'ಲ್ಯಾಟರಲ್ ಎಂಟ್ರಿ' ರದ್ದತಿ | ಇಂಡಿಯಾ ಒಕ್ಕೂಟ ನಡೆಸಿದ ಹೋರಾಟದ ಫಲ: ದಿನೇಶ್ ಗುಂಡೂರಾವ್
ಬೆಂಗಳೂರು: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ 45 ಉನ್ನತ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ಮಾಡಿಕೊಳ್ಳುವ ತನ್ನ ಅಸಂವಿಧಾನಿಕ ನಡೆಯಿಂದ ಮೋದಿ ಸರ್ಕಾರ ಹಿಂದೆ ಸರಿದಿದೆ. ಇದು ಇಂಡಿಯಾ ಒಕ್ಕೂಟ ನಡೆಸಿದ ಹೋರಾಟದ ಫಲ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಶೋಷಿತ ಸಮುದಾಯಗಳಿಗೆ ಸಂವಿಧಾನ ನೀಡಿರುವ ಮೀಸಲಾತಿ ಹಕ್ಕನ್ನು ಕಸಿಯುವ ಕುಟಿಲ ತಂತ್ರವನ್ನು ಮೋದಿ ಸರ್ಕಾರ ಮಾಡುತ್ತಲೇ ಇದೆ. ಲ್ಯಾಟರಲ್ ಎಂಟ್ರಿ ಮೂಲಕ ಖಾಸಗಿಯವರಿಗೆ ಉನ್ನತ ಹುದ್ದೆಗಳಲ್ಲಿ ನೇಮಕ ಮಾಡಿ ಮೀಸಲಾತಿ ಕಸಿಯುವುದು ಕೂಡ ಈ ಕುಟಿಲ ತಂತ್ರದ ಭಾಗವಾಗಿತ್ತು. ಆದರೆ ಇಂಡಿಯಾ ಒಕ್ಕೂಟಗಳ ಒಗ್ಗಟಿನ ಹೋರಾಟ ಲ್ಯಾಟರಲ್ ಎಂಟ್ರಿ ಎಂಬ ಷಡ್ಯಂತ್ರವನ್ನು ವಿಫಲಗೊಳಿಸಿದೆ ಎಂದು ಹೇಳಿದ್ದಾರೆ.
ಖಾಸಗೀಕರಣದಿಂದ ಮಾತ್ರ ಅಭಿವೃದ್ಧಿ ಎಂಬ ಭ್ರಮೆ ಸೃಷ್ಟಿಸಿ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವುದರ ಹಿಂದಿನ ಹುನ್ನಾರವೇ ಮೀಸಲಾತಿ ಕಸಿದುಕೊಳ್ಳುವುದು. ಮೋದಿ ಸರ್ಕಾರ ಕಳೆದ ಹತ್ತು ವರ್ಷದ ಅವಧಿಯಲ್ಲಿ ಮಾಡಿರುವ ಖಾಸಗೀಕರಣದ ಹಿಂದಿನ ದುಷ್ಟ ಉದ್ದೇಶವೇ ಇದು. ಕಳೆದ ಹತ್ತು ವರ್ಷಗಳಿಂದ ವ್ಯವಸ್ಥಿತವಾಗಿ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ಶೋಷಿತರ ಮೀಸಲಾತಿ ಹಕ್ಕನ್ನು ನಿರಾಕರಿಸಲಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮೋದಿ ಸರ್ಕಾರ ಮೀಸಲಾತಿ ಕಸಿಯಲು'ಲ್ಯಾಟರಲ್ ಎಂಟ್ರಿ' ಎಂಬ ನೂತನ ತಂತ್ರ ಹುಡುಕಿಕೊಂಡಿತ್ತು. ಕೊನೆಗೂ ಅದಕ್ಕೆ ಬ್ರೇಕ್ ಬಿದ್ದಿದೆ ಎಂದಿದ್ದಾರೆ.