‘ಒಳ ಮೀಸಲು ಜಾರಿಗೊಳಿಸಲು ಒತ್ತಾಯ’ | ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಮಾದಿಗ ಮುಖಂಡರ ನಿಯೋಗ

Update: 2024-08-28 14:14 GMT

PC : x/@CMofKarnataka

ಬೆಂಗಳೂರು : ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ ಮುಖಂಡರು ಸಚಿವರಾದ ಕೆ.ಎಚ್.ಮುನಿಯಪ್ಪ ಹಾಗೂ ಆರ್.ಬಿ.ತಿಮ್ಮಾಪುರ್ ನೇತೃತ್ವದಲ್ಲಿ ಬುಧವಾರ ಮುಖ್ಯಮಂತ್ರಿಯ ಸರಕಾರಿ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೊಂದ, ಅಸ್ಪೃಶ್ಯ ಸಮಾಜದ ನೋವಿನ ಅರಿವು ನನಗಿದೆ. ಒಳ ಮೀಸಲು ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದಂತೆ ಅದನ್ನು ಸ್ವಾಗತಿಸಿದ್ದೇನೆ. ಅದರರ್ಥ ನಾನು ನೊಂದ ಜನರ ಪರ ಎನ್ನುವ ಮೂಲಕ ಒಳ ಮೀಸಲು ಜಾರಿಗೊಳಿಸುವುದಾಗಿ ಅಭಯ ನೀಡಿದರು.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುವುದು. ನಮ್ಮದು ರಾಷ್ಟ್ರೀಯ ಪಕ್ಷ. ಜೊತೆಗೆ ಸಚಿವ ಸಂಪುಟದಲ್ಲಿ ಈ ವಿಷಯ ತೀರ್ಮಾನಗೊಳ್ಳಬೇಕು. ನಾನು ಹಾಗೂ ಪಕ್ಷ ಸದಾ ನೊಂದ ಜನರ ಪರವಾಗಿ ಇರುತ್ತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಮನವಿ ಪತ್ರದಲ್ಲಿ ಏನಿದೇ?: ಒಳ ಮೀಸಲು ಜಾರಿಗೆ ಇದ್ದ ಅಡೆತಡೆಗೆ ಸುಪ್ರೀಂಕೋರ್ಟ್ ತೀರ್ಪು ನಿವಾರಣೆ ಮಾಡಿದೆ. ಅದೆಲ್ಲದಿಕ್ಕಿಂತಲೂ ತಾವು ಸದಾ ಶೋಷಿತರ ಪರ ಹೋರಾಟ, ಯೋಜನೆ ರೂಪಿಸುತ್ತಿರುವ ಹರಿಕಾರರು. ತಮ್ಮ ಸಾಮಾಜಿಕ ಬದ್ಧತೆ ಪ್ರಶ್ನಾತೀತ. ಒಳಮೀಸಲು ಜಾರಿಗೊಳಿಸಲು ತಮ್ಮಲ್ಲಿನ ಇಚ್ಛಾಶಕ್ತಿಗೆ ಬಲ ತುಂಬಲು ನಿಯೋಗದ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ ಎಂದು ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರವನ್ನು ಓದಿದ ಮಾಜಿ ಸಚಿವ ಎಚ್.ಆಂಜನೇಯ, ಮಾದಿಗ ಸಮುದಾಯಕ್ಕೆ ನ್ಯಾಯವಾಗಿ ದೊರಕಬೇಕಾಗಿದ್ದ ಮೀಸಲಾತಿ ಪ್ರಮಾಣ ನಿರೀಕ್ಷೆಮಟ್ಟದಲ್ಲಿ ದೊರೆತಿಲ್ಲ. ಈ ಸತ್ಯವನ್ನು ಅರಿತು ಜೊತೆಗೆ ಬಹಳಷ್ಟು ವರದಿಗಳನ್ನು ಮುಂದಿಟ್ಟುಕೊಂಡು ಒಳ ಮೀಸಲು ಜಾರಿಗೆ ಮಾದಿಗ ಸಮುದಾಯದ ಸತತ ಮೂವತ್ತು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದೆ ಎಂದರು.

ನಿರಂತರ ಹೋರಾಟದ ಫಲ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಜೊತೆಗೆ, ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರಕ್ಕೆ ಅಧಿಕಾರವಿದೆಯೆಂದು ಐತಿಹಾಸಿಕ ತೀರ್ಪನ್ನು ನೀಡಿದೆ. ಈಗಾಗಲೆ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸರಕಾರಗಳು ಒಳ ಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿವೆ. ಅದೇ ರೀತಿ ತಾವು ಕೂಡ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಶೀಘ್ರ ಜಾರಿಗೊಳಿಸುವ ಮೂಲಕ ಸಮುದಾಯದ ಸಮಗ್ರ ಪ್ರಗತಿಗೆ ಮುಂದಾಗಬೇಕೆಂದು ಅವರು ಕೋರಿದರು.

