ಸಿಆರ್‌ಝಡ್ ವಲಯದಲ್ಲಿ ಮರಳು ತೆಗೆಯಲು ನಿರಾಪೇಕ್ಷಣ ಪತ್ರ ನೀಡಲು ಕ್ರಮ: ಸಚಿವ ಮಲ್ಲಿಕಾರ್ಜುನ್

Update: 2023-12-08 06:55 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 8: ‘ದಕ್ಷಿಣ ಕನ್ನಡ ಜಿಲ್ಲೆಯ ಮರಳು ಸಮಸ್ಯೆ ಪರಿಹಾರಕ್ಕೆ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್)ದ ನದಿ ಪಾತ್ರಗಳ ವ್ಯಾಪ್ತಿಯಲ್ಲಿನ ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರಕ್ಕೆ ತ್ವರಿತಗತಿಯಲ್ಲಿ ನಿರಾಪೇಕ್ಷಣಾ ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಿರಾಪೇಕ್ಷಣ ಪತ್ರಕ್ಕೆ 2023ರ ಅ. 3 ರಂದು ಪ್ರಸ್ತಾವ ಸಲ್ಲಿಸಲಾಗಿದೆ. ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರದಿಂದ ನಿರಾಪೇಕ್ಷಣಾ ಪತ್ರ ದೊರೆತ ನಂತರ ಸದರಿ ಮರಳು ದಿಬ್ಬಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಹಾಗೂ ಸರಕಾರಿ ಕಾಮಗಾರಿಗಳಿಗೆ ಮರಳು ಪೂರೈಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ನದಿ ಪಾತ್ರಗಳ ವ್ಯಾಪ್ತಿ ಯಲ್ಲಿ ಟೆಂಡರ್ ಕಂ-ಹರಾಜು ಮೂಲಕ 25 ಮರಳು ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದ್ದು, ಸದರಿ ಮರಳು ಗುತ್ತಿಗೆ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದ್ದು, ಜಿಲ್ಲೆಯ ಜನರಿಗೆ ಹಾಗೂ ಸರಕಾರಿ ಕಾಮಗಾರಿಗಳಿಗೆ ಮರಳು ಪೂರೈಕೆ ಮಾಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16 ಎಂ-ಸ್ಯಾಂಡ್ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಎಂ-ಸ್ಯಾಂಡ್ ಘಟಕಗಳಿಂದ ವಾರ್ಷಿಕ 3,36,400 ಮೆಟ್ರಿಕ್ ಟನ್ ಎಂ-ಸ್ಯಾಂಡ್ ಉತ್ಪಾದಿಸುತ್ತಿದ್ದು, ಇದರಿಂದ ಮರಳಿನ ಬೇಡಿಕೆ ಕಡಿಮೆಯಾಗಿದೆ. ಆದರೆ, ಮರಳಿನ ಕೊರತೆ ಕಾರಣಕ್ಕೆ ಅಭಿವೃದ್ದಿ ಕಾರ್ಯಗಳು ಹಾಗೂ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿಲ್ಲ’ ಎಂದು ಮಲ್ಲಿಕಾರ್ಜುನ್ ಸ್ಪಷ್ಟಣೆ ನೀಡಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ವೇದವ್ಯಾಸ ಕಾಮತ್, ‘ಸರಕಾರ ನಿರಾಪೇಕ್ಷಣ ಪತ್ರ ನೀಡುವುದಕ್ಕೆ ವಿಳಂಬ ಮಾಡುತ್ತಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಕೊರತೆ ತೀವ್ರವಾಗಿದೆ. ಬ್ಲಾಕ್‌ನಲ್ಲಿ 15ರಿಂದ 16ಸಾವಿರ ರೂ.ಗಳಿಗೂ ಅಧಿಕ ಮೊತ್ತದ ಲೋಡ್ ಮರಳು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಸರಕಾರ ತ್ವರಿತವಾಗಿ ಸಿಆರ್‌ಝಡ್ ವಲಯದಲ್ಲಿ ಮರಳು ತೆಗೆಯಲು ನಿರಾಪೇಕ್ಷಣಾ ಪತ್ರ ನೀಡಬೇಕು’ ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News