ಮುಂದಿನ ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟದಲ್ಲಿ ಸಂಪೂರ್ಣ ಬದಲಾವಣೆ: ಶಾಸಕ ವಿನಯ ಕುಲಕರ್ಣಿ ಅಚ್ಚರಿಯ ಹೇಳಿಕೆ
ವಿಜಯಪುರ:ಆ.19: 'ಮುಂದಿನ ಎರಡೂವರೆ ವರ್ಷದ ಬಳಿಕ ರಾಜ್ಯ ಸರಕಾರದ ಸಚಿವ ಸಂಪುಟ ಬದಲಾವಣೆಯಾಗಲಿದೆ' ಎಂದು ಹೇಳುವ ಮೂಲಕ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅಚ್ಚರಿ ಮೂಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹಿರಿಯ ಸಚಿವ ಕೆ.ಎಚ್ ಮುನಿಯಪ್ಪ ಈ ಕುರಿತು ಹೇಳಿಕೆ ನೀಡಿರುವುದು ಸಂತಸ ತಂದಿದೆ. ಎರಡೂವರೆ ವರ್ಷದ ಬಳಿಕ ಅದೇ ರೀತಿ ಆಗಲಿದೆ. ಮುಂದೆ ನನಗೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಅವಕಾಶವೂ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಇಡೀ ತಂಡ ಬದಲಾಗಲಿದೆ ಎಂದ ಅವರು, ಮುಖ್ಯಮಂತ್ರಿ ಬದಲಾವಣೆ ಬಲಾವಣೆ ಮಾತ್ರ ಹೈಕಮಾಂಡ್‍ಗೆ ಬಿಟ್ಟದ್ದು' ಎಂದು ಹೇಳಿದರು.
ʼಆಪರೇಷನ್ ಹಸ್ತʼದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಸಾಕಷ್ಟು ಮಂದಿ ಬಿಜೆಪಿಯಿಂದ ಬರುವ ಸಾಧ್ಯತೆಯಿದೆ. 13 ರಿಂದ 14 ಮಾಜಿ ಶಾಸಕರು ಬರುವ ನಿರೀಕ್ಷೆ ಇದೆ. ಆದರೆ, ಹಾಲಿ ಶಾಸಕರ ಬಗ್ಗೆ ನನಗೆ ಮಾಹಿತಿ ಇಲ್ಲ' ಎಂದರು.
‘ಪ್ರತ್ಯೇಕ ಲಿಂಗಾಯತ ಧರ್ಮ’ ಹೋರಾಟ ಕೈಬಿಟ್ಟಿಲ್ಲ'
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈಬಿಟ್ಟಿಲ್ಲ. ಎಲ್ಲರೂ ಒಂದಾಗಿ ಹೋರಾಟ ನಡೆಸುವ ಕುರಿತು ಮಾತುಕತೆಯೂ ಆಗಿದೆ. ನಾವು ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಬಸವಣ್ಣನವರ ತತ್ವದ ಮೇಲೆ ಹುಟ್ಟಿಕೊಂಡಿರುವ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೇಳಿದ್ದೆವು. ಬೌದ್ಧ, ಸಿಖ್, ಮುಸ್ಲಿಮ್, ಜೈನ ಧರ್ಮಗಳಂತೆ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಮಾಡಿ ಎಂದು ಕೇಳಿದ್ದೆವು. ಆದರೆ, ಆ ಹೋರಾಟ ಕೆಲವರಿಗೆ ಅರ್ಥವಾಗಲಿಲ್ಲ. ಆ ಸಂದರ್ಭದಲ್ಲಿ ದಿಕ್ಕು ತಪ್ಪಿಸುವ ಕೆಲಸವಾಯಿತು ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.