ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಕಠಿಣ ಶಿಸ್ತು ಕ್ರಮ: ನೀತಿ ಮರುಪರಿಶೀಲನೆಗೆ ಹೈಕೋರ್ಟ್ ಸಲಹೆ

Update: 2023-07-03 13:28 GMT

ಬೆಂಗಳೂರು, ಜು.3: ವಿದ್ಯಾರ್ಥಿಗಳ ಮೇಲೆ ಶಾಲೆಗಳು ಕಠಿಣವಾದ ಶಿಸ್ತು ಕ್ರಮ ಜರುಗಿಸುವುದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಅಂತಹ ನೀತಿ ಮರುಪರಿಶೀಲಿಸಬೇಕು ಎಂದು ಹೈಕೋರ್ಟ್ ಶಾಲೆಗಳಿಗೆ ಸಲಹೆ ನೀಡಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕೊಡಗಿನ ಶಾಲಾ ಸಿಬ್ಬಂದಿ ಗೌರಮ್ಮ, ದತ್ತ ಕರುಂಬಯ್ಯ ಮತ್ತು ಚೇತನಾ ಬೋಪಣ್ಣ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲ್ನೋಟಕ್ಕೆ ಇದು ಐಪಿಸಿ ಕಲಂ 107 ಮತ್ತು ಕಲಂ 305ರ ಅಡಿಯಲ್ಲೂ ಒಳಗೊಳ್ಳುತ್ತದೆ. ಹೀಗಾಗಿ, ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ತಲುಪಲು ಶಾಲೆಯ ಸಿಬ್ಬಂದಿ ಪ್ರಚೋದನೆ ನೀಡಿದ್ದಾರೆಯೊ ಇಲ್ಲವೇ ಎಂಬುದು ವಿಚಾರಣೆಯಲ್ಲಿ ಸಾಬೀತಾಗಲಿ ಎಂದು ನ್ಯಾಯಪೀಠ ಹೇಳಿದೆ.

ಬಾಲಕ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 15 ನಿಮಿಷಗಳವರೆಗೆ ಶಾಲೆಯ ಜತೆ ಸಂಪರ್ಕದಲ್ಲಿದ್ದನು. ಮೇಲ್ನೋಟಕ್ಕೆ ಪ್ರಕರಣದಲ್ಲಿ ಸತ್ಯಾಂಶವಿದೆ ಎನಿಸುತ್ತಿದೆ. ಶಾಲೆ ತನ್ನ ತಪ್ಪನ್ನು ಮುಚ್ಚಿಹಾಕಿಕೊಳ್ಳಲು ವಿದ್ಯಾರ್ಥಿಯ ಮೇಲೆ ಆರೋಪ ಹೊರಿಸುತ್ತಿದೆ. ಆದುದರಿಂದ, ಮುಂದಿನ ವಿಚಾರಣೆ ನಡೆದು ಸತ್ಯಾಂಶ ಹೊರಬರಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಶಾಲೆಗೆ ಮದ್ಯ ತಂದಿದ್ದ ಎಂಬ ಆರೋಪದಡಿ ಕೊಡಗಿನ 9ನೆ ತರಗತಿಯ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಅಮಾನತುಗೊಳಿಸಿತ್ತು. ಪರೀಕ್ಷೆಗೆ ಕೂರಿಸದೇ ಮನೆಯಿಂದಲೇ ಪರೀಕ್ಷೆ ಬರೆಸುವ ಭರವಸೆ ನೀಡಿತ್ತು. ಆದರೆ ಆನ್‍ಲೈನ್ ಲಿಂಕ್ ಕಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಘಟನೆಗೆ ಸಂಬಂಧಿಸಿದಂತೆ ಶಾಲಾ ಸಿಬ್ಬಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ‘ಬಿ‘ ರಿಪೋರ್ಟ್ ಸಲ್ಲಿಸಿದ್ದರು. ಆದರೆ ‘ಬಿ’ ರಿಪೋರ್ಟ್ ಅನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಶಾಲೆಯ ನಿರ್ದೇಶಕರು, ಪ್ರಾಂಶುಪಾಲರು ಮತ್ತು ವಾರ್ಡನ್ ವಿರುದ್ಧ ವಿಚಾರಣೆ ಮುಂದುವರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News