711 ರನ್ ಕಲೆ ಹಾಕಿರುವ ವಿರಾಟ್ ಕೊಹ್ಲಿ, ಗರಿಷ್ಠ ರನ್ ಗಳಿಸಿರುವ ಬ್ಯಾಟರ್ಗಳ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಈ ಕ್ರೀಡಾಕೂಟದಲ್ಲೇ ಅವರು ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆ ಸಾಧನೆಯನ್ನು ಮುರಿದು, ಏಕದಿನ ಪಂದ್ಯಗಳಲ್ಲಿ ಶತಕಗಳ ಅರ್ಧ ಶತಕ ಕೂಡಾ ದಾಖಲಿಸಿದರು.
ಆ್ಯಡಮ್ ಝಂಪಾ
(ಆ್ಯಡಮ್ ಝಂಪಾ\ PHOTO : PTI )
ವಿರಾಟ್ ಕೊಹ್ಲಿ ಅವರಂತೆಯೇ ತಮ್ಮ ಸಾಮರ್ಥ್ಯದ ಕುರಿತು ಟೀಕಾಕಾರರಿಂದ ಪ್ರಶ್ನೆಗೊಳಗಾಗಿದ್ದ ಮತ್ತೊಬ್ಬ ಆಟಗಾರ ಆಸ್ಟ್ರೇಲಿಯ ತಂಡದ ಆ್ಯಡಮ್ ಝಂಪಾ. ಆದರೆ, ಈ ಬಾರಿಯ ಕ್ರೀಡಾಕೂಟದಲ್ಲಿ ಶ್ರೀಲಂಕಾ, ಪಾಕಿಸ್ತಾನ ಹಾಗೂ ನೆದರ್ ಲ್ಯಾಂಡ್ಸ್ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ ತಮ್ಮ ಕೈಚಳಕ ತೊರುವ ಮೂಲಕ ಒಟ್ಟು 22 ವಿಕೆಟ್ಗಳನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ.
ಕ್ವಿಂಟನ್ ಡಿಕಾಕ್
(ಕ್ವಿಂಟನ್ ಡಿಕಾಕ್ \ Photo: NDTV )
ವಿಶ್ವಕಪ್ ಕ್ರೀಡಾಕೂಟದುದ್ದಕ್ಕೂ ಅತಿ ಹೆಚ್ಚು ಗಳಿಸಿದ ಆಟಗಾರರ ಪೈಕಿ ಮುಂಚೂಣಿಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡದ ಎಡಗೈ ಬ್ಯಾಟರ್ ಒಟ್ಟು 591 ರನ್ಗಳನ್ನು ಕಲೆ ಹಾಕಿದ್ದಾರೆ. ಈ ಮೊತ್ತದಲ್ಲಿ, ಶ್ರೀಲಂಕಾ ತಂಡದೆದುರು ಗಳಿಸಿದ 100 ರನ್, ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 109 ರನ್ ಹಾಗೂ ಬಾಂಗ್ಲಾದೇಶದ ವಿರುದ್ಧ ಸಿಡಿಸಿದ 174 ರನ್ ಸೇರಿಸಿ ಒಟ್ಟು ಮೂರು ಶತಕಗಳಿವೆ.
