ಕೋವಿಡ್ ಹಗರಣ ಆರೋಪ | ಮಾಜಿ ಸಚಿವ ಕೆ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಸೇರಿ ಮೂವರ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2024-04-01 15:22 GMT

ಕೆ.ಸುಧಾಕರ್/ ಪ್ರದೀಪ್ ಈಶ್ವರ್

ಬೆಂಗಳೂರು : ಕೋವಿಡ್ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಾ.ಕೆ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಹಾಗೂ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪ ಎದುರಿಸುತ್ತಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಮಾಜಿ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ರಾಜ್ಯ ಸರಕಾರದ ಕಾರ್ಯದರ್ಶಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಕುಮಾರ್ ಎಂಬುವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಕೆ.ಸುಧಾಕರ್ ಅವರು ನಡೆಸಿದ್ದಾರೆ ಎನ್ನಲಾದ ಕೋವಿಡ್ ಹಗರಣದ ಬಗ್ಗೆ ತನಿಖೆಗೆ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. 2021ರ ಜುಲೈ-ಆಗಸ್ಟ್ ನಲ್ಲಿ ನಡೆದ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ' ನೀಡಿರುವಂತೆ ಕೋವಿಡ್ ನಿರ್ವಹಣೆ ತಡೆಗಟ್ಟಲು ಔಷಧ, ಉಪಕರಣಗಳು ಹಾಗೂ ಸಾಮಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಕುರಿತು ತನಿಖೆಗೆ ನ್ಯಾ.ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿ, 3 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿತ್ತು.

ವಿಚಾರಣಾ ಆಯೋಗವು ಸಂಬಂಧಪಟ್ಟ ಇಲಾಖೆಗಳಿಂದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಟೆಂಡರ್, ವೈದ್ಯಕೀಯ ಉಪಕರಣ, ವೆಂಟಿಲೇಟರ್ ಗಳ ಖರೀದಿ ಹಾಗೂ ಆಮ್ಲಜನಕ ನಿರ್ವಹಣೆ ಬಗ್ಗೆ ಎರಡು ಲಕ್ಷಕ್ಕೂ ಅಧಿಕ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲೆಗಳಲ್ಲಿ ಖರೀದಿಗಳ ಬಗ್ಗೆ ಹಾಗೂ ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆ ಮಾಡಿರುವ ಕುರಿತು ದಾಖಲೆಗಳನ್ನು ತರಿಸಿಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಈಗಾಗಲೇ ವಿಚಾರಣೆ ನಡೆಸಿದೆ.

ಈ ಎಲ್ಲವನ್ನೂ ಕ್ರೂಢೀಕರಿಸಿ ವರದಿ ಸಿದ್ಧಪಡಿಸಿರುವ ಆಯೋಗವು, ಸರಕಾರಕ್ಕೆ ಸಲ್ಲಿಸಲು ತಯಾರಿ ಮಾಡಿಕೊಂಡಿದೆಯಾದರೂ, 3 ತಿಂಗಳ ಕಾಲಾವಕಾಶ ನೀಡಿದ್ದರೂ 8 ತಿಂಗಳಾದರೂ ವರದಿಯನ್ನು ಸರಕಾರಕ್ಕೆ ಸಲ್ಲಿಸಿಲ್ಲ. ಈ ನಡುವೆ ‘ಕೋವಿಡ್ ಅಕ್ರಮದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಹಗರಣವನ್ನು ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್‍ನ ಯಾವ್ಯಾವ ನಾಯಕರನ್ನು ಭೇಟಿಯಾಗಿದ್ದಾರೆಂಬುದು ಗೊತ್ತಿದೆ' ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಹೇಳಿಕೆ ನೀಡಿದ್ದಾರೆ.

ಜವಾಬ್ದಾರಿಯುತ ಜನಪ್ರತಿನಿಧಿಯಾಗಿರುವ ಪ್ರದೀಪ್ ಈಶ್ವರ್ ನೀಡಿರುವ ಹೇಳಿಕೆಯ ವಿಚಾರಣೆಯನ್ನು ಕೂಲಂಕಷವಾಗಿ ತನಿಖೆ ನಡೆಸಿ ಸತ್ಯಾಂಶವನ್ನು ಹೊರಗೆಳೆಯುವುದಲ್ಲದೆ, ತಪ್ಪು ಮಾಹಿತಿಗಳನ್ನು ಒದಗಿಸಿ ಸಮಿತಿಯ ದಿಕ್ಕು ತಪ್ಪಿಸುವ ಪ್ರಯತ್ನವೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಆಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿ ಸರಕಾರದ ಮುಖ್ಯ ಕಾರ್ಯದರ್ಶಿಗಳು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದನ್ನು ಪರಿಗಣಿಸಿ, ವಾಸ್ತವಿಕ ಸತ್ಯ ಮರೆಮಾಚಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಲು ಕಾರಣರಾಗಿರುವ ಡಾ.ಕೆ. ಸುಧಾಕರ್ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News