ಮಡಿಕೇರಿ: ದರೋಡೆ ಪ್ರಕರಣದ 6 ಮಂದಿ ಆರೋಪಿಗಳ ಬಂಧನ

Update: 2023-12-20 08:56 GMT

ಮಡಿಕೇರಿ ಡಿ.20 : ಗೋಣಿಕೊಪ್ಪ ಸಮೀಪದ ದೇವರಪುರದಲ್ಲಿ ಡಿ.9ರ ರಾತ್ರಿ ವಾಹನ ಅಡ್ಡಗಟ್ಟಿ ನಡೆಸಲಾಗಿದ್ದ 50 ಲಕ್ಷ ರೂ.ಗಳ ದರೋಡೆ ಪ್ರಕರಣದ 6 ಮಂದಿ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ವಿರಾಜಪೇಟೆಯ ಆರ್ಜಿ ಗ್ರಾಮದ ನಾಗೇಶ್, ಬಿಟ್ಟಂಗಾಲದ ಪ್ರಶಾಂತ್, ಗಾಂಜಾ ರಮೇಶ್ ಮತ್ತು ಕ್ಲೀನರ್ ರಮೇಶ್ ಹಾಗೂ ಇಬ್ಬರು ಕೇರಳ ರಾಜ್ಯದ ತಲಶ್ಶೇರಿಯ ಹಾರುನ್ ಹಾಗೂ ಜಂಶದ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 3 ಲಕ್ಷ ರೂ. ನಗದು ಕೃತ್ಯಕ್ಕೆ ಬಳಸಿದ್ದ 1 ಕಾರು ಮತ್ತು ಒಂದು ಪಿಕ್‍ಅಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಈ ಪೈಕಿ ವಿರಾಜಪೇಟೆ ತಾಲೂಕಿನ ಮಲೆತಿರಿಕೆ ಬೆಟ್ಟದ ನಿವಾಸಿ ಪೆರೋಲ್ ದಿನೇಶ್ ಕೂಡ ಪ್ರಮುಖ ಆರೋಪಿಯಾಗಿದ್ದು, ಪ್ರಸ್ತುತ ಕೊಲೆ ಪ್ರಕರಣವೊಂದರಲ್ಲಿ ತ್ರಿಶೂರ್ ಜೈಲಿನಲ್ಲಿದ್ದಾನೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಎಸ್.ಪಿ. ರಾಮರಾಜನ್, ಡಿ.9ರಂದು ಕೇರಳ ಮೂಲದ ಗುತ್ತಿಗೆದಾರ ಶಂಜದ್ ಎಂಬವರು 50 ಲಕ್ಷ ರೂ. ದರೋಡೆಯಾಗಿರುವ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೈಸೂರಿನಲ್ಲಿ ಚಿನ್ನವನ್ನು ಮಾರಿ ಕೇರಳಕ್ಕೆ ಮರಳುತ್ತಿದ್ದ ಸಂದರ್ಭ 4 ವಾಹನಗಳಲ್ಲಿ ಆಗಮಿಸಿದ 10ರಿಂದ 15 ಮಂದಿಯ ತಂಡ ನಮ್ಮ ಮೇಲೆ ಹಲ್ಲೆ ನಡೆಸಿ ಕಾರು ಸಹಿತ ಹಣವನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದರು ಎಂದು ಎಸ್.ಪಿ. ರಾಮರಾಜನ್ ವಿವರಿಸಿದರು.