ಮುಹಮ್ಮದ್ ಶಮಿ
(ಮುಹಮ್ಮದ್ ಶಮಿ\ Photo: ICC-X)
ಮುಹಮ್ಮದ್ ಶಮಿ ಈ ಕ್ರೀಡಾಕೂಟದ ಮೊದಲಾರ್ಧ ಭಾಗದ ಪಂದ್ಯಗಳಿಂದ ವಂಚಿತರಾಗಿದ್ದರು. ಆದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರಿಂದ ತಂಡದೊಳಗೆ ಪ್ರವೇಶ ಪಡೆದ ಮುಹಮ್ಮದ್ ಶಮಿ, ತಾವಾಡಿದ ಮೊದಲ ಪಂದ್ಯದಲ್ಲೇ ಐದು ವಿಕೆಟ್ಗಳ ಸಾಧನೆ ಮಾಡಿದರು. ನಂತರದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತ ಶಮಿ, ನಂತರ ಕ್ರಮವಾಗಿ ಐದು, ಎರಡು, ಶೂನ್ಯ ಹಾಗೂ ಏಳು ವಿಕೆಟ್ಗಳನ್ನು ಕಬಳಿಸುವ ಮೂಲಕ, ತಾವಾಡಿದ ಆರು ಪಂದ್ಯಗಳಲ್ಲೇ ಒಟ್ಟು 23 ವಿಕೆಟ್ಗಳನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ಆ ಮೂಲಕ ವಿಶ್ವಕಪ್ ಕ್ರೀಡಾಕೂಟದ ಇತಿಹಾಸದಲ್ಲಿ ಅತಿ ವೇಗವಾಗಿ 50 ವಿಕೆಟ್ ಕಿತ್ತ ಸಾಧನೆಗೆ ಭಾಜನರಾಗಿದ್ದಾರೆ.
ರಚಿನ್ ರವೀಂದ್ರ
(ರಚಿನ್ ರವೀಂದ್ರ \ Photo: PTI )
ಬೆಂಗಳೂರು ಮೂಲದ, ನ್ಯೂಝಿಲ್ಯಾಂಡ್ ತಂಡದ ಆಟಗಾರ ರಚಿನ್ ರವೀಂದ್ರ ವಿಶ್ವಕಪ್ ಕ್ರೀಡಾಕೂಟದುದ್ದಕ್ಕೂ ಅಮೋಘ ಪ್ರದರ್ಶನ ತೋರಿದ ಮತ್ತೊಬ್ಬ ಆಟಗಾರ. ಒಟ್ಟು ಮೂರು ಶತಕ ಹಾಗೂ ಎರಡು ಅರ್ಧ ಶತಕಗಳ ಮೂಲಕ ಒಟ್ಟು 578 ರನ್ ಪೇರಿಸಿರುವ ರಚನ್ ರವೀಂದ್ರ, ಬೌಲಿಂಗ್ನಲ್ಲೂ ತಮ್ಮ ಕೈಚಳಕ ತೋರಿ ಒಟ್ಟು ಐದು ವಿಕೆಟ್ ಕಿತ್ತಿದ್ದಾರೆ. ಈತ ವಿಶ್ವದ ಅತ್ಯಂತ ಭರವಸೆಯ ಆಟಗಾರ ಎಂದು ಕ್ರಿಕೆಟ್ ವಿಶ್ಲೇಷಕರು ಬಣ್ಣಿಸಿದ್ದಾರೆ.
ಗ್ಲೆನ್ ಮ್ಯಾಕ್ಸ್ವೆಲ್
(ಗ್ಲೆನ್ ಮ್ಯಾಕ್ಸ್ವೆಲ್ \ PHOTO: PTI )
ವಿಶ್ವಕಪ್ ಕ್ರೀಡಾಕೂಟದ ಆರಂಭದಲ್ಲಿ ಅಂತಹ ಗಮನಾರ್ಹ ಪ್ರದರ್ಶನವನ್ನೇನೂ ನೀಡಿರದಿದ್ದ ಗ್ಲೆನ್ ಮ್ಯಾಕ್ಸ್ವೆಲ್, ಅಫ್ಘಾನಿಸ್ತಾನ ತಂಡದೆದುರಿನ ನಿರ್ಣಾಯಕ ಪಂದ್ಯದಲ್ಲಿ ತೋರಿದ ಸ್ಫೋಟಕ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ರೋಚಕ ಗೆಲುವು ತಂದಿತ್ತರಲ್ಲದೆ, ವಿಶ್ವಕಪ್ ಕ್ರೀಡಾಕೂಟವೊಂದರಲ್ಲಿ ಗರಿಷ್ಠ ರನ್ ಗಳಿಸಿದ ವಿಶ್ವ ದಾಖಲೆಗೂ ಭಾಜನರಾದರು. ಅವರು ಈವರೆಗೆ ಒಟ್ಟು 392 ರನ್ ಗಳಿಸಿದ್ದು, ಐದು ವಿಕೆಟ್ಗಳನ್ನೂ ಪತನಗೊಳಿಸಿದ್ದಾರೆ.
