50 ಲಕ್ಷ ರೂ. ದಂಡ | ಏಕಸದಸ್ಯ ಪೀಠದಿಂದ ಅರ್ಜಿ ವಜಾ ಹಿನ್ನೆಲೆ: ಮೇಲ್ಮನವಿ ಸಲ್ಲಿಸಿದ ಟ್ವಿಟರ್

Update: 2023-08-03 15:15 GMT

ಬೆಂಗಳೂರು, ಆ.3: ಕೆಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರಕಾರ ಹೊರಡಿಸಿದ್ದ ನಿರ್ದೇಶನವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿ 50 ಲಕ್ಷ ರೂ.ಗಳ ದಂಡ ವಿಧಿಸಿ ಆದೇಶಿಸಿದ್ದ ಏಕ ಸದಸ್ಯ ಪೀಠದ ಕ್ರಮ ಪ್ರಶ್ನಿಸಿ ಟ್ವಿಟರ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.

ಟ್ಟಟರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಭಾಗೀಯ ಪೀಠದ ಮುಂದೆ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಮೇಲ್ಮನವಿ ಅರ್ಜಿಯಲ್ಲಿ ಏಕ ಸದಸ್ಯ ಪೀಠ 50 ಲಕ್ಷ ದಂಡ ವಿಧಿಸಿರುವುದು ಅತಿ ಹೆಚ್ಚಿನ ಪ್ರಮಾಣದ ದಂಡವಾಗಿದೆ. ಅಲ್ಲದೆ, ಇದೂ ನಿಯಮಬಾಹಿರವಾಗಿದ್ದೂ ಈ ಆದೇಶ ರದ್ದುಪಡಿಸಬೇಕು ಎಂದು ಮಧ್ಯಂತರ ಮನವಿ ಮಾಡಿದೆ.

ಖಾತೆದಾರರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 69 ಅಡಿಯಲ್ಲಿ ಕೇಂದ್ರ ಸರಕಾರವು ಕೆಲವು ಖಾತೆಗಳನ್ನು ರದ್ದುಪಡಿಸಿದೆ ಎಂದು ಟ್ವಿಟರ್ ಆರೋಪಿಸಿತ್ತು. ಅಲ್ಲದೆ, 2021ರ ಫೆ.2 ರಿಂದ 2022ರ ಫೆ.28ರ ಅವಧಿಯಲ್ಲಿ ಕೇಂದ್ರ ಸರಕಾರ 1474 ವೈಯಕ್ತಿಕ ಖಾತೆಗಳು ಮತ್ತು 175 ಟ್ವೀಟ್‍ಗಳು ಹಾಗೂ 256 ನಿಷೇಧಿತ ವೆಬ್‍ಸೈಟ್‍ಗಳ(ಯುಆರ್‍ಎಲ್)ಗಳು ಹಾಗೂ ಒಂದು ಹ್ಯಾಶ್ ಟ್ಯಾಗ್‍ಗೆ ನಿರ್ಬಂಧ ವಿಧಿಸಿತ್ತು.

ಆದರೆ, ಯುಆರ್‍ಎಲ್‍ಗಳನ್ನು ರದ್ದುಪಡಿಸಿದ್ದ ಕ್ರಮ ಪ್ರಶ್ನಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಪ್ರಕರಣ ಸಂಬಂಧ 8 ಪ್ರಶ್ನೆಗಳನ್ನು ರೂಪಿಸಿತ್ತು. ಅದರಲ್ಲಿ ವಿದೇಶಿ ಕಂಪೆನಿ ದೇಶದಲ್ಲಿ ಅರ್ಜಿ ಸಲ್ಲಿಸಬಹುದೇ ಎಂಬ ಅಂಶವನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಶ್ನೆಗಳು ಟ್ವಿಟರ್‍ಗೆ ವಿರುದ್ಧವಾಗಿವೆ ಎಂದು ತಿಳಿಸಿ ಅರ್ಜಿಯನ್ನು ತಿರಸ್ಕರಿಸಿತ್ತು.

ಅಲ್ಲದೆ, ಸುಮಾರು ಒಂದು ವರ್ಷದ ಕಾಲ ಕೇಂದ್ರ ಸರಕಾರದ ಆದೇಶಗಳನ್ನು ಪಾಲಿಸದ ಟ್ವಿಟರ್ ಆ ನಂತರ ಹೈಕೋರ್ಟ್ ಮೆಟ್ಟಿಲೇರಿದೆ ಎಂದು ತಿಳಿಸಿದ್ದ ನ್ಯಾಯಪೀಠ, 50 ಲಕ್ಷ ರೂ. ದಂಡ ವಿಧಿಸಿತ್ತು. ಇದೀಗ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಟ್ವಿಟರ್ ಹೈಕೋರ್ಟ್‍ನ ದ್ವಿಸದಸ್ಯ ಪೀಠದ ಮೊರೆ ಹೋಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News