ಕರಾವಳಿ ಭಾಗದ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಕ್ರಮ: ಎಚ್.ಕೆ.ಪಾಟೀಲ್
ಬೆಳಗಾವಿ, ಡಿ. 5: ಕರಾವಳಿ ಪ್ರದೇಶದಲ್ಲಿನ ಕಡಲ ಕಿನಾರೆ ಸೇರಿ ವಿವಿಧ ಪ್ರಸಿದ್ಧ ಮತ್ತು ಪ್ರೇಕ್ಷಣೀಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಉಮಾನಾಥ್ ಕೊಟ್ಯಾನ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡುವ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್ ಅವರು ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಆದ್ಯತೆ ನೀಡಲಾಗುತ್ತಿದ್ದು, ರಾಜ್ಯದಲ್ಲಿರುವ 23 ಸಾವಿರ ಸ್ಮಾರಕಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಸೋಕ್, ‘ವಿದೇಶದಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ನಮ್ಮಲ್ಲೂ ಆ ರೀತಿಯ ಬಹಳಷ್ಟು ಅವಕಾಶಗಳಿವೆ. ಸರಕಾರ ಹಣ ಖರ್ಚು ಮಾಡುವ ಬದಲಾಗಿ ಸರಕಾರ ಹಾಗೂ ಖಾಸಗಿ (ಪಿಪಿಪಿ) ಸಹಭಾಗಿತ್ವದ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಸಮ್ಮತಿಸಿದ ಸಚಿವ ಎಚ್.ಕೆ.ಪಾಟೀಲ್, ‘ಖಾಸಗಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಒತ್ತು ನೀಡಲಾಗುತ್ತಿದೆ. ಕ್ಯಾರವಾನ್ ಪಾರ್ಕ್, ಕ್ಯಾರವಾನ್ ಪ್ರವಾಸೋದ್ಯಮ, ಸಮಾವೇಶ ಕೇಂದ್ರ, ಸಾಂಸ್ಕತಿಕ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ ಸೇರಿದಂತೆ ಹಲವು 26 ಸ್ವರೂಪದ ಚಟುವಟಿಕೆಗಳಿಗೆ ಖಾಸಗಿ ಬಂಡವಾಳವನ್ನು ಆಕರ್ಷಿಸಲಾಗುತ್ತಿದೆ ಎಂದು ಹೇಳಿದರು.
ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್ ಅಳವಡಿಕೆಗೆ
ನಂದಿಬೆಟ್ಟ ಸೇರಿದಂತೆ ರಾಜ್ಯದ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರು ಯೋಜನೆ ಅಳವಡಿಕೆಯ ಕಾರ್ಯಸಾಧುತ್ವ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ರಾಜ್ಯದಲ್ಲಿನ ಹೆಚ್ಚು ಜನರು ಭೇಟಿ ನೀಡುವ ಎಲ್ಲಮ್ಮನ ಗುಡ್ಡ, ಅಂಜನಾದ್ರಿ ಬೆಟ್ಟ, ನಂದಿ ಬೆಟ್ಟ, ಗಗನಚುಕ್ಕಿ, ಭರಚುಕ್ಕಿ ತಾಣಗಳಲ್ಲಿ ಕೇಬಲ್ ಕಾರ್ ಅಳವಡಿಕೆಗೆ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಸಾಧುತ್ವದ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಗಗನಚುಕ್ಕಿ, ಭರಚುಕ್ಕಿ ಜಲಪಾತದಲ್ಲಿ ಪ್ರವಾಸಿಗರನ್ನು ಸೆಳೆಯಲು ಕೇಬಲ್ ಕಾರ್ ಯೋಜನೆ ಜಾರಿಗೊಳಿಸುವ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಉತ್ತರ ನೀಡಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ನರೇಂದ್ರಸ್ವಾಮಿ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.