ಬಿಎಂಟಿಸಿ ನೌಕರರಿಗೆ 1 ಕೋಟಿ ರೂ.ವರೆಗೆ ಅಪಘಾತ ವಿಮಾ ಸೌಲಭ್ಯ: ಸಚಿವ ರಾಮಲಿಂಗಾರೆಡ್ಡಿ

Update: 2023-09-25 17:21 GMT

ಬೆಂಗಳೂರು, ಸೆ.25: ಬಿಎಂಟಿಸಿ ನೌಕರರಿಗೂ 1 ಕೋಟಿ ರೂ.ವರೆಗೆ ಅಪಘಾತ ವಿಮಾ ಸೌಲಭ್ಯ ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸೋಮವಾರ ನಗರದ  ಜ್ಞಾಜ್ಯೋತಿ ಸಭಾಂಗಣದಲ್ಲಿ ಬಿಎಂಟಿಸಿ ರಜತ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಮಿಕ ಕಲ್ಯಾಣ ಯೋಜನೆ ಅಡಿ ಕೆಎಸ್ಸಾರ್ಟಿಸಿ ನೌಕರರಿಗೆ ಒಂದು ಕೋಟಿ ರೂ.ವರೆಗೆ ಅಪಘಾತ ವಿಮಾ ಸೌಲ್ಯಭ್ಯ ಕಲ್ಪಿಸಲಾಗಿದೆ. ಈ ವ್ಯವಸ್ಥೆಯನ್ನು ಬಿಎಂಟಿಸಿ ನೌಕರರಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

ಅಲ್ಲದೆ, ಸೇವೆಯಲ್ಲಿದ್ದಾಗ ಮೃತಪಟ್ಟ ಸಾರಿಗೆ ನೌಕರರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಆದೇಶಗಳನ್ನು ತ್ವರಿತಗತಿಯಲ್ಲಿ ನೀಡಬೇಕು. ಹಲವು ತಾಂತ್ರಿಕ ಕಾರಣಗಳಿಂದ ಏಳೆಂಟು ವರ್ಷಗಳಿಂದ ಕಾಯುತ್ತಿದ್ದಾರೆ. ಅವರಿಗೆಲ್ಲ ಹಂತ-ಹಂತವಾಗಿ ನೇಮಕಾತಿ ಆದೇಶಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಮಾತನಾಡಿ, ಕಳೆದ ಹತ್ತು ತಿಂಗಳಲ್ಲಿ ಜಯದೇವ ಹೃದ್ರೋಗ, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಿಂದ 7,635 ಬಿಎಂಟಿಸಿ ನೌಕರರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಈ ಪೈಕಿ ಶೇ.62ರಷ್ಟು ಜನ ಅತಿಯಾದ ತೂಕ ಹೊಂದಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಅವರು, ತಪಾಸಣೆಗೊಳಪಟ್ಟ ನೌಕರರಲ್ಲಿ ಶೇ.37 ಮಧುಮೇಹ, ಶೇ.40 ಜನರಿಗೆ ಅಧಿಕ ರಕ್ತದೊತ್ತಡ ಇದೆ. ಶೇ. 22 ಧೂಮಪಾನ, ಮದ್ಯಸೇವನೆ ಮಾಡುತ್ತಿರುವುದು ಕಂಡುಬಂದಿದೆ. ಶೇ. 3 ನೌಕರರಲ್ಲಿ ಹೃದಯ ಸಂಬಂಧಿ ಕಾಯಿಲೆ ಇದೆ ಎಂದರು.

ಸಾರಿಗೆ ನಿಗಮಗಳ ಪುನಃಶ್ಚೇತನದ ಏಕಸದಸ್ಯ ಸಮಿತಿಯ ಎಂ.ಆರ್.ಶ್ರೀನಿವಾಸಮೂರ್ತಿ ಮಾತನಾಡಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಬಿಎಂಟಿಸಿ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಉಪೇಂದ್ರ ತ್ರಿಪಾಠಿ, ನಿವೃತ್ತ ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

 

ಆ್ಯಪ್ ಸೇವೆ ಆರಂಭ

ಬಹುನಿರೀಕ್ಷಿತ ನಮ್ಮ ಬಿಎಂಟಿಸಿ ಆ್ಯಪ್ ಅನ್ನು ಬಿಎಂಟಿಸಿ ರಜತ ಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಪ್ರಯಾಣಿಕ ಸ್ನೇಹಿ ಆಗಿರುವ ಈ ಆ್ಯಪ್‍ನಲ್ಲಿ ಪ್ರಯಾಣಿಕರು ತಮ್ಮ ಹತ್ತಿರದ ಬಸ್ ನಿಲುಗಡೆ, ಬಸ್ ಆಗಮನ, ಪ್ರಯಾಣ ದರ ತಿಳಿಯಬಹುದು. ನೀವು ಪ್ರಯಾಣಿಸುವ ಮಾರ್ಗದ ಲೈವ್ ಲೊಕೇಷನ್ ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಕೂಡ ಮಾಡಬಹುದು.

6,500 ಬಸ್‍ಗಳ ಪೈಕಿ ಸದ್ಯಕ್ಕೆ 5 ಸಾವಿರ ಬಸ್‍ಗಳನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ನಿಲ್ದಾಣದ ಸುತ್ತಲಿನ ಎಟಿಎಂ, ರೆಸ್ಟೋರೆಂಟ್, ಆಸ್ಪತ್ರೆ, ಪೊಲೀಸ್ ಠಾಣೆ, ಪಾರ್ಕಿಂಗ್ ವ್ಯವಸ್ಥೆ ಮಾಹಿತಿಯನ್ನೂ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ರಜತ ಮಹೋತ್ಸವದಲ್ಲಿನ ವಿಶೇಷತೆಗಳು

ಅಪಘಾತರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿಪದಕ ವಿತರಣೆ. ವಾಯವ್ಯ ವಲಯ ಉದ್ಘಾಟನೆ. ಇದರೊಂದಿಗೆ ವಲಯಗಳ ಸಂಖ್ಯೆ ಏಳಕ್ಕೆ ಏರಿಕೆ. ಅನುಕಂಪದ ಆಧಾರದಲ್ಲಿ ನೌಕರಿ ಪಡೆದ ಸಿಬ್ಬಂದಿಗೆ ನೇಮಕಾತಿ ಆದೇಶ ವಿತರಣೆ. ಕೆನರಾ ಬ್ಯಾಂಕ್ ವೇತನ ಆಧಾರಿತ ವಿಮೆ ಪರಿಷ್ಕೃತ  ಒಡಂಬಡಿಕೆ. ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಣೆ. ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರಿಗಾಗಿ ಕ್ಯಾಂಟೀನ್ ವ್ಯವಸ್ಥೆ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News