ದರೋಡೆ ಪ್ರಕರಣದಲ್ಲಿ ಈಗ ಬಂಧಿತರಾದವರು ಅಲ್ಲದೆ 10ಕ್ಕೂ ಹೆಚ್ಚು ಮಂದಿ ಆರೋಪಿಗಳು ಪಾಲ್ಗೊಂಡಿರುವ ಶಂಕೆ ಇದ್ದು, ಎಲ್ಲರನ್ನೂ ಬಂಧಿಸಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಇಂತಹ ಕೃತ್ಯಗಳಿಗೆ ಅವಕಾಶವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಕರಣದ ದೂರುದಾರ ಶಂಜದ್ ಮೊದಲಿಗೆ 750 ಗ್ರಾಂ ಚಿನ್ನವನ್ನು ಮಾರಿ ಅದರಿಂದ ಬಂದ 50 ಲಕ್ಷ ರೂ.ಗಳನ್ನು ಕೊಂಡೊಯ್ಯುವ ಸಂದರ್ಭ ದರೋಡೆ ನಡೆದಿದೆ ಎಂದು ಹೇಳಿಕೆ ನೀಡಿದ್ದಾನೆ. ಪೊಲೀಸರು ತನಿಖೆ ನಡೆಸಿ ಮೈಸೂರಿನ ಅಶೋಕಪುರ ರಸ್ತೆಯ ಚಿನ್ನಾಭರಣ ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ 993 ಗ್ರಾಂ ಚಿನ್ನವನ್ನು 61 ಲಕ್ಷದ 70 ಸಾವಿರ ರೂ.ಗೆ ವ್ಯವಹಾರ ನಡೆಸಿರುವುದಾಗಿ ತಿಳಿಸಿದ್ದಾನೆ.  ಈ ವಹಿವಾಟಿಗೆ ಯಾವುದೇ ದಾಖಲಾತಿ ಕೂಡ ನೀಡಿಲ್ಲದಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಶಂಜದ್ ತೆರಿಗೆ ವಂಚಿಸುವ ಸಲುವಾಗಿ ಇಂತಹ ಹೇಳಿಕೆ ನೀಡುವ ಮೂಲಕ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿರುವುದು ಬಯಲಾಗಿದೆ ಎಂದು ವಿವವರಿಸಿದರು.

ಯಾವುದೇ ದಾಖಲೆಗಳಿಲ್ಲದೇ ಚಿನ್ನ ಮಾರಾಟ ಮಾಡಿರುವುದು, ಲಕ್ಷಾಂತರ ರೂ. ಹಣದ ವ್ಯವಹಾರ ನಡೆಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಒಟ್ಟು 993 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.  ಈ ಕುರಿತು ಆದಾಯ ತೆರಿಗೆ ಇಲಾಖೆ, ಸೇಲ್ ಟ್ಯಾಕ್ಸ್, ಕಸ್ಟಮ್ಸ್, ಜಿಎಸ್‍ ಟಿ ಸೇರಿದಂತೆ ಸಂಬಂಧಪಟ್ಟ ವಿವಿಧ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. ತೆರಿಗೆ ವಂಚನೆ, ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳೇ ಇವುಗಳ ಕುರಿತು ತನಿಖೆ ನಡೆಸುತ್ತವೆ ಎಂದು ಎಸ್.ಪಿ. ರಾಮರಾಜನ್ ವಿವರಿಸಿದರು.

ಪ್ರಕರಣವನ್ನು ಬೇಧಿಸಲು ತಮ್ಮ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಂದರ್ ರಾಜ್, ವಿರಾಜಪೇಟೆ ಡಿವೈಎಸ್‍ಪಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಅವರ ಸಹಿತ ಒಟ್ಟು 3 ಮಂದಿ ವೃತ್ತ ನಿರೀಕ್ಷಕರು ಮತ್ತು 7 ಮಂದಿ ಪೊಲೀಸ್ ಅಧಿಕಾರಿಗಳ ಸಹಿತ ಒಟ್ಟು 40 ಮಂದಿಯ ತಂಡವನ್ನು ನೇಮಿಸಲಾಗಿತ್ತು. ಇದರೊಂದಿಗೆ ಜಿಲ್ಲಾ ಪೊಲೀಸ್ ತಾಂತ್ರಿಕ ತಂಡಗಳ ನೆರವನ್ನೂ ಪಡೆಯಲಾಗಿತ್ತು ಎಂದು ಎಸ್.ಪಿ. ರಾಮರಾಜನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News