ಮುಖ್ಯವಾಗಿ ಈಗಾಗಲೆ ಕೆಪಿಎಸ್ಸಿ ಸೇರಿ ವಿವಿಧ ಇಲಾಖೆಗಳ ಮೂಲಕ ಘೋಷಿತವಾಗಿರುವ ಪರೀಕ್ಷೆಗಳನ್ನು ಒಳ ಮೀಸಲು ಜಾರಿಗೊಳ್ಳುವವರೆಗೂ ತಡೆ ಹಿಡಿಯಬೇಕು ಹಾಗೂ 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಆ.27ರಂದು ನಡೆದಿರುವ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದಂತೆ ಮುಂದೆ ನಡೆಯುವ ಮುಖ್ಯ ಪರೀಕ್ಷೆಯಲ್ಲಿ ಒಳ ಮೀಸಲಾತಿ ಹಂಚಿಕೆ ಪ್ರಕಾರ ನಡೆಸುವ ಹುದ್ದೆಗಳು ಹಂಚಿಕೆಯಾಗುವಂತೆ ಷರತ್ತು ವಿಧಿಸಿ ನೋಟಿಫಿಕೇಷನ್ ಮಾಡಬೇಕು ಎಂದು ಆಂಜನೇಯ ಹೇಳಿದರು.

ಒಳ ಮೀಸಲಾತಿ ಜಾರಿಗೊಳ್ಳುವವರೆಗೆ ರಾಜ್ಯ ಸರಕಾರದ ಯಾವುದೆ ಇಲಾಖೆಗಳ ಹುದ್ದೆಗಳನ್ನು ತುಂಬುವ ಪ್ರಕ್ರಿಯೆಗಳು ನಡೆಯಬಾರದು ಹಾಗೂ ಸರಕಾರದ ಯೋಜನೆಗಳಲ್ಲಿ ಆರ್ಥಿಕ ಮೀಸಲಾತಿ(ಎಸ್.ಸಿ.ಎಸ್.ಪಿ/ಟಿ.ಎಸ್.ಪಿ), ಕೆಐಎಡಿಬಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಿಗಳ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯೂ ಸ್ಥಗಿತಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಸುಪ್ರೀಂಕೋರ್ಟ್ ತೀರ್ಪು ಬಂದ ತಕ್ಷಣ ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಹರಿಯಾಣ ಮತ್ತಿತರ ರಾಜ್ಯಗಳ ಸರಕಾರವೂ ಒಳ ಮೀಸಲಾತಿ ಜಾರಿಗೆ ಆಗುವವರೆಗೂ ಖಾಲಿಯಿರುವ ಹುದ್ದೆಗಳಿಗೆ ಕರೆದಿರುವ ಪ್ರಕ್ರಿಯೆಗಳಿಗೆ ತಕ್ಷಣ ತಡೆ ಹಿಡಿದಿದ್ದಾರೆ. ಅದೇ ಮಾರ್ಗವನ್ನು ರಾಜ್ಯದಲ್ಲೂ ಅನುಸರಿಸಬೇಕು ಎಂದು ಆಂಜನೇಯ ಹೇಳಿದರು.

ಸರ್ವರಿಗೂ ಸಮ ಪಾಲು-ಸಮ ಬಾಳು, ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹೋರಾಟ ಮಾಡಿಕೊಂಡು ಬಂದಿರುವ ಅಹಿಂದ ವರ್ಗದ ನೇತಾರ ಆಗಿರುವ ತಾವು ನೊಂದ ಜನರ ಕುರಿತು ಅಂತಃಕರಣ ಹೃದಯ ಹೊಂದಿದ್ದೀರಾ. ಆದುದರಿಂದ, ಶೋಷಿತರಲ್ಲೆ ಶೋಷಿತರು, ಅಸ್ಪೃಶ್ಯರಲ್ಲೆ ಅಸ್ಪೃಶ್ಯರು ಆದ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲು ಜಾರಿಗೆಗಾಗಿ ತಕ್ಷಣ ಆದೇಶ ಹೊರಡಿಸಬೇಕೆಂದು ವಿನಯಪೂರ್ವಕವಾಗಿ ವಿನಂತಿಸುತ್ತೇವೆ ಎಂದು ಮನವಿ ಪತ್ರದಲ್ಲಿರುವ ಎಲ್ಲ ಅಂಶಗಳನ್ನು ಆಂಜನೇಯ ಓದಿದರು.

ಈ ಸಂದರ್ಭದಲ್ಲಿ ಶಾಸಕರಾದ ಎನ್.ಶ್ರೀನಿವಾಸ, ಬಸವಂತಪ್ಪ, ಡಾ.ತಿಮ್ಮಯ್ಯ, ಶಿವಣ್ಣ, ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News