ಕುಟುಂಬ ಪಿಂಚಣಿ ಪಡೆಯಲು 2ನೇ ಪತ್ನಿ ಅರ್ಹರಲ್ಲ: ಹೈಕೋರ್ಟ್
ಬೆಂಗಳೂರು: ಮೊದಲ ಪತ್ನಿ ಜೀವಂತವಾಗಿರುವಾಗಲೇ 2ನೇ ವಿವಾಹವಾಗಿದ್ದ ಸರಕಾರಿ ಉದ್ಯೋಗಿಯಾದ ಪತಿಯ ಮರಣದ ಹಿನ್ನೆಲೆಯಲ್ಲಿ ಪಿಂಚಣಿ ಕೋರಿ ಎರಡನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾ ಮಾಡಿದೆ. ಕೌಟುಂಬಿಕ ಪಿಂಚಣಿಯನ್ನು ಪತ್ನಿಗೆ ಪಾವತಿಸಲಾಗುತ್ತದೆಯೇ ವಿನಹ ಕಾನೂನಿನ ದೃಷ್ಟಿಯಲ್ಲಿ ಸಿಂಧುತ್ವ ಹೊಂದಿರದ ಪತ್ನಿಗಲ್ಲ ಎಂದಿದೆ.
ಹಿಂದೂ ವಿವಾಹ ಕಾಯಿದೆ ಸೆಕ್ಷನ್ 17ರ ಅಡಿ ದ್ವಿಪತ್ನಿತ್ವ ಅಪರಾಧವಾಗಿದೆ ಮತ್ತು ಕರ್ನಾಟಕ ಸಿವಿಲ್ ಸೇವೆಗಳ ನಿಯಮಗಳು ನಿಯಮ 294ರಲ್ಲಿ ಸರಕಾರಿ ಅಧಿಕಾರಿ ನಿವೃತ್ತಿ ಅಥವಾ ವಿಧಿವಶರಾದರೆ ಅವರ ಕುಟುಂಬದವರಿಗೆ ಪಿಂಚಿಣಿ ನೀಡಬೇಕು ಎಂದು ಹೇಳುತ್ತದೆ ಎಂದು ಹೈಕೋರ್ಟ್ ವಿಭಾಗೀಯ ಪೀಠವು ಹೇಳಿದೆ.
ಹಿಂದೂ ವಿವಾಹ ಕಾಯಿದೆ 1955 ಸೆಕ್ಷನ್ 16ರ ಅಡಿ ಎರಡನೇ ವಿವಾಹದಿಂದ ಜನಿಸಿದ ಮಕ್ಕಳ ನ್ಯಾಯಸಮ್ಮತತೆಗೆ ಸೀಮಿತ ಸ್ಥಾನಮಾನವಿದೆ ಎಂದು ವಿಭಾಗೀಯ ಪೀಠ ಹೇಳಿದೆ.
ಪಿಂಚಣಿ ಪಡೆಯಲು ಮೇಲ್ಮನವಿದಾರರು ಕಾನೂನಾತ್ಮಕವಾಗಿ ಮದುವೆಯಾಗಿಲ್ಲ. ಹಿಂದೂ ಧರ್ಮದಲ್ಲಿ ಏಕಪತ್ನಿತ್ವ ಅನುಕರಣೀಯ ಮಾತ್ರವಲ್ಲ. ಕಾನೂನಿನ ಪ್ರಕಾರ ಸಿಂಧುವಾಗುತ್ತದೆ. ಮೊದಲ ಪತ್ನಿ ಜೀವಂತವಾಗಿದ್ದಾಗ ಎರಡನೇ ವಿವಾಹವಾಗುವುದನ್ನು ಕಾನೂನಿನ ಅಡಿ ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿದೆ.