ವಕ್ಫ್ ಬೋರ್ಡ್ ವತಿಯಿಂದ 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ನಿರ್ಮಾಣ: ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು: ರಾಜ್ಯ ವಕ್ಫ್ ಬೋರ್ಡ್ ವತಿಯಿಂದ 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದೇ ರೀತಿ ತಾಲೂಕು ಮತ್ತು ಜಿಲ್ಲೆ ಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೂ ಚಿಂತನೆ ಇದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಶುಕ್ರವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ವಕ್ಫ್ ಆಸ್ತಿ ದೇವರ ಆಸ್ತಿ. ಇದರ ಸಂರಕ್ಷಣೆ ಎಲ್ಲರ ಕರ್ತವ್ಯ ಎಂದು ಹೇಳಿದರು.
ವಕ್ಫ್ ಆಸ್ತಿ ಸಂರಕ್ಷಣೆ ಕೇವಲ ಸಚಿವ ಅಥವಾ ರಾಜ್ಯಾಧ್ಯಕ್ಷರ ಜವಾಬ್ದಾರಿ ಮಾತ್ರವಲ್ಲ. ಜಿಲ್ಲಾಧ್ಯಕ್ಷರು ಹಾಗೂ ಅಧಿಕಾರಿಗಳ ಹೊಣೆಗಾರಿಕೆಯೂ ಹೌದು. ವಕ್ಫ್ ಆಸ್ತಿ ಸರಕಾರ ಕೊಟ್ಟಿದ್ದು, ಅದು ಸರಕಾರಕ್ಕೆ ಸೇರಿದ್ದು ಎಂಬ ಭಾವನೆ ಇದೆ. ಒಂದೇ ಒಂದು ಇಂಚು ಭೂಮಿಯನ್ನು ವಕ್ಫ್ ಬೋರ್ಡ್ ಸರಕಾರದಿಂದ ಪಡೆದಿಲ್ಲ. ಇದು ಸಮುದಾಯದ ಒಳಿತಿಗಾಗಿ ದಾನಿಗಳು ಕೊಟ್ಟಿರುವ ದಾನ ಆಗಿದೆ. ಖಬರಸ್ಥಾನ ಹೊರತುಪಡಿಸಿ ಸರಕಾರದಿಂದ ನಮಗೆ ಬೇರೆ ಯಾವುದೇ ಜಾಗ ಕೊಟ್ಟಿಲ್ಲ ಎಂದು ಅವರು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ವಕ್ಫ್ ಅದಾಲತ್ ನಡೆಸುತ್ತಿರುವುದರಿಂದ ಹಲವಾರು ಸಮಸ್ಯೆ ಬಗೆಹರಿದಿವೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವಕ್ಫ್ ಅದಾಲತ್‍ಗಳನ್ನು ನಡೆಸಲಾಗುವುದು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು, ತಮ್ಮ ಜಿಲ್ಲೆಗಳ ಸಮಸ್ಯೆ ಹೇಳಿಕೊಂಡರು. ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಕೊಡಲು ದಾನಿಗಳು ಸಿದ್ದ ಇರುವ ಬಗ್ಗೆಯೂ ಸಭೆಯ ಗಮನಕ್ಕೆ ತಂದರು.
ಇದೇ ಸಂದರ್ಭದಲ್ಲಿ ಒಂದು ವರ್ಷ ಪೂರೈಸಿದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಅವರನ್ನು ಸನ್ಮಾನಿಸಲಾಯಿತು. ಒಂದು ವರ್ಷದ ಸಾಧನೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ವಕ್ಫ್ ಬೋರ್ಡ್ ಸದಸ್ಯರಾದ ಯಾಕೂಬ್, ಮೌಲನಾ ಶಾಫಿ ಸಅದಿ, ಆರ್.ಅಬ್ದುಲ್ ರಿಯಾಝ್ ಖಾನ್, ಅಡ್ವೊಕೇಟ್ ಆಸೀಫ್, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಸಿಇಒ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.