ರೋಹಿತ್ ಶರ್ಮಾ
(ರೋಹಿತ್ ಶರ್ಮಾ\ Photo: PTI)
ಈ ಬಾರಿಯ ವಿಶ್ವಕಪ್ ಕ್ರೀಡಾಕೂಟದುದ್ದಕ್ಕೂ ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮ, ಈವರೆಗೆ ಒಟ್ಟು 550 ರನ್ ಪೇರಿಸಿದ್ದಾರೆ. ಈ ಮೊತ್ತದಲ್ಲಿ ಒಂದು ಶತಕ ಹಾಗೂ ಮೂರು ಅರ್ಧ ಶತಕಗಳು ಸೇರಿವೆ. ಅವರ ಸ್ಟ್ರೈಕ್ ರೇಟ್ 124.15ರಷ್ಟಿದ್ದು, ಅವರು ಆಡುತ್ತಿರುವ ಆಕ್ರಮಣಕಾರಿ ಆಟಕ್ಕೆ ನಿದರ್ಶನವಾಗಿದೆ.
ಜಸ್ಪ್ರೀತ್ ಬೂಮ್ರಾ
(ಜಸ್ಪ್ರೀತ್ ಬೂಮ್ರಾ\ Photo: PTI)
ವಿಶ್ವಕಪ್ ಕ್ರೀಡಾಕೂಟದ ಮೊದಲರ್ಧ ಪಂದ್ಯಗಳಲ್ಲಿ ಮುಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದು ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ. ತಮ್ಮ ಹಾಗೂ ಸ್ವಿಂಗ್ಗಳ ಎದುರಾಳಿ ಬ್ಯಾಟರ್ಗಳ ನಿದ್ದೆಗೆಡಿಸಿ ಬೂಮ್ರಾ, ಇಲ್ಲಿಯವರೆಗೆ 18 ವಿಕೆಟ್ಗಳನ್ನು ಪತನಗೊಳಿಸಿದ್ದಾರೆ.
ಡೇರಿಲ್ ಮಿಚೆಲ್
(ಡೇರಿಲ್ ಮಿಚೆಲ್ : Photo : X)
ಈ ಬಾರಿಯ ವಿಶ್ವಕಪ್ ಕ್ರೀಡಾಂಗಣದಲ್ಲಿ ನ್ಯೂಝಿಲ್ಯಾಂಡ್ ತಂಡದ ಪರವಾಗಿ ರಚಿನ್ ರವೀಂದ್ರರನ್ನು ಹೊರತುಪಡಿಸಿದರೆ ಸ್ಥಿರ ಪ್ರದರ್ಶನ ನೀಡಿದ್ದು ಡೇರಿಲ್ ಮಿಚೆಲ್. ಅವರು ಈವರೆಗೆ ಒಟ್ಟು 552 ರನ್ ಗಳಿಸಿದ್ದು, ನ್ಯೂಝಿಲೆಂಡ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೆಯ ಆಟಗಾರನಾಗಿದ್ದಾರೆ. ಅವರು ತಮ್ಮ ಒಟ್ಟು ಮೊತ್ತದಲ್ಲಿ ಭಾರತ ತಂಡದ ವಿರುದ್ಧವೇ ಎರಡು ಶತಕಗಳನ್ನು ಸಿಡಿಸಿದ್ದು ಗಮನಾರ್ಹ.