ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: ಶಶಿಕಲಾ, ಇಳವರಸಿಗೆ ಜಾಮೀನು ರಹಿತ ವಾರೆಂಟ್ ಜಾರಿ

Update: 2023-09-05 18:22 GMT

ಬೆಂಗಳೂರು, ಸೆ.5: ಜೈಲಿನ ಅಧಿಕಾರಿಗಳಿಗೆ ಲಂಚ ನೀಡಿ ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಹಾಗೂ ಇಳವರಸಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಮಾಜಿ ಸಿಎಂ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿ.ಕೆ.ಶಶಿಕಲಾ ಹಾಗೂ ಇಳವರಸಿ ನಾಲ್ಕು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಜೈಲು ಶಿಕ್ಷೆ ವೇಳೆ ಇವರಿಬ್ಬರು ಅಧಿಕಾರಿಗಳಿಗೆ ಲಂಚ ನೀಡಿ ಐಷಾರಾಮಿ ಸೌಲಭ್ಯಗಳನ್ನು ಪಡೆದಿದ್ದರು ಎಂಬ ಆರೋಪವಿದೆ.

ಶಿಕ್ಷೆ ವೇಳೆ ಅಲ್ಲಿನ ಅಧಿಕಾರಿಗಳಿಗೆ 2 ಕೋಟಿ ರೂಪಾಯಿ ಲಂಚ ನೀಡಿ ಶಾಪಿಂಗ್‍ಗೆಂದು ಈ ಇಬ್ಬರು ಜೈಲಿನಿಂದ ಹೊರ ಬಂದಿದ್ದರು. ಶಶಿಕಲಾ ಹಾಗೂ ಇಳವರಸಿ ಶಾಪಿಂಗ್‍ಗೆ ತೆರಳಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಸಂಬಂಧ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.

ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಕಾರಾಗೃಹ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಗಾಗಲೇ ರದ್ದು ಮಾಡಿದ್ದು, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ಶಶಿಕಲಾ ಮತ್ತು ಇಳವರಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ವೇಳೆ ಶಶಿಕಲಾ ಹಾಗೂ ಇಳವರಸಿ ನ್ಯಾಯಾಲಯಕ್ಕೆ ಗೈರು ಹಾಜರಿದ್ದರು. ಇದಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಗೆ ಹಾಜರಾಗದ ಹಿನ್ನಲೆ ಲೋಕಾಯುಕ್ತ ನ್ಯಾಯಾಲಯ ಶಶಿಕಲಾ ಹಾಗೂ ಇಳವರಸಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಇದಲ್ಲದೆ ಶಶಿಕಲಾ ಮತ್ತು ಇಳವರಸಿ ಜಾಮೀನಿಗೆ ಸಹಿ ಹಾಕಿದ ವ್ಯಕ್ತಿಗಳಿಗೂ ಲೋಕಾಯುಕ್ತ ಕೋರ್ಟ್ ನೋಟಿಸ್ ಜಾರಿ ಮಾಡಿ ಪ್ರಕರಣದ ವಿಚಾರಣೆಯನ್ನು ಅ.5ಕ್ಕೆ ಮುಂದೂಡಿದೆ

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News