ಬೆಂಗಳೂರು-ವಿಜಯಪುರ ರೈಲು ಪ್ರಯಾಣದ ಅವಧಿ ಇಳಿಸಲು ಕ್ರಮ: ಸಚಿವ ಎಂ.ಬಿ.ಪಾಟೀಲ್

Update: 2024-03-15 13:28 GMT

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆಗೆ ರೈಲು ಪ್ರಯಾಣಕ್ಕೆ ಈಗ ಸುಮಾರು 14 ಗಂಟೆಗಳ ಕಾಲ ಹಿಡಿಯುತ್ತಿದ್ದು, ಇದನ್ನು 10 ಗಂಟೆಗಳಿಗೆ ಇಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ನಿಧಾನಗತಿಯಲ್ಲಿ ಸಾಗುತ್ತಿರುವ ವೆಚ್ಚ ಹಂಚಿಕೆಯ 9 ರೈಲು ಯೋಜನೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲು ಶುಕ್ರವಾರ ನಗರದ ಖನಿಜ ಭವನದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರಯಾಣದ ಅವಧಿ ಇಳಿಸುವುದರಿಂದ ವಾಯವ್ಯ ಕರ್ನಾಟಕದ ಜನರು ಬೆಂಗಳೂರಿಗೆ ಬಂದುಹೋಗಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು-ವಿಜಯಪುರ ನಡುವಿನ 660 ಕಿ.ಮೀ ರೈಲು ಪ್ರಯಾಣಕ್ಕೆ ಈಗ ಸುಮಾರು 14 ಗಂಟೆ ಸಮಯ ಹಿಡಿಯುತ್ತಿದೆ. ಬೆಂಗಳೂರಿನಿಂದ ಹೊರಡುವ ರೈಲುಗಳು ಈಗ ಹುಬ್ಬಳ್ಳಿ ನಿಲ್ದಾಣಕ್ಕೆ ಹೋಗುತ್ತಿದ್ದು, ಅಲ್ಲಿ ಎಂಜಿನ್ ಬದಲಿಸಲು 45 ನಿಮಿಷ ನಿಲ್ಲುತ್ತವೆ. ಬಳಿಕ, ಗದಗದಲ್ಲೂ ಹೀಗೆಯೇ ಸಮಯ ವ್ಯರ್ಥವಾಗುತ್ತಿದೆ. ಆದುದರಿಂದ, ರೈಲುಗಳು ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಹೋಗುವ ಬದಲು ಹುಬ್ಬಳ್ಳಿ (ದಕ್ಷಿಣ) ನಿಲ್ದಾಣ ಬೈಪಾಸ್ ಮತ್ತು ಗದಗ ಬೈಪಾಸ್ ಮೂಲಕ ಸಾಗುವ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಅವರು ಸೂಚಿಸಿದರು.

ಈಗಾಗಲೇ ಬೆಂಗಳೂರು-ಹುಬ್ಬಳ್ಳಿ-ಬಾಗಲಕೋಟೆ ನಡುವೆ ಜೋಡಿ ಹಳಿ ಇದೆ. ಬಾಗಲಕೋಟೆ-ವಿಜಯಪುರ ಮಧ್ಯೆ ಆಲಮಟ್ಟಿಯವರೆಗೂ ದ್ವಿಪಥ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಈ ವರ್ಷದ ಸೆಪ್ಟೆಂಬರ್ ಹೊತ್ತಿಗೆ ಮುಗಿಯಲಿದೆ. ಇಲ್ಲಿ ಆಲಮಟ್ಟಿ-ವಂಡಾಳ್ ಮಧ್ಯೆ 9 ಕಿ.ಮೀ. ಮಾತ್ರ ಕಾಮಗಾರಿ ಬಾಕಿ ಉಳಿದಿದ್ದು, ಇಲ್ಲಿ ಸೇತುವೆ ಕಾಮಗಾರಿ ನಡೆಯಬೇಕಿದೆ. ಇದನ್ನು 2025ರ ಆಗಸ್ಟ್ ವೇಳೆಗೆ ಪೂರ್ಣಗೊಳಿಸಲಾಗುವುದು. ಜೊತೆಗೆ, ಇನ್ನು ಎರಡು ತಿಂಗಳಲ್ಲಿ ಈ ಮಾರ್ಗದಲ್ಲಿ ಬಾಕಿ ಇರುವ ವಿದ್ಯುದೀಕರಣ ಕೂಡ ಮುಗಿಯಲಿದೆ ಎಂದು ಅವರು ವಿವರಿಸಿದರು.

ಈ ಕ್ರಮಗಳ ಜೊತೆಗೆ ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆಗಳಿಗೆ ವಿಶೇಷ ರೈಲುಗಳನ್ನು ಓಡಿಸಬೇಕಾದ ಅಗತ್ಯವಿದೆ. ಮಿಗಿಲಾಗಿ, ವಿದ್ಯುದೀಕರಣ ಕಾಮಗಾರಿ ಮುಗಿದರೆ ವಿಜಯಪುರ, ಬಾಗಲಕೋಟೆಗಳಿಗೆ `ವಂದೇ ಭಾರತ್’ ಎಕ್ಸಪ್ರೆಸ್ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಮಂಡಳಿಯನ್ನು ಕೋರಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ರಾಜ್ಯದಲ್ಲಿ ರೈಲ್ವೆಯೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ 9 ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ, ಇವು ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ವೆಚ್ಚ ಮಿತಿ ಮೀರುತ್ತಿದೆ. ಆದುದರಿಂದ ಇವುಗಳ ವೆಚ್ಚ ಹೆಚ್ಚಾಗದಂತೆ ನೋಡಿಕೊಂಡು, ತ್ವರಿತ ಗತಿಯಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಅವರು ಹೇಳಿದರು.

ಈ ಪೈಕಿ ಮುನಿರಾಬಾದ್-ಮೆಹಬೂಬ್ ನಗರ ಯೋಜನೆಯನ್ನು 2026ರ ಮಾರ್ಚ್ ವೇಳೆಗೆ, ತುಮಕೂರು-ರಾಯದುರ್ಗ ಯೋಜನೆಯನ್ನು 2027ರ ಡಿಸೆಂಬರ್ ಹೊತ್ತಿಗೆ, ಚಿಕ್ಕಮಗಳೂರು-ಬೇಲೂರು ಯೋಜನೆಯನ್ನು 2026ರ ಹೊತ್ತಿಗೆ, ಬಾಗಲಕೋಟೆ-ಕುಡಚಿ ಯೋಜನೆಯನ್ನು 2027ರ ವೇಳೆಗೆ ಮುಗಿಸಬೇಕು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ತುಮಕೂರು-ದಾವಣಗೆರೆ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಇದರಲ್ಲಿ ರಾಜ್ಯವು ಒಂದು ಪಥದ ಅಭಿವೃದ್ಧಿಗೆ ಮಾತ್ರ ವೆಚ್ಚ ಭರಿಸುತ್ತಿದೆ. ಆದರೆ, ರೈಲ್ವೆ ಇಲಾಖೆಯು ಈಗಾಗಲೇ ಜೋಡಿ ಹಳಿ ಹಾಕಲು ತೀರ್ಮಾನಿಸಿರುವುದು ಒಳ್ಳೆಯ ಬೆಳವಣಿಗೆ. ಇದನ್ನು 2027ಕ್ಕೆ ಮುಗಿಸಬೇಕು. ಇದರಿಂದ ಬಾಗಲಕೋಟೆ ಮತ್ತು ವಿಜಯಪುರಗಳ ನಡುವಿನ ನೇರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಗದಗ-ವಾಡಿ ಮಾರ್ಗದಲ್ಲಿ ಬರುವ ಹಳಕಟ್ಟೆ ಎಂಬಲ್ಲಿ ಭೂಸ್ವಾಧೀನದ ಸಮಸ್ಯೆ ಎದುರಾಗಿದೆ. ಆರ್ ಟಿಸಿಯಲ್ಲಿ ಒಬ್ಬರ ಹೆಸರು ಇದ್ದರೆ, ವಾಸ್ತವದಲ್ಲಿ ಆ ಜಾಗದಲ್ಲಿ ಬೇರೆಯವರಾರೊ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಇದನ್ನು ಶೀಘ್ರವೇ ಬಗೆಹರಿಸುವಂತೆ ಸೂಚಿಸಲಾಗಿದೆ ಎಂದು ಅವರು ನುಡಿದರು.

ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸತೀಶ್, ನೈರುತ್ಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ರಾಮಗೋಪಾಲ್, ರೈಲ್ವೆಯ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಮೂರ್ತಿ ರಾಜು